Advertisement

ಸದಸ್ಯರ ರಾಜೀನಾಮೆ ಬೆದರಿಕೆ

05:55 PM Dec 07, 2019 | Naveen |

ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಪಂನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಚುನಾಯಿತ ಸದಸ್ಯರು ರಾಜೀನಾಮೆಗೆ ಮುಂದಾದ ಘಟನೆ ನಡೆದಿದೆ.

Advertisement

ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ , ಅಭಿವೃದ್ಧಿ ಅಧಿಕಾರಿ ಮಹಮ್ಮದ್‌ ಹುಸೇನ್‌ ಅವರ ಸರ್ವಾಧಿಕಾರಿ ಧೋರಣೆ ಬಿಡಬೇಕು ಎಂದು ಆಕ್ಷೇಪಿಸಿ ತಾಪಂ ಇಒಗೆ ಘೇರಾವ್‌ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂನಲ್ಲಿ ಒಟ್ಟು 16 ಜನ ಸದಸ್ಯರುಗಳಿದ್ದು ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಪಂದಿಸುತ್ತಿಲ್ಲ. ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಅವರ ತವರು ಗ್ರಾಮವಾಗಿದ್ದರೂ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. 6 ವಾರ್ಡ್‌ಗಳ ಕುಡಿಯುವ ನೀರಿನ ಕೊಳವೆ ಪೈಪ್‌ಗ್ಳು ಒಡೆದು ಚರಂಡಿ ನೀರು ಸೇರ್ಪಡೆಗೊಳ್ಳುತ್ತಿದ್ದರೂ ದುರಸ್ತಿ ಕಾಮಗಾರಿ ಕೈಗೊಳ್ಳಲು ಸಹಕಾರ ನೀಡುತ್ತಿಲ್ಲ. ಸಣ್ಣ ಪುಟ್ಟ ಕಾಮಗಾರಿಗೆ ಬಳಸಿದ ವೆಚ್ಚವನ್ನು ಭರಿಸದೆ ಕಾಲಹರಣ ಮಾಡುತ್ತಿರುವ ಪಿಡಿಒ ವಿರುದ್ಧ ಆಕ್ರೋಶಗೊಂಡ ಸದಸ್ಯರು ಕಾರ್ಯ ನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದರು.

ಸದಸ್ಯರ ಸಮಸ್ಯೆ ಆಲಿಸಿದ ಕಾರ್ಯನಿರ್ವಹಣಾಧಿಕಾರಿ ಅನಂತರಾಜ್‌ ನೇತೃತ್ವದಲ್ಲಿ ಸಭೆ ನಡೆಯಿತು. ಅಧ್ಯಕ್ಷೆ, ಪಿಡಿಒ ಹಾಗೂ ಕಂಪ್ಯೂಟರ್‌ ಆಪರೇಟರ್‌ ಕವಿತಾ ಅವರು 2019-20 ರಲ್ಲಿ ಉದ್ಯೋಗ ಖಾತರಿ ಯೋಜನೆ ಯಡಿಯಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ 6.20 ಲಕ್ಷ ರೂ. ಆತ್ಮೀಯರ ಹೆಸರಲ್ಲಿ ಪಾವತಿ ಮಾಡಿಕೊಂಡಿದ್ದಾರೆ.

