ಹರಪನಹಳ್ಳಿ: ಕೋಲಶಾಂತೇಶ್ವರ ಮಠದ ನಿವೇಶನಕ್ಕೆ ಇ-ಸ್ವತ್ತು ನೀಡದಿರುವುದರನ್ನು ಖಂಡಿಸಿ ಹಾಗೂ ಅರಸೀಕೆರೆ ಗ್ರಾಮದ 3 ಮತ್ತು 1ನೇ ವಾರ್ಡಿಗೆ ಸಮರ್ಪಕ ಕುಡಿಯುವ ನೀರು, ಚರಂಡಿ ಸ್ವಚ್ಛತೆಗೆ ಆಗ್ರಹಿಸಿ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಅರಸೀಕೆರೆ ಗ್ರಾಪಂ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ಮಾಡಿದರು.
ಕಳೆದ ತಿಂಗಳಿನಿಂದ ಸರಿಯಾಗಿ ಕುಡಿಯಲು ನೀರು ಬಿಡುತ್ತಿಲ್ಲ. ಬೇಸಿಗೆ ಬಿಸಿಲು ಹೆಚ್ಚಾಗಿರುವುದರಿಂದ ಪ್ರತಿಯೊಂದಕ್ಕೂ ನೀರು ಅವಶ್ಯಕವಾಗಿದೆ. ಹೀಗಾಗಿ ಜನರು ನೀರಿಗಾಗಿ ಪರದಾಟ ನಡೆಸುವಂತಾಗಿದೆ. ಗ್ರಾಪಂನವರು ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಅಭಿವೃದ್ಧಿ ಕೆಲಸಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಕೇಳಿದರೆ ಪಂಚಾಯಿತಿಯಲ್ಲಿ ಹಣವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಕೂಡಲೇ ಪಿಡಿಒ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠಕ್ಕೆ ಸೇರಿದ ಖಾಲಿ ನಿವೇಶವನ್ನು ಇ-ಸ್ವತ್ತಿಗೆ ಸೇರ್ಪಡೆಗೊಳಿಸಿ ದಾಖಲೆ ನೀಡಲು ಕಳೆದ ಆರು ತಿಂಗಳಿಂದ ಅಧಿಕಾರಿಗಳು ಸತ್ತಾಯಿಸುತ್ತಿದ್ದಾರೆ. ಕೇಳಿದರೆ ಇಂದು ನಾಳೆ ಎತ್ತುತ್ತಾ ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರಿಗಳ ನಡೆ ಬೇಸರ ತರಿಸಿದೆ. ಗ್ರಾಮದ ಕೆಲವು ವಾರ್ಡ್‌ಗಳಲ್ಲಿ 15 ದಿನಗಳ ಕುಡಿಯಲು ನೀರು ಬಿಟ್ಟಿಲ್ಲ. ಇದರಿಂದ ಬಾಣಂತಿಯರು ಹಸುಗೂಸುಗಳಿಗೆ ನೀರು ಹಾಕದಂತ ಪರಿಸ್ಥಿತಿ ಎದುರಾಗಿದೆ. ಇದರಿಂದ ಮನಸ್ಸಿಗೆ ನೀವಾಗಿ ನಾನೇ ಇವತ್ತು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಯಿತು. ಮೇಲಾಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಕೋಲುಶಾಂತೇಶ್ವರ ಮಠದ ಪಿಠಾಧ್ಯಕ್ಷರಾದ ಅರಸೀಕೆರೆ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಪಂ ಕಾರ್ಯನಿರ್ವಾಹಣಾಧಿಕಾರಿ ಪಿ.ಎಸ್. ಅನಂತರಾಜ್ ಅವರು ಪ್ರತಿಭಟನಾನಿರತ ಗ್ರಾಮಸ್ಥರನ್ನು ಮನವೊಲಿಸಿದರು. ವಾರ್ಡ್‌ಗಳಿಗೆ ಭೇಟಿ ಜನರ ಅಹವಾಲು ಆಲಿಸಿದರು. ನಿವಾಸಿಗಳ ಬೇಡಿಕೆಯಂತೆ ಕೂಡಲೇ ಕುಡಿಯುವ ನೀರಿನ ಸಮಸ್ಯೆ ಹಾಗೂ ಚರಂಡಿ ಸ್ವತ್ಛತೆ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.
ದುರಸ್ತಿಯಲ್ಲಿರುವ ಬೋರ್‌ವೆಲ್ ಗಳ ಸ್ಥಳ ಪರಿಶೀಲನೆ ನಡೆಸಿ ಕೂಡಲೇ ದುರಸ್ತಿ ಮಾಡಿಸುವಂತೆ ಪಿಡಿಓ ಹುಸೇನ್‌ಸಾಬ್ ಅವರಿಗೆ ಸೂಚನೆ ನೀಡಿದರು.
ಪ್ರತಿಭಟನೆಯಲ್ಲಿ ಕೋಲುಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಮುಖಂಡರಾದ ಸಲಾಂ ಸಾಹೇಬ್, ಷಣ್ಮುಖಪ್ಪ, ಅಜೀಮ್ ಸಾಹೇಬ್, ಪಾಂಡಪ್ಪ, ಮಂಜುನಾಥ್, ರಹಮತುಲ್ಲಾ, ಮಂಜುನಾಥಗೌಡ, ಪರುಸಪ್ಪ, ಶರೀಫ್ ಹಾಗೂ ಗ್ರಾಮಸ್ಥರು ಮಹಿಳೆಯರು ಭಾಗವಹಿಸಿದ್ದರು.
ಸದಸ್ಯತ್ವ ಕ್ಕೆ ರಾಜೀನಾಮೆ
ಕೊರೊನಾ ವೈರಸ್ ಹಾವಳಿಯಿಂದ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ. ಆದರೆ ಗ್ರಾಮದಲ್ಲಿ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಮತ್ತೊಂದೆಡೆ ಪಿಡಿಓ ಮತ್ತು ಅಧ್ಯಕ್ಷರ ನಡುವೆ ಹೊಂದಾಣಿಕೆ ಕೊರತೆಯಿಂದ ಮೂಲಭೂತ ಸೌಕರ್ಯಗಳು ಹಾಗೂ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಯಾವುದೇ ಸದಸ್ಯರನ್ನು ವಿಶ್ವಾಸಕ್ಕೆ ತೆಗದುಕೊಳ್ಳದೇ ದುರಾಡಳಿತ ನಡೆಸುತ್ತಿದ್ದಾರೆ. ಇದರಿಂದ ಬೇಸತ್ತು ಮಾ. 20ರಂದು ಗ್ರಾಮ ಪಂಚಾಯ್ತಿಯ ನನ್ನ ಸದಸ್ಯತ್ವ ಸ್ಥಾನಕ್ಕೆ ಪಿಡಿಒ ಅವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ.
ವೈ.ಡಿ. ಅಣ್ಣಪ್ಪ,
ಗ್ರಾಪಂ ಸದಸ್ಯ