Advertisement

ಹರ್‌ ಘರ್‌ ತಿರಂಗಾ ಅಭಿಯಾನ : ಮಕ್ಕಳಿಂದ ಪಾಲಕ, ಪೋಷಕರಿಗೆ ಪತ್ರ!

03:58 PM Aug 10, 2022 | Team Udayavani |

ಉಡುಪಿ/ಮಂಗಳೂರು : ಹರ್‌ ಘರ್‌ ತಿರಂಗಾ ಕಾರ್ಯ ಕ್ರಮದ ಕುರಿತು ಪಾಲಕ, ಪೋಷಕರಿಗೂ ಮಾಹಿತಿ ನೀಡಲು ಶಾಲೆ, ಕಾಲೇಜಿನ ವಿದ್ಯಾರ್ಥಿಗಳಿಂದ ಪತ್ರ ಅಭಿಯಾನ ನಡೆಸಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ.

Advertisement

ಆಗಸ್ಟ್‌ 13ರಿಂದ 15ರ ವರೆಗೆ ನಡೆಯಲಿರುವ ಹರ್‌ ಘರ್‌ ತಿರಂಗಾ ಕಾರ್ಯಕ್ರಮಕ್ಕೆ ಜಿಲ್ಲಾಡ ಳಿತ, ಜಿ.ಪಂ.ನಿಂದ ಎಲ್ಲ ರೀತಿಯ ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಗ್ರಾ.ಪಂ. ಜಿಲ್ಲಾಡಳಿತ ಕಚೇರಿ, ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜ ಮಾರಾಟ ಆರಂಭಗೊಂಡಿದೆ. ಖರೀದಿ ಪ್ರಕ್ರಿಯೆಯೂ ಭರದಿಂದಲೇ ಸಾಗುತ್ತಿದೆ.

ಪತ್ರದ ಜತೆ ಕರಪತ್ರ
ವಿದ್ಯಾರ್ಥಿಗಳು ಪಾಲಕ, ಪೋಷಕರಿಗೆ ಹರ್‌ಘರ್‌ ತಿರಂಗಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬರೆಯುವ ಪತ್ರದ ಜತೆಗೆ ಜಿಲ್ಲಾಡಳಿತದಿಂದ ಸಿದ್ಧ ಪಡಿಸಿರುವ ಕರಪತ್ರವೊಂದನ್ನು ನೀಡಲಾಗುತ್ತದೆ. ಮುದ್ರಣ ಕಾರ್ಯ ಪೂರ್ಣಗೊಂಡಿದ್ದು, ವಲಯ ವಾರು ಕ್ಷೇತ್ರಶಿಕ್ಷಣಾಧಿಕಾರಿಗಳ ಮುಖೇನ ಶಾಲೆಗಳಿಗೆ ತಲುಪಿಸಿ ಪ್ರತೀ ವಿದ್ಯಾರ್ಥಿಗೂ ನೀಡಲಾಗುತ್ತದೆ. ಪತ್ರದ ಜತೆಗೆ ಕರಪತ್ರವನ್ನು ಪಾಲಕ, ಪೋಷಕರಿಗೆ ಮಕ್ಕಳು ನೀಡಲಿದ್ದಾರೆ.

