Advertisement

ಹ್ಯಾಪಿ ಬರ್ತ್‌ಡೇ ಟೂ ಯು

12:25 PM Oct 06, 2017 | |

ಸರಿರಾತ್ರಿ 12 ಗಂಟೆಗೆ ಗೆಳತಿ ಸೌಮ್ಯಾಳಿಂದ ಪ್ರಮೀಳಾಳಿಗೆ ಫೋನ್‌ ಬಂದಿತು. ಒಂದು ಗಂಟೆ ಇಬ್ಬರೂ ಹರಟೆ ಹೊಡೆದು ಗುಡ್‌ನೈಟ್‌ ಹೇಳಿ ನಿದ್ರಿಸಿದರು. ಮಾತನಾಡುವ ಭರಾಟೆಯಲ್ಲಿ ಬಂದಿರುವ ಎರಡು-ಮೂರು ವೈಟಿಂಗ್‌ ಕರೆಗಳು ಪ್ರಮೀಳಾಳ ಗಮನಕ್ಕೆ ಬರುವುದಿಲ್ಲ. ಬೆಳಿಗ್ಗೆ ಬೇಗ ಆರು ಗಂಟೆಗೇ ಅಮ್ಮನ ಫೋನು ರಿಂಗಣಿಸಿ, “”ಬೆಳಿಗ್ಗೆ ಇಷ್ಟು ಬೇಗ ಯಾಕಮ್ಮ ಫೋನ್‌ ಮಾಡಿದೆ” ಎಂದು ಮಾತನಾಡಿಸಿ, ತಿಂಡಿಸ್ನಾನ ಮುಗಿಸಿ, ಅಲ್ಲೇ ಹತ್ತಿರದ ದೇವಸ್ಥಾನಗಳಿಗೆ ಭೇಟಿಕೊಟ್ಟು, ದಾರಿಯಲ್ಲಿ ಬೇಕರಿಯಲ್ಲಿ ಒಂದು ಕಿಲೋ ಕಾಜೂ ಬರ್ಫಿ ತೆಗೆದುಕೊಂಡು ಕ‌ಚೇರಿ ಸೇರಿದೊಡನೆ ಗೆಳತಿಯರೆಲ್ಲ “”ನಮಗೆ ಪಾರ್ಟಿ, ಸ್ವೀಟು, ಚಾಕಲೇಟ್‌” ಎಂದು ಪೀಡಿಸತೊಡಗಿದರು. ಮಧ್ಯಾಹ್ನ ಗೆಳತಿಯರೊಂದಿಗೆ ಪಾರ್ಟಿ ಮುಗಿಸಿ  ಮನೆಗೆ ಬೇಗ ಪರ್ಮಿಶನ್‌ ಕೇಳಿ ಬಂದಳು. ಮನೆಗೆ ಬಂದ ಮೇಲೆ ಹಾಯಾಗಿ ಕುಳಿತು ಚಹಾ ಕುಡಿಯಲು ಸಮಯವಿಲ್ಲದಂತೆ, ಒಂದರ ಹಿಂದೆ ಒಂದರಂತೆ ಅಕ್ಕ, ಅಣ್ಣ, ಗೆಳತಿ, ಹಳೆ ಕಚೇರಿಯ ಗೆಳತಿಯರ ಕರೆಗಳು ಬರುತ್ತಿರುವಂತೆ ಬಹಳ ಕಿರಿಕಿರಿಯೆನಿಸಿತು. ಊಟ ಮಾಡಲೂ ಮನಸ್ಸಿಲ್ಲದೆ ಮೊಬೈಲ್‌ ಸ್ವಿಚ್‌ ಆಫ್ ಮಾಡಿ ಮಲಗಿಕೊಂಡಳು. ಏನು, ಈ ದಿನದ ವಿಶೇಷ ಅಂದು ಊಹಿಸುವಿರಾ?! ಹಾಂ, ಸರಿ ಇದೆ ನಿಮ್ಮ ಊಹೆ ಇಂದು ಪ್ರಮೀಳಾಳ ಹುಟ್ಟುಹಬ್ಬ.