ಬಸವನಕೋಟೆ ಮುಖ್ಯರಸ್ತೆಯಿಂದ ಕಡೆಮನೆ ಹಾಲಪ್ಪ ಮನೆಯವರೆಗೆ ಸಿ.ಸಿ ರಸ್ತೆ, ಹೊಲದ ಬದು ನಿರ್ಮಾಣ ಕಾಮಗಾರಿಗಳಲ್ಲಿ ಪರ್ಯಾಯ ಫೋಟೋಗಳನ್ನು ಬಳಸಿ ವಂಚಿಸಿದ್ದಾರೆ ಎಂದು ಸದಸ್ಯರು ದೂರಿದರು. ಪಿಡಿಒ ಬಂದು 8 ತಿಂಗಳ ಅವ ಧಿಯಲ್ಲಿ ಕೇವಲ ಒಂದು ಗ್ರಾಮ ಸಭೆ ನಡೆಸಿದ್ದಾರೆ. ಪಂಚಾಯಿತಿ ನಿಯಮಗಳನ್ನು ಗಾಳಿಗೆ ತೂರಿ, ಸದಸ್ಯರ ಗಮನಕ್ಕೆ ತರದೆ ಕಾಮಗಾರಿ ರೂಪುರೇಷೆ ತಯಾರಿಸಲಾಗಿದೆ ಎಂದು ಆರೋಪಿಸಿದ ಸದಸ್ಯೆ ಮಾಳಿಗೇರ್‌ ರೇಣುಕಾ ಹಾಗೂ ಎಂ. ಮಧು ರಾಜೀನಾಮೆ ಪತ್ರವನ್ನು ಅಧ್ಯಕ್ಷರಿಗೆ ಸಲ್ಲಿಸಿದರು.

ಇಒ ಅನಂತರಾಜ್‌, “ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿರುವ ಕುರಿತು ಮೇಲ್ನೋಟಕ್ಕೆ ಕಂಡು ಬಂದಿದೆ. ಸೂಕ್ತ ದಾಖಲೆ ಒದಗಿಸಲು ಸೂಚಿಸಿ, ನೆರೇಗಾ ಯೋಜನೆ ಕುರಿತು ಎರಡು ದಿನಗಳಲ್ಲಿ ಸಮಿತಿ ರಚಿಸಿ ತನಿಖೆ ಕೈಗೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

Advertisement

ಒಂದು ವರ್ಷದ ವಿದ್ಯುತ್‌ ಲೈಟ್‌, ಪರಿಕರಗಳನ್ನು ನಿರ್ವಹಣೆ ಮಾಡಿದ ಬಿಲ್‌ ಗಳನ್ನು ಪಾವತಿ ಮಾಡದೆ, ಪ್ರತ್ಯೇಕ ಬಿಲ್‌ ಸೃಷ್ಟಿಸಿ ಪಾವತಿ ಮಾಡಿದ್ದಾರೆ ಎಂದು ಸದಸ್ಯ ಮಂಜುನಾಥಗೌಡ ಆಕ್ರೋಶ ವ್ಯಕ್ತಪಡಿಸಿದರೆ ಬರಗಾಲದ ಅವಧಿಯಲ್ಲಿ ದೈವತ್ವದ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡಲಾಗಿತ್ತು. 3 ವರ್ಷದ ಹಿಂದಿನ ಬಿಲ್‌ ಪಾವತಿಸಬೇಕು ಎಂದು ಮಾಜಿ ಅಧ್ಯಕ್ಷ ಸಲಾಂ ಸಾಬ್‌ ಒತ್ತಾಯಿಸಿದರು. ಪಿಡಿಒ ಮಹ್ಮದ್‌ ಹುಸೇನ್‌ ಅವರು, ಪಂಚಾಯಿತಿ ಆಡಳಿತ ಅವಧಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸೂಕ್ತ ದಾಖಲೆಗಳನ್ನು ಸಂಬಂಧಿಸಿದ ಅಧಿ ಕಾರಿಗಳಿಗೆ ಸಲ್ಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸದಸ್ಯರಾದ ವೈ.ಡಿ.ಅಣ್ಣಪ್ಪ, ಎ.ಬಿ.ಮಂಜುನಾಥಗೌಡ, ಪರಸಪ್ಪ, ಯೋಗೇಶ್‌, ಹಾದಿಮನೆ ನಾಗರಾಜ್‌, ಸಿದ್ದಪ್ಪ, ಬಸಪ್ಪ, ಮುಖಂಡರಾದ ಮಾಜಿ ಅಧ್ಯಕ್ಷ ಸಲಾಮ್‌ ಸಾಬ್‌, ನಜೀರ್‌ ಸಾಬ್‌, ಪರಶುರಾಮ, ಷಣ್ಮುಖಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next