ಕರಪತ್ರದಲ್ಲಿ ಏನಿದೆ?
ಕರಪತ್ರದ ಒಂದು ಭಾಗದಲ್ಲಿ ಹರ್‌ಘರ್‌ ತಿರಂಗಾ ಅಭಿಯಾನದ ಪರಿಚಯ, ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ಮಾಹಿತಿ, ಧ್ವಜಾರೋಹಣ ಹೇಗೆ ಮತ್ತು ಧ್ವಜ ಮಹತ್ವ, ಹರಿದಿರುವ ಅಥವಾ ಹಾಳಾಗಿರುವ ಧ್ವಜ ಹಾರಿಸಬಾರದು, ಧ್ವಜ ನೆಲಕ್ಕೆ ತಾಗದಂತೆ ಎಚ್ಚರವಹಿಸಬೇಕು, ಕೇಸರಿ ಬಣ್ಣ ಮೇಲಿರಬೇಕು. ಈ ಅಭಿಯಾನದ 3 ದಿನ ರಾತ್ರಿಯೂ ಧ್ವಜ ಹಾರಿಸಲು ಅವಕಾಶವಿದೆ. ಸಂಭ್ರಮಾಚರಣೆ ಮುಗಿದ ಅನಂತರ ಧ್ವಜವನ್ನು ಗೌರವ ಪೂರ್ವಕವಾಗಿ ಸುರಕ್ಷಿತವಾಗಿ ಇಡಬೇಕು ಎಂಬ ಮಾಹಿತಿ ಕರಪತ್ರದ ಒಂದು ಭಾಗದಲ್ಲಿದೆ. ಇನ್ನೊಂದು ಭಾಗದಲ್ಲಿ ಸ್ವತ್ಛ ಭಾರತ್‌ ಮಿಷನ್‌ಗೆ ಸಂಬಂಧಿಸಿದ ವಿವರ ನೀಡಲಾಗಿದೆ.

ಮನೆ ಮನೆಯಲ್ಲೂ ರಾರಾಜಿಸಲಿ ರಾಷ್ಟ್ರಧ್ವಜ
ರಾಷ್ಟ್ರಧ್ವಜ ಬರಿಯ ಬಟ್ಟೆಯಲ್ಲ. ಅದು ನಮ್ಮೆಲ್ಲರ ಆತ್ಮಗೌರವದ ಪ್ರತೀಕ. ನಮ್ಮ ಕರ್ತವ್ಯಗಳನ್ನು, ದೇಶದ ಕುರಿತು ಹೆಮ್ಮೆ ಮತ್ತು ಗೌರವದ ಭಾವವನ್ನು ಮೂಡಿಸುವ ಸಂಕೇತವಾಗಿದೆ. ಇದನ್ನು ಮೂರು ದಿನಗಳ ಕಾಲ ನಮ್ಮ ಮನೆ ಮೇಲೂ ಹಾರಿಸಬೇಕು. ನೆರೆಕರೆಯವರಿಗೂ ತಿಳಿಸಬೇಕು ಎನ್ನುವ ಮಾಹಿತಿಯನ್ನು ಪತ್ರದಲ್ಲಿ ಉಲ್ಲೇಖೀಸಿ ಪಾಲಕ, ಪೋಷಕರಿಗೆ ಮಕ್ಕಳು ಪತ್ರ ಬರೆಯಲಿದ್ದಾರೆ.

Advertisement

ಹರ್‌ ಘರ್‌ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ ಮಕ್ಕಳ ಮೂಲಕ ಪಾಲಕ, ಪೋಷಕರಿಗೆ ರಾಷ್ಟ್ರಧ್ವಜಾರೋಹಣ ಮತ್ತು ಅದರ ಮಹತ್ವದ ಬಗ್ಗೆ ತಿಳಿಸಲು ಪತ್ರ ಅಭಿಯಾನ ಶಾಲೆಗಳಲ್ಲಿ ನಡೆಸಲಿದ್ದೇವೆ.
– ಶಿವರಾಜ್‌, ಡಿಡಿಪಿಐ ಉಡುಪಿ

ಹರ್‌ಘರ್‌ ತಿರಂಗಾ ಹೇಗೆ ನಡೆಯಬೇಕು ಎಂಬ ಬಗ್ಗೆ ಈಗಾಗಲೇ ಮಕ್ಕಳಿಗೆ ಮಾಹಿತಿ ನೀಡಲು ಶಿಕ್ಷಕರಿಗೆ ತರಬೇತಿ ಕೊಡಲಾಗಿದೆ. ಸಂಬಂಧ ಪಟ್ಟ ವಿವರಗಳನ್ನು ಮಕ್ಕಳ ನೋಟ್‌ಪುಸ್ತಕದಲ್ಲಿ ಬರೆಸಿ ಪಾಲಕರಿಗೆ ರವಾನಿಸಲಾಗುವುದು.
– ಸುಧಾಕರ್‌, ಡಿಡಿಪಿಐ, ದಕ್ಷಿಣ ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next