ಮಡಿಕೇರಿ : ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣ ಹಾರಂಗಿ ಜಲಾಶಯದ ಬಲ ದಂಡೆಯ ಮೇಲಿನ 40 ಎಕ್ರೆ ಪ್ರದೇಶದಲ್ಲಿ ನಿರ್ಮಿಸಿರುವ ವೃಕ್ಷೋದ್ಯಾನ ಮತ್ತು ಸಾಕಾನೆಗಳ ನೂತನ ಶಿಬಿರವನ್ನು ಉದ್ಘಾಟಿಸಲಾಯಿತು.
ಯೋಜನೆಗಳನ್ನು ಉದ್ಘಾಟಿಸಿದ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಹಾರಂಗಿಯಲ್ಲಿ ಸಾಕಾನೆ ಶಿಬಿರ ಆರಂಭಿಸಲಾಗಿದೆ. ಹಸುರಿದ್ದರೆ ಮಾತ್ರ ಉಸಿರು, ಹಾಗಾಗಿ ಅರಣ್ಯ ಇಲಾಖೆ ಎಲ್ಲೆಡೆಗಳಲ್ಲಿ ಟ್ರೀ ಪಾರ್ಕ್ ನಿರ್ಮಿಸುತ್ತಿದೆ. ಆನೆ ಸಫಾರಿ ಮೊದಲಾದ ಚಟುವಟಿಕೆಗಳನ್ನು ಹಂತ ಹಂತವಾಗಿ ತೆರೆಯಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ್ ಮಾತನಾಡಿ, ಮೈಸೂರು ಹಾಗೂ ಹಾಸನ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಈ ಸ್ಥಳ ಪ್ರಮುಖ ಪ್ರವಾಸಿ ತಾಣವಾಗಲಿದೆ ಎಂದು ಹೇಳಿದರು.
ದುಬಾರೆ ಮತ್ತು ಮತ್ತಿಗೋಡು ಸಾಕಾನೆಗಳ ಶಿಬಿರಗಳ ಸಾಲಿನಲ್ಲಿ ಮೂರನೆ ಶಿಬಿರ ಇದಾಗಿದೆ. ದುಬಾರೆ ಶಿಬಿರದಲ್ಲಿ ಆನೆಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಒತ್ತಡ ಹಾಗೂ ನಿರ್ವಹಣೆ ಸಮಸ್ಯೆಯಿಂದ ಹೊಸ ಶಿಬಿರ ಆರಂಭಿಸಲಾಗಿದ್ದು, ಹಾರಂಗಿ ಜಲಾಶಯದ ಬಲಭಾಗದ ಅರಣ್ಯ ಇಲಾಖೆಗೆ ಸೇರಿದ ಟ್ರೀಪಾರ್ಕ್‌ಗೆ ಹೊಂದಿಕೊಂಡಿರುವ 10 ಎಕ್ರೆ ಶಿಬಿರ ನಿರ್ಮಿಸಲು ಸರಕಾರ 50 ಲಕ್ಷ ರೂ. ಅನುದಾನ ಒದಗಿಸಿತ್ತು. ದುಬಾರೆಯಲ್ಲಿ ಒಟ್ಟು 32 ಸಾಕಾನೆಗಳಿದ್ದು, 15 ಆನೆಗಳನ್ನು ಹಾರಂಗಿಗೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ದಸರಾದಲ್ಲಿ ಪಾಲ್ಗೊಂಡಿರುವ ವಿಜಯ ಆನೆ ಹೊಸ ಶಿಬಿರ ಸೇರಲಿದೆ. ಮಾವುತರು, ಕಾವಾಡಿಗರಿಗೆ 4 ವಸತಿಗೃಹ ನಿರ್ಮಿಸಲಾಗಿದ್ದು, 4 ಮನೆಗಳು ನಿರ್ಮಾಣ ಹಂತದಲ್ಲಿವೆ. ಪ್ರವಾಸಿಗರಿಗೆ 30 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗುವುದು. ಹಾರಂಗಿ ಹಿನ್ನೀರಿನಲ್ಲಿ 2 ಪೆಡಲ್ ಬೋಟ್‌ಗಳಿದ್ದು, ಬೋಟಿಂಗ್ ಮಾಡಲು ಪ್ರತ್ಯೇಕವಾಗಿ ಒಬ್ಬರಿಗೆ 50 ರೂ. ನಿಗದಿಪಡಿಸುವ ಯೋಜನೆ ಸಿದ್ಧಗೊಂಡಿದೆ.
ಇದನ್ನೂ ಓದಿ :ಅಂದುಕೊಂಡತೆ ನಡೆದರೆ ಈ ತಿಂಗಳು ಮಂಡ್ಯಕ್ಕೆ ಬರಲಿದ್ದಾರೆ ಯು.ಪಿ. ಸಿ.ಎಂ.