ಹರಪನಹಳ್ಳಿ: ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಪಡೆದು ಚುನಾವಣೆಯಲ್ಲಿ ಗೆಲುವು ಪಡೆಯುವ ಮೂಲಕ ತಾಲೂಕಿನ ಅರಸೀಕೆರೆ ಗ್ರಾಮದ ವೈ.ದೇವೇಂದ್ರಪ್ಪ ಅವರು ಹರಪನಹಳ್ಳಿ ತಾಲೂಕಿನ ಪ್ರಥಮ ಸಂಸದ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
1997ರಲ್ಲಿ ರಚನೆಯಾದ ನೂತನ ಜಿಲ್ಲೆ ದಾವಣಗೆರೆಗೆ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲೂಕು ಬೇರ್ಪಡಿಸಿ ಸೇರಿಸಲಾಗಿತ್ತು. 2018ರಲ್ಲಿ ದಾವಣಗೆರೆ ಜಿಲ್ಲೆಯಿಂದ ಹರಪನಹಳ್ಳಿಯನ್ನು ಬೇರ್ಪಡಿಸಿ ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸಲಾಗಿದೆ. ಈ ಹಿಂದೆ ಬಳ್ಳಾರಿ ಕ್ಷೇತ್ರಕ್ಕೆ ತಾಲೂಕು ಇದ್ದಾಗ ಸಿಪಿಐ (ಎಂಎಲ್) ಲಿಬರೇಷನ್ ಪಕ್ಷದಿಂದ ಪಟ್ಟಣದ ನಿವಾಸಿ ಇದ್ಲಿ ರಾಮಪ್ಪ ಸ್ಪರ್ಧಿಸಿದ್ದರು. ಹರಪನಹಳ್ಳಿಯು ದಾವಣಗೆರೆ ಕ್ಷೇತ್ರಕ್ಕೆ ಸೇರಿದ್ದಾಗಲೂ ಅವರೇ ಅದೇ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಅವರನ್ನು ಹೊರತುಪಡಿಸಿದರೆ ಸ್ವತಂತ್ರ ಭಾರತದ ಸಾರ್ವತ್ರಿಕ ಚುನಾವಣೆಯ ಇತಿಹಾಸದಲ್ಲಿ ತಾಲೂಕಿನ ಯಾವೊಬ್ಬ ರಾಜಕೀಯ ನಾಯಕರಿಗೂ ರಾಷ್ಟ್ರೀಯ ಪಕ್ಷವೊಂದರ ಟಿಕೆಟ್ ನೀಡಿರಲಿಲ್ಲ.
2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಬಳ್ಳಾರಿ ಕ್ಷೇತ್ರದಿಂದ ಜಾರಕಿಹೊಳಿ ಕುಟುಂಬದ ಸಂಬಂಧಿಯಾಗಿರುವ ಅರಸೀಕೆರೆ ಗ್ರಾಮದ ವೈ.ದೇವೇಂದ್ರಪ್ಪ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿತ್ತು. ಜೆಡಿಎಸ್ ಪಕ್ಷದಿಂದ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ಅವರು, ಬಹುಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು, ಇದೀಗ ಬಿಜೆಪಿಯಿಂದ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದಾರೆ. ತಾಲೂಕಿನ ಹಲವಾಗಲು ಗ್ರಾಮದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್‌ರಂತಹ ನಾಯಕರನ್ನು ಕಂಡಿರುವ ಹರಪನಹಳ್ಳಿಗೆ ಸಂಸದರು ಆಯ್ಕೆಯಾಗಿರಲಿಲ್ಲ, ಇದೀಗ ವೈ.ದೇವೇಂದ್ರಪ್ಪ ಸಂಸದರನ್ನು ಪಡೆದ ಖ್ಯಾತಿ ಕೂಡ ಹರಪನಹಳ್ಳಿ ಪಡೆದುಕೊಂಡಂತಾಗಿದೆ.
ನೂತನ ಸಂಸದರಾಗಿರುವ ವೈ.ದೇವೇಂದ್ರಪ್ಪ ಅವರು ಕಳೆದ 6 ತಿಂಗಳ ಹಿಂದಷ್ಟೆ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷದ ಹೈಕಮಾಂಡ್ ವಿ.ಎಸ್.ಉಗ್ರಪ್ಪ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಮುನಿಸಿಕೊಂಡು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದರು. ನಂತರ ಎಂಪಿ ಚುನಾವಣೆ ವೇಳೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇವರ ಪತ್ನಿ ವೈ.ಡಿ.ಸುಶೀಲಮ್ಮ ಇದೀಗ ಬಳ್ಳಾರಿ ಜಿಪಂ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಪತಿ ಬಿಜೆಪಿ ಸಂಸದ, ಪತ್ನಿ ಕಾಂಗ್ರೆಸ್ ಜಿಪಂ ಸದಸ್ಯೆಯಾಗಿದ್ದು, ಒಂದೇ ಕುಟುಂಬದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಜನಪ್ರತಿನಿಧಿಗಳಿದ್ದಂತೆ ಆಗಿದೆ. ತಾಲೂಕಿನ ಮುಖಂಡರೊಬ್ಬರು ಸಂಸದರಾಗಿ ಆಯ್ಕೆಯಾಗಿರುವುದಕ್ಕೆ ಎಲ್ಲೆಡೆ ಹರ್ಷವ್ಯಕ್ತವಾಗುತ್ತಿದೆ.
1974 ರಿಂದಲೂ ಸಮಾಜ ಸೇವೆಯಲ್ಲಿದ್ದೇನೆ. ಈ ಹಿಂದೆ 1995ರಲ್ಲಿ ಬಳ್ಳಾರಿ ಜಿಪಂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ. ಪತ್ನಿ ಕೂಡ ಜಿಪಂ ಸದಸ್ಯರಾಗಿದ್ದಾರೆ. ಬಳ್ಳಾರಿ ಕ್ಷೇತ್ರದ ಜನರು ಹೊರಗಿನವರಿಗೆ ಮಣೆ ಹಾಕದೇ ಬಳ್ಳಾರಿ ಜಿಲ್ಲೆಯ ಮನೆ ಮಗನಿಗೆ ಆಶೀರ್ವಾದ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷ ಬಿಜೆಪಿ ನಾಯಕರು ನನ್ನನ್ನು ಗುರುತಿಸಿ ಟಿಕೆಟ್ ನೀಡಿ ಹರಪನಹಳ್ಳಿ ತಾಲೂಕಿನವರಿಗೆ ಜನ ಸೇವೆಗೆ ಮಾಡಲು ಅವಕಾಶ ಕಲ್ಪಿಸುವುದು ನನ್ನ ಪುಣ್ಯ. ನಾನು ಹರಪನಹಳ್ಳಿ ತಾಲೂಕಿನಿಂದ ಪ್ರಥಮ ಸಂಸದನಾಗಿ ಆಯ್ಕೆಯಾಗಿದ್ದು, ಹೆಮ್ಮೆಯಿದೆ.
•ವೈ.ದೇವೇಂದ್ರಪ್ಪ, ಬಳ್ಳಾರಿ ಸಂಸದ
ಎಸ್.ಎನ್.ಕುಮಾರ್ ಪುಣಬಗಟ್ಟಿ