ಕಲಬುರಗಿ: ನಗರದ ಜಗತ್ ವೃತ್ತದ ಬಳಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಯುನೈಟೆಡ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಸೋಮವಾರ ಬೆಳಗ್ಗೆ ಸೈಕಲ್ ಮ್ಯಾರಾಥಾನ್ ಹಮ್ಮಿಕೊಳ್ಳಲಾಯಿತು.
ನಗರದ ಜಗತ್ ವೃತ್ತದಿಂದ ಆರಂಭವಾದ ಸೈಕಲ್ ಮ್ಯಾರಾಥಾನ್‍ಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಮ್ಯಾರಾಥಾನ್ ಜಗತ್ ವೃತ್ತದಿಂದ ಆರಂಭವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಕೋರ್ಟ್ ರಸ್ತೆ, ಆನಂದ ಹೋಟೆಲ್, ಗೋವಾ ಹೋಟೆಲ್ ಮಾರ್ಗವಾಗಿ ಮಹಾನಗರ ಪಾಲಿಕೆಗೆ ಬಂದು ಸಂಪನ್ನಗೊಂಡಿತ್ತು.
ಡಿ.ಸಿ. ಯಶವಂತ ವಿ ಗುರುಕರ್, ಜಿಲ್ಲಾ ಪಂಚಾಯತ್ ಸಿಇಓ ಡಾ. ಗಿರೀಶ್ ಡಿ. ಬದೋಲೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ವಾರ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಕಲಬುರಗಿ ಸೈಕ್ಲಿಸ್ಟ್ ಕ್ಲಬ್ ಅಧ್ಯಕ್ಷ ಈರಣ್ಣಾ ಶೆಟಕಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸೈಕ್ಲಿಷ್ಟಗಳು ಸೈಕಲ್ ಓಡಿಸುವ ಮೂಲಕ ಪ್ರತಿ ಮನೆ ಮನೆಯಲ್ಲು ರಾಷ್ಟ್ರಧ್ವಜ ಹಾರಾಟಕ್ಕೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿ, ದೇಶ ಸ್ವಾತಂತ್ರ್ಯಗೊಂಡು 75 ವರ್ಷಗಳನ್ನು ಕಳೆದು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆ ಸೈಕಲ್ ಮ್ಯಾರಾಥಾನ್ ಆಯೋಜಿಸಲಾಗಿದೆ. ಅರೋಗ್ಯದ ಕಾಳಜಿಗೆ ಸೈಕ್ಲಿಂಗ್ ಅವಶ್ಯಕವಾಗಿದೆ. ಯುವಕರು ಸೈಕಲ್ ಓಡಿಸಲು ಪ್ರೇರಣೆಗಾಗಿ ಈ ಮ್ಯಾರಾಥಾನ್ ಜಾಥಾ ಆಯೋಜಿಸಿದೆ ಎಂದರು.
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ಮಾತನಾಡಿ, ಜನರಲ್ಲಿ ದೇಶಭಕ್ತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಸೈಕ್ಲೋಥಾನ್ ಸಹಾಯಕವಾಗಲಿದೆ ಎಂದರು.
ಮ್ಯಾರಾಥಾನ್‍ನಲ್ಲಿ ಕಲಬುರಗಿ ಸೈಕ್ಲಿಸ್ಟ್ ಕ್ಲಬ್ ಸದಸ್ಯರು, ಶರಣಬಸವ ವಿಶ್ವವಿದ್ಯಾಲಯ, ಯುನೈಟೆಡ್ ಹಾಸ್ಪಿಟಲ್ ಸಿಬ್ಬಂದಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
ವಿಧಾನ ಪರಿಷತ್ ಶಾಸಕರಾದ ಬಿ.ಜಿ ಪಾಟೀಲ್, ಶಶೀಲ್ ಜಿ. ನಮೋಶಿ, ಕ್ರೇಡೆಲ್ ಅಧ್ಯಕ್ಷ ಚಂದು ಪಾಟೀಲ್, ಸಹಾಯಕ ಆಯುಕ್ತೆ ಮೋನಾ ರೋಟ್, ಮುಖಂಡರಾದ ಶಿವರಾಜ ಪಾಟೀಲ ರದ್ದೆವಾಡಗಿ, ಸಿದ್ದಾಗಿ ಪಾಟೀಲ ಮತ್ತಿತರು ಇದ್ದರು.