ಹರಪನಹಳ್ಳಿ: ದಾವಣಗೆರೆ ಜಿಲ್ಲೆಯಿಂದ ಬೇರ್ಪಡಿಸಿ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿರುವ ಹಿನ್ನೆಲೆಯಲ್ಲಿ ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಯ ಪೊಲೀಸ್ ಉಪ ವಿಭಾಗಗಳನ್ನು ಮರು ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಡಗಲಿ ಉಪ-ವಿಭಾಗವನ್ನು ಕೈಬಿಟ್ಟು ಹರಪನಹಳ್ಳಿ ಪೊಲೀಸ್ ಉಪ ವಿಭಾಗವನ್ನಾಗಿ ಸೃಜಿಸಿ, ಇದಕ್ಕೆ ಹೊಂದಿಕೊಂಡಿರುವ ಹರಪನಹಳ್ಳಿ, ಅರಸೀಕೆರೆ, ಹಲುವಾಗಲು, ಚಿಗಟೇರಿ ಪೊಲೀಸ್ ಠಾಣೆಗಳನ್ನು ಮತ್ತು ಹಡಗಲಿ ಉಪವಿಭಾಗ ವ್ಯಾಪ್ತಿಯಲ್ಲಿರುವ ಹಡಗಲಿ, ಹಿರೇ ಹಡಗಲಿ, ಇಟಗಿ ಪೊಲೀಸ್ ಠಾಣೆ ಹಾಗೂ ಪ್ರಸ್ತುತ ಕೂಡ್ಲಿಗಿ ಉಪ ವಿಭಾಗದಲ್ಲಿರುವ ಕೊಟ್ಟೂರು ವೃತ್ತ ಕಚೇರಿ ಮತ್ತು ಅದಕ್ಕೆ ಸಂಬಂಧಿಸಿದ ಕೊಟ್ಟೂರು, ಹೊಸಹಳ್ಳಿ ಪೊಲೀಸ್ ಠಾಣೆಗಳನ್ನು ಸೇರಿಸಿ ಹರಪನಹಳ್ಳಿ ಉಪ ವಿಭಾಗವೆಂದು ರಚಿಸಲಾಗಿದೆ.
ಹಗರಿಬೊಮ್ಮನಹಳ್ಳಿ ವೃತ್ತ ಮತ್ತು ಅದಕ್ಕೆ ಸಂಬಂಧಿಸಿದ ಹಗರಿಬೊಮ್ಮನಹಳ್ಳಿ ಮತ್ತು ತಂಬ್ರಹಳ್ಳಿ ಪೊಲೀಸ್ ಠಾಣೆಗಳನ್ನು ಹೊಸಪೇಟೆ ವಿಭಾಗಕ್ಕೆ ಸೇರ್ಪಡೆ ಮತ್ತು ಕೂಡ್ಲಿಗಿ ವೃತ್ತ ಮತ್ತು ಸಂಡೂರು ವೃತ್ತ ಮತ್ತು ಅದಕ್ಕೆ ಸಂಬಂಧಿಸಿದ ಪೊಲೀಸ್ ಠಾಣೆಗಳನ್ನು ಕೂಡ್ಲಿಗಿ ಉಪ-ವಿಭಾಗದಲ್ಲಿಯೇ ಮುಂದುವರಿಸಿ ಆದೇಶ ಹೊರಡಿಸಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿರುವ ದಾವಣಗೆರೆ ಗ್ರಾಮಾಂತರ ಉಪ ವಿಭಾಗದಿಂದ ಚನ್ನಗಿರಿ ವೃತ್ತದ ಚನ್ನಗಿರಿ, ಸಂತೆಬೆನ್ನೂರು, ಬಸವಪಟ್ಟಣ ಪೊಲೀಸ್ ಠಾಣೆ, ಹೊನ್ನಾಳ್ಳಿ ವೃತ್ತದ ಹೊನ್ನಾಳ್ಳಿ, ನ್ಯಾಮತಿ ಪೋಲಿಸ್ ಠಾಣೆ ಸೇರ್ಪಡೆಗೊಳಿಸಿ ಚನ್ನಗಿರಿ ಉಪ-ವಿಭಾಗವೆಂದು ರಚಿಸಿ ಸದರಿ ಉಪವಿಭಾಗಕ್ಕೆ ಅವಶ್ಯಕವಿರುವ ಡಿವೈಎಸ್ಪಿ ಹುದ್ದೆಯನ್ನು ಬಳ್ಳಾರಿ ಜಿಲ್ಲೆಯ ಹಡಗಲಿ ಪೊಲೀಸ್ ಉಪ ವಿಭಾಗದಿಂದ ವರ್ಗಾಯಿಸಲಾಗಿದೆ. ಹರಪನಹಳ್ಳಿ ಉಪ ವಿಭಾಗದಿಂದ ಹರಪನಹಳ್ಳಿ ವೃತ್ತ ಮತ್ತು ಅದಕ್ಕೆ ಹೊಂದಿಕೊಂಡ ಪೊಲೀಸ್ ಠಾಣೆಗಳನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ನಂತರ ಉಳಿಯುವ ಜಗಳೂರು ವೃತ್ತದ ಜಗಳೂರು, ಬಿಳಿಚೋಡ್ ಪೊಲೀಸ್ ಠಾಣೆಗಳನ್ನು ದಾವಣಗೆರೆ ಗ್ರಾಮಾಂತರ ಉಪವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಒಳಾಡಳಿತ ಇಲಾಖೆಯ(ಪೊಲೀಸ್ ವೆಚ್ಚ) ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಎಸ್.ಗೋಪಾಲ್ ಆದೇಶ ಹೊರಡಿಸಿದ್ದಾರೆ.
ಹೋರಾಟದ ಪ್ರತಿಫಲ
ಹರಪನಹಳ್ಳಿ ಪೊಲೀಸ್ ಉಪವಿಭಾಗವನ್ನು ಇಲ್ಲಿಯಿಂದ ವರ್ಗಾಯಿಸದಂತೆ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಸೇರಿದಂತೆ ಅನೇಕರು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು. ಆದರೆ ಹರಪನಹಳ್ಳಿ ಉಪ ವಿಭಾಗ ಉಳಿಯುವುದರ ಜತೆಗೆ ಹಡಗಲಿ ತಾಲೂಕು ಕೂಡ ಇಲ್ಲಿಗೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಿರುವುದರಿಂದ ಉಪವಿಭಾಗದ ವ್ಯಾಪ್ತಿ ಕೂಡ ದೊಡ್ಡದಾಗಿದೆ. ಪೊಲೀಸ್ ಇಲಾಖೆಯಲ್ಲಿ ಸಿಂಹಪಾಲು ಪಡೆಯುವಲ್ಲಿ ಹರಪನಹಳ್ಳಿ ಯಶಸ್ವಿಯಾಗಿದೆ ಎಂದೇ ಹೇಳಬಹುದು.