Advertisement

ಎಲ್ಲರ ಬದುಕಲ್ಲೂ ಹುಟ್ಟುಹಬ್ಬವೆಂಬುದು ಬಹು ಸಂಭ್ರಮದ ದಿನ. ಬಡವರಿರಲಿ, ಶ್ರೀಮಂತರಿರಲಿ, ಜಾತಿ, ಮತ, ಭೇದವೆಂಬುದು ಹುಟ್ಟುಹಬ್ಬಕ್ಕಿಲ್ಲ. ನಾವು ಸಣ್ಣವರಿರುವಾಗ ಹೊಸ ಬಟ್ಟೆತೊಟ್ಟು ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿ, ತರಗತಿಯವರಿಗೆಲ್ಲ ಚಾಕಲೇಟು ಕೊಡುವ ಸಂಭ್ರಮ ಎಲ್ಲ ಮಕ್ಕಳಿಗೂ ಬಹು ಖುಷಿ ನೀಡುತ್ತದೆ ಎಂಬುದು ಸುಳ್ಳಲ್ಲ. ಆದರೆ, ನನ್ನಂತಹ ಏಪ್ರಿಲ್‌, ಮೇ ರಜೆಯಲ್ಲಿ ಹುಟ್ಟಿದವರಿಗೆ ಚಾಕಲೇಟು ಹಂಚುವ ಅವಕಾಶವಿಲ್ಲದಿದ್ದರೂ ಮನೆಯವರೊಂದಿಗೆ ಜಾಸ್ತಿ ಸಿಹಿ ತಿನ್ನುವ ಭಾಗ್ಯವಂತರು ನಾವು. ಇನ್ನೂ ಅಕ್ಟೋಬರ ರಜೆ ಎಂದರಂತೂ ನವರಾತ್ರಿಯ ಸಂಭ್ರಮದೊಂದಿಗೆ ಹುಟ್ಟುಹಬ್ಬದ ಡಬಲ್‌ ಧಮಾಕಾ. ನಮ್ಮ ಇಷ್ಟದ ತಿನಿಸುಗಳು ನಾವು ಕೇಳದೇನೇ ಮನೆಯಲ್ಲಿ ತಯಾರಾಗುವುದು ವಿಶೇಷ.

ಇಂದು ಸಂಭ್ರಮಾಚರಣೆಯ ವಿಧಾನಗಳು ಬದಲಾಗಿವೆ.ಸಂಬಂಧಿಗಳು, ವಠಾರದವರನ್ನೆಲ್ಲ ಕರೆದು ಹಾಡು ಹೇಳುವ, ಅವರವರ ವಯಸ್ಸಿನ ಅಂಕೆಯ, ಗೊಂಬೆಯ ತರಹೇವಾರಿ ಮೇಣದ ಬತ್ತಿಗಳನ್ನು ಹೊತ್ತಿಸಿ, ಕೇಕು ಕತ್ತರಿಸಿ ಆಚರಣೆ ಮಾಡುತ್ತಾರೆ. ಕೇಕಿನಲ್ಲೂ  ಛೋಟಾ ಭೀಮ…, ಕ್ರಿಕೆಟ್‌ ಇತ್ಯಾದಿ ಹಲವಾರು ಡಿಸೈನುಗಳು. ಹುಟ್ಟುಹಬ್ಬದ ಥೀಮಿನ ಹಲವಾರು ಟೋಪಿ, ಬಲೂನುಗಳು ಹುಟ್ಟುಹಬ್ಬದ ಮೆರಗನ್ನು ಹೆಚ್ಚಿಸುತ್ತವೆ. ಕೆಲವು ಮಂದಿ ಆಹ್ವಾನಿತರಿಗೆ ತಿಂಡಿಯ ವ್ಯವಸ್ಥೆ ಮಾಡಿದರೆ, ಇನ್ನು ಕೆಲವರದು ಊಟದ ವ್ಯವಸ್ಥೆ. ಕೆಲವರು “ಆಶೀರ್ವಾದವೇ ಉಡುಗೊರೆ’ಯೆಂದರೆ ಇನ್ನು ಕೆಲವರು ಉಡುಗೊರೆ ಪಡೆದು ಬಂದ ಮಕ್ಕಳಿಗೆಲ್ಲ ಬಗೆಬಗೆಯ ರಿಟರ್ನ್ ಗಿಫ್ಟ್rಗಳನ್ನು ನೀಡುವುದು ವಿಶೇಷ. ವಯಸ್ಸಿಗನುಗುಣವಾಗಿ ಆಟೋಟಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡುವ ಪದ್ಧತಿಯನ್ನು ಕೆಲವರು ಶುರುಮಾಡಿಕೊಂಡಿದ್ದಾರೆ.

ಮಕ್ಕಳ ಡ್ಯಾನ್ಸ್‌ , ಹಾಡುಗಳನ್ನು ಮಾಡಿಸುವವ ಕೆಲವರಾದರೆ, ಜಾದೂ ಪ್ರದರ್ಶನ ಇತ್ಯಾದಿ ಕಾರ್ಯಕ್ರಮ ಆಯೋಜಕರಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಮಕ್ಕಳ ಹುಟ್ಟುಹಬ್ಬವನ್ನು ಮದುವೆಯಂತೆ ಆಡಂಬರದಿಂದ ಆಚರಿಸುವ ತಂದೆ-ತಾಯಂದಿರಿದ್ದಾರೆ.

ಈ ಸದ್ಯ ಗೆಳತಿಯೊಬ್ಬಳು ಮಗಳ ಹುಟ್ಟುಹಬ್ಬವನ್ನು ಅನಾಥಾಲಯದಲ್ಲಿ ಮಕ್ಕಳೊಂದಿಗೆ ಆಚರಿಸಿ, ಅಲ್ಲಿಯ ಮಕ್ಕಳಿಗೆ ಸಿಹಿ ಹಂಚಿದಳು. ರಾಜಕಾರಣಿಗಳು ತಮ್ಮ ಹುಟ್ಟುಹಬ್ಬವನ್ನು ವೃದ್ಧಾಶ್ರಮದಲ್ಲಿ ಆಚರಿಸಿದ್ದನ್ನು ಸಿನೆಮಾಗಳಲ್ಲಿ ನೋಡಿರಬಹುದು.ತರಗತಿಯಲ್ಲಿ ಹುಡುಗನೊಬ್ಬ ಹುಟ್ಟುಹಬ್ಬದ ದಿನ ನಮಗೆಲ್ಲ ಪುಸ್ತಕವನ್ನು ನೀಡುತ್ತಿದ್ದದ್ದು ಈಗಲೂ ನೆನಪಿದೆ. ಎಲ್ಲರೂ ಒಂದೊಂದು ರೀತಿಯಲ್ಲಿ ಹುಟ್ಟುಹಬ್ಬದ ಆಚರಣೆಯನ್ನು ಮಾಡುತ್ತಾರೆ. ಗಾಂಧೀಜಿಯವರ ಹುಟ್ಟುಹಬ್ಬದಂದು ಶಾಂತಿ, ಸ್ವತ್ಛತೆಯ ಸಾರಗಳನ್ನು ನೆನೆದು ಶ್ರಮದಾನ ಮಾಡುವ ಪದ್ಧತಿ ಈಗಲೂ ಶಾಲಾ-ಕಾಲೇಜುಗಳಲ್ಲಿದೆ. ನೆಹರೂ, ರಾಧಾಕೃಷ್ಣ ಮುಂತಾದ ಗಣ್ಯ ಪುರುಷರ ಹುಟ್ಟುಹಬ್ಬದ ದಿನವನ್ನು ಮಕ್ಕಳ ದಿನ, ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವೆ.

Advertisement

ಹುಟ್ಟುಹಬ್ಬದ ದಿನ ಮಕ್ಕಳಿಗೆ ನಾನಾ ರೀತಿಯ ಉಡುಗೊರೆ ಕೊಡುವ ಪಾಲಕರು ನಮ್ಮ ಸುತ್ತಲಿದ್ದಾರೆ. ಹೊಸ ಬಟ್ಟೆ, ರೇನುಕೋಟು, ಡಿಕ್ಷನರಿ, ಸೈಕಲು, ಪುಸ್ತಕ ಇತ್ಯಾದಿಯನ್ನು ಉಡುಗೊರೆ ನೀಡುವರು.ಇನ್ನು ಕೆಲವರು ದುಬಾರಿ ಬೈಕು, ಕಾರುಗಳಂತಹ ಉಡುಗೊರೆ ನೀಡುತ್ತಾರೆ. ಈಗಂತೂ ಡಿಜಿಟಲ್‌ ಯುಗವೆಂದು ಮೊಬೈಲ…, ಟ್ಯಾಬ…, ಲ್ಯಾಪ್‌ಟಾಪ್‌ ಎಂದು ಸ್ಮಾರ್ಟ್‌ ಗಿಫ್ಟ್ಗಳನ್ನು ನೀಡುತ್ತಾರೆ. ನಾಯಿ-ಬೆಕ್ಕುಗಳಂತಹ ಸಾಕುಪ್ರಾಣಿಗಳನ್ನು ಉಡುಗೊರೆ ನೀಡುತ್ತಾರೆ ಪ್ರಾಣಿ ಪ್ರೇಮದಿಂದ.

