ಹರಪನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಸಂಬಂಧಿತ ತೊಂದರೆಗಳ ನಿವಾರಣೆ 20 ಲಕ್ಷ ಕೋಟಿ ರೂ. ಪರಿಹಾರ ಘೋಷಣೆ ಮಾಡಿರುವುದು ಸ್ವಾಗತರ್ಹ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕತೆ ಸಬಲೀಕರಣದೊಂದಿಗೆ ಶ್ರೀಸಾಮಾನ್ಯರ ಪರವಾಗಿ ಸರ್ಕಾರ ನಿಂತಿದೆ. ಹಣಕಾಸು ಸಚಿವರು ಹಂತ ಹಂತವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸುಮಾರು 3 ಲಕ್ಷ ಕೋಟಿರೂ ನೀಡಿರುವುದು, ರೈತರಿಗೆ ಕಿಸಾನ್ ಕ್ರಿಡಿಟ್ ಕಾರ್ಡ್ ಮೂಲಕ 30 ಸಾವಿರ ಕೋಟಿರೂ ನೀಡುವುದು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಇಪಿಎಫ್ ಮೂಲಕ 2500 ಕೋಟಿ ರೂ. ವ್ಯಾಪಾರಿಗಳಿಗೆ, ಕಾರ್ಮಿಕರಿಗೆ ನೆರವು, ವಿದ್ಯುತ್ ಸರಬರಾಜು ಕಂಪನಿಗಳಿಗೆ 90 ಸಾವಿರ ಕೋಟಿ ರೂ ಸಹಾಯಧನ ಘೋಷಣೆ ಮಾಡಿದೆ. ಆದಾಯ ತೆರಿಗೆ ಪಾವತಿಗೆ ಕಾಲಾವಕಾಶ, ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ, ಕಂಪನಿ ಮತ್ತು ನೌಕರರ ಪಾಲಿನ ಹಣವನ್ನು ಕೇಂದ್ರ ಸರ್ಕಾರವೇ ಪಾವತಿಸಲಿದ್ದು, 72.5 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ. ನೌಕರರ ಪಿಎಫ್ ಪಾಲು ಶೇ.12 ರಿಂದ 10ಕ್ಕೆ ಇಳಿಸಲಾಗಿದೆ. ಇದರಲ್ಲದೇ 200 ಕೋಟಿ ರೂ. ವರೆಗೆ ಟೆಂಡರ್‌ನಲ್ಲಿ ವಿದೇಶಿ ಕಂಪನಿಗಳು ಭಾಗವಹಿಸುವಂತಿಲ್ಲ ಎಂಬ ನಿರ್ಧಾರ ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಮೀನುಗಾರಿಕೆ ಮತ್ತು ಪಶುಸಂಗೋಪನೆ ಇಲಾಖೆ ಕೂಡ ಕಿಸಾನ್ ಕ್ರಿಡಿಟ್ ಕಾರ್ಡ್ ವ್ಯಾಪ್ತಿಗೆ ತರಲಾಗಿದೆ. ವಲಸೆ ಕಾರ್ಮಿಕರಿಗೆ 2 ತಿಂಗಳ ಭತ್ಯೆ ಜೊತೆಗೆ ಮನೆ ಬಾಡಿಗೆ ಕೂಡ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರವೇ ಭರಿಸಲಿದೆ. ರಾಜ್ಯ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು ನಿರ್ಧರಿಸಿ ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ 15 ಸಾವಿರ ರೂ. ಪ್ರತಿ ಹೆಕ್ಟರ್‌ಗೆ ಘೋಷಣೆ ಮಾಡಿದ್ದಾರೆ. ಇದರಿಂದ 7 ತರಹದ ಹಣ್ಣು, 10 ತರಕಾರಿ ಬೆಳೆದ ರೈತರಿಗೆ ನೆರವಾಗಲಿದೆ. ಸವಿತಾ ಸಮಾಜ, ಟ್ಯಾಕ್ಸಿ, ಆಟೋ ಚಾಲಕರಿಗೆ 5 ಸಾವಿರ ರೂ ಘೋಷಣೆ ಮಾಡುವ ಮೂಲಕ ಜನಸಾಮನ್ಯರ ಪರವಾಗಿ ಸರ್ಕಾರ ನಿಂತಿದೆ ಎಂದು ತಿಳಿಸಿದರು.
ಮನೆ ನಿರ್ಮಾಣದ ಸಬ್ಸಡಿ ಹಣವನ್ನು ಮಾರ್ಚ್‌ವರೆಗೆ ವಿಸ್ತರಣೆ, ನಬಾರ್ಡ್ ರೈತರ ಸಾಲಕ್ಕಾಗಿ 2.30 ಲಕ್ಷ ಕೋಟಿ ರೂ. ಮೀಸಲಿರಿಸಲಾಗಿದೆ. ಇಡೀ ವಿಶ್ವವೇ ಕೊರೊನಾದಿಂದ ತತ್ತರಿಸಿದ್ದು, ಲಕ್ಷಾಂತರ ಜನರು ಸಾಯುತ್ತಿದ್ದಾರೆ. ಕಾರ್ಮಿಕರು ಅವರ ಊರುಗಳಿಗೆ ವಾಪಸ್ ಹೋಗುತ್ತಿದ್ದಾರೆ. ಕಾರ್ಮಿಕರು ಪುನಃ ಬಂದು ಕಾರ್ಖಾನೆಗಳು ಪ್ರಾರಂಭವಾದಾಗ ಮಾತ್ರ ದೇಶದ ಆರ್ಥಿಕತೆ ಸುಧಾರಿಸಲಿದೆ. ಕೊರೊನಾ ಕಂಟಕದಿಂದ ಪಾರಾಗಲು ಅನೇಕ ಘೋಷಣೆಗಳನ್ನು ಮಾಡುವ ಮೂಲಕ ರೈತರು, ಮಧ್ಯಮ ವರ್ಗ, ಕೈಗಾರಿಕೆಗಳಿಗೆ ಉತ್ತೇಜನ ನೀಡಿದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಕಾರ್ಯ ಶ್ಲಾಘನೀಯ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ತಾ.ಪಂ ಉಪಾಧ್ಯಕ್ಷ ಎಲ್. ಮಂಜ್ಯನಾಯ್ಕ, ಮುಖಂಡರಾದ ಆರ್.ಲೊಕೇಶ್, ಸಣ್ಣಹಾಲಪ್ಪ, ಬಾಗಳಿ ಕೊಟ್ರೇಶಪ್ಪ, ಎಂ.ಮಲ್ಲೇಶ್, ಕರೇಗೌಡ, ರಾಘವೇಂದ್ರಶೆಟ್ಟಿ, ಯು.ಪಿ.ನಾಗರಾಜ್ ಇತರರಿದ್ದರು.