ಮುಜಾಫರ್ ನಗರ: ಹರ ಹರ ಶಂಭು… ಗೀತೆಯನ್ನು ಸುಮಧುರವಾಗಿ ಹಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನ ಸೆಳೆದಿರುವ ಉತ್ತರ ಪ್ರದೇಶದ ಖ್ಯಾತ ಯೂಟ್ಯೂಬ್ ಗಾಯಕಿ ಫರ್ಮಾನಿ ನಾಜ್ ಅವರ ಸೋದರ ಸಂಬಂಧಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮೃತನನ್ನು ಮುಜಾಫರ್‌ನಗರದ ಖುರ್ಷಿದ್ ಎಂದು ಗುರುತಿಸಲಾಗಿದೆ ಈತ ಗಾಯಕಿ ಫರ್ಮಾನಿ ನಾಜ್ ಅವರ ಸೋದರ ಸಂಬಂಧಿ.
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ರವಿವಾರ ಘಟನೆ ನಡೆದಿದ್ದು ಬೈಕ್‌ನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಖುರ್ಷಿದ್ ನನ್ನು ಮನಬಂದಂತೆ ಚಾಕುವಿನಿಂದ ಇರಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ವಿಚಾರ ತಿಳಿದ ಸ್ಥಳೀಯರು ಯುವಕನ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಗಂಭೀರ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ಘಟನೆಗೆ ಸಂಬಂಧಿಸಿ ಯುವಕನ ಪೋಷಕರು ರತನ್‌ಪುರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
2022ರಲ್ಲಿ ಫರ್ಮಾನಿ ನಾಜ್ ಅವರು ಹಾಡಿದ ಹರ ಹರ ಶಂಭು ಹಾಡಿನಿಂದ ರಾತ್ರೋರಾತ್ರಿ ನಾಜ್ ಪ್ರಖ್ಯಾತಿ ಗಳಿಸಿದರು. ಎಲ್ಲಿ ನೋಡಿದರೂ ನಾಜ್ ಅವರ ಧ್ವನಿಯೇ ಕೇಳುವಷ್ಟು ಈ ಹಾಡು ಭಾರೀ ವೀಕ್ಷಣೆಗಳನ್ನು ಕಂಡು ವೈರಲ್ ಆಗಿತ್ತು. ಕೊನೆಗೆ ನಾಜ್ ಅವರು ಹಾಡಿದ ಈ ಹಾಡು ಕಾಪಿರೈಟ್ ವಿವಾದಕ್ಕೆ ಸಿಲುಕಿತು. ಇನ್ನೊಬ್ಬ ಗಾಯಕ ಜೀತು ಶರ್ಮ ಈ ಹಾಡು ತನ್ನದು ಎಂದು ಹೇಳಿಕೊಂಡಿದ್ದು, ನಾಜ್ ಹಾಡನ್ನು ಕದ್ದಿದ್ದಾರೆ ಎಂದು ಆರೋಪವೂ ಕೇಳಿಬಂದಿತ್ತು ಬಳಿಕ ನಾಜ್ ಅವರು ತಮ್ಮ ಯೂಟ್ಯೂಬ್ನಿಂದ ಹಾಡನ್ನು ಡಿಲೀಟ್ ಮಾಡಬೇಕಾಯಿತು.
ಇದಾದ ಬಳಿಕ ಆಕೆ ಹಾಡಿರುವ ಹಾಡುಗಳಿಗೆ ಸಮುದಾಯದಿಂದ ತುಂಬಾ ವಿರೋಧವೂ ವ್ಯಕ್ತವಾಗಿತ್ತು ಯಾಕೆಂದರೆ ಆಕೆ ಹಾಡಿರುವುದು ಹಿಂದೂ ಭಜನೆಯ ಹಾಡು ಹಾಗಾಗಿ ಸಮುದಾಯದಲ್ಲಿ ಇದಕ್ಕೆ ತುಂಬಾ ವಿರೋಧವೂ ವ್ಯಕ್ತವಾಗಿತ್ತು.
ಇದನ್ನೂ ಓದಿ: Job Opportunity: ಹಣಕಾಸು ಸಚಿವಾಲಯ, ಎನ್ ಇಎಸ್ ಟಿಎಸ್ ನಲ್ಲಿ ಹಲವು ಉದ್ಯೋಗಾವಕಾಶ