ಇವಿಷ್ಟು ಪಾಲಕರ ಆಚರಣೆಯಾದರೆ, ಗೆಳೆಯ-ಗೆಳತಿಯರೆಲ್ಲ ಸೇರಿ ಕೇಕು ಕತ್ತರಿಸಿ, ಕೇಕನ್ನು ಮುಖಕ್ಕೆ ಬಳಿದು, ಪಾರ್ಟಿ ಆಚರಿಸಿ ಎಲ್ಲರೂ ಸೇರಿ ಚಂದಾ ಹಾಕಿ ವಾಚು, ಬಟ್ಟೆ, ಇತ್ಯಾದಿ ಅವರ ಅಗತ್ಯಗಳನ್ನು ಅರಿತು ಉಡುಗೊರೆ ನೀಡುವುದು ಸಾಮಾನ್ಯ. ಇನ್ನು ಪ್ರೇಮಿಗಳಾದರೆ ಅವರಿಷ್ಟದ ಹುಡುಗಿಗೆ ಗುಲಾಬಿ, ಟೆಡ್ಡಿಬೇರ್‌, ವಜ್ರ, ಬಂಗಾರ ನೀಡಿ ಅವಳ ಮನವನ್ನು ಓಲೈಸಿಕೊಳ್ಳುತ್ತಾರೆ. ಇನ್ನೂ ನಿಶ್ಚಿತಾರ್ಥದ ನಂತರ ಹುಟ್ಟುಹಬ್ಬ ಬಂದರಂತೂ ಬಹಳ ಸಂಭ್ರಮ, ಸರ್‌ಪ್ರೈಸಾಗಿ ಹೂವಿನ ಗೊಂಚು, ಕೇಕುಗಳನ್ನು ಮನೆಗೆ ಡೆಲಿವರಿ ಮಾಡಿಸುತ್ತಾರೆ. ಮದುವೆಯ ನಂತರ ಮೊದಲ ಹುಟ್ಟುಹಬ್ಬಕ್ಕಂತೂ ಕ್ಯಾಂಡಲ್‌ ಲೈಟ್‌ ಡಿನ್ನರ್‌, ಚಾಕಲೇಟ್‌, ಆಭರಣಗಳ ಉಡುಗೊರೆ. ಮಗುವಿನ ಹುಟ್ಟುಹಬ್ಬಕ್ಕಂತೂ ಆಟಿಕೆ, ಬಟ್ಟೆಗಳ ಉಡುಗೊರೆಯಲ್ಲಿ ಒಂದೇ ತರಹದ 2-3 ಆಟಿಕೆ, ಬಟ್ಟೆಗಳಿದ್ದರೂ ಆಶ್ಚರ್ಯವಿಲ್ಲ.

ಗೆಳೆಯ/ಗೆಳತಿಯರ ಹುಟ್ಟುಹಬ್ಬಕ್ಕಾಗಿ ಕವನ/ಬರಹಗಳನ್ನು ಬರೆದು ನೀಡುವ ಗೆಳೆಯರೂ ಕೆಲವರಿದ್ದಾರೆ. ಈಗಂತೂ ವಾಟ್ಸಾಪ್‌, ಫೇಸ್‌ಬುಕ್‌, ಟೆಲಿಗ್ರಾಮ್‌ಗಳೆಂದು ಹುಟ್ಟುಹಬ್ಬದ ಶುಭಾಶಯಗಳ ಸುರಿಮಳೆ. ಕಾಲ್‌ ಮಾಡಿ ಶುಭಾಶಯ ಹೇಳುವವರಲ್ಲೂ ಗಂಟೆಗಟ್ಟಲೆ ಮಾತನಾಡಿ ಅವರ ಆಚರಣೆಯಲ್ಲಿ ಪಾಲು ಪಡೆಯುವವರಿ¨ªಾರೆ.ಇತ್ತೀಚೆಗೆ ಕಾರ್ಪೊರೇಟ್‌ ಕಂಪೆನಿಗಳಲ್ಲಿ ಹುಟ್ಟುಹಬ್ಬದ ದಿನ ರಜೆಯ ಉಡುಗೊರೆಯೂ ಇದೆ. ಅಲ್ಲದೆ, ಕೆಲವು ಕಂಪೆನಿಗಳು ಹುಟ್ಟುಹಬ್ಬದ ದಿನ ಉಡುಗೊರೆಗಳನ್ನು ಮನೆಗೆ ಕಳುಹಿಸುತ್ತವೆ. ಗೆಳತಿಯೊಬ್ಬಳು ತನ್ನ ತಂಗಿಯ 17ನೇ ಹುಟ್ಟುಹಬ್ಬಕ್ಕೆ 17 ವಿವಿಧ ಉಡುಗೊರೆಗಳನ್ನು ನೀಡಿದ್ದಳು.

ನಿಮ್ಮ ಅಜ್ಜಿಯನ್ನೊಮ್ಮೆ ಅವರ ಹುಟ್ಟುಹಬ್ಬದ ಕುರಿತು ಕೇಳಿ ನೋಡಿ, ಅವರು, “”ನಾನು ವೈಶಾಖ ಹುಣ್ಣುಮೆಗೆ ಎರಡು ದಿನವಿರುವಾಗ ಹುಟ್ಟಿದ್ದು” ಎಂದು ಅಚ್ಚ ಕನ್ನಡದಲ್ಲಿ ಹೇಳುತ್ತಾರೆ. “”ವಯಸ್ಸೆಷ್ಟು” ಎಂದೇನಾದರೂ ಕೇಳಿದರೆ ಅಂದಾಜಿನಲ್ಲಿ 80-81 ಎಂದೆಲ್ಲ ಹೇಳುತ್ತಾರೆ. ಅಂದು ಅವಿಭಕ್ತ ಕುಟುಂಬಗಳಲ್ಲಿ ಹುಟ್ಟಿದ ನಮ್ಮ ಅಜ್ಜ- ಅಜ್ಜಿಯಂದಿರಿಗೆ ದಿನಾಂಕ ವರುಷಗಳನ್ನು ದಾಖಲಿಸುವ ಪದ್ಧತಿ ಇಲ್ಲದಿದ್ದರೂ ಕಾಲಮಿತಿಗಳನ್ನು, ಅಣ್ಣನಿಗಿಂತ ನಾನೆಷ್ಟು ಚಿಕ್ಕವರೆಂದು ಅಂತರವನ್ನು ಚೆನ್ನಾಗಿ ಎಣಿಸಿ ಅವರ ವಯಸ್ಸನ್ನು ಹೇಳುತ್ತಾರೆ. ಅವರ ಕಾಲದಲ್ಲಿ ಹುಟ್ಟುಹಬ್ಬವೆಂದರೆ ಸಿಹಿಮಾಡುವುದು, ಮನೆಯಲ್ಲಿ ಮಕ್ಕಳನ್ನು ಕೂರಿಸಿ ಹಿರಿಯರು ಆರತಿ ಎತ್ತಿ ಆಶೀರ್ವದಿಸುವುದು.

ಈಗ ನಾವೆಲ್ಲ ಆಧುನಿಕತೆಯ ನೆಪದಲ್ಲಿ ಆಂಗ್ಲೀಕರಣವನ್ನು ಅನುಸರಿಸಿ ದೀಪ ಉರಿಸುವ ಬದಲು, ಮೇಣದಬತ್ತಿಯನ್ನು ಆರಿಸುವುದು ಇನ್ನಿತರ ಅಭ್ಯಾಸಗಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯುವಂತೆ ಮಾಡಿದೆ. ಹುಟ್ಟುಹಬ್ಬದ ದಿನ ಶುಭಾಶಯ ಕೋರುವ ಕೆಲವು ಗೆಳೆಯ/ಗೆಳತಿಯರು/ಸಂಬಂಧಿಕರು ಇನ್ನು ನಮ್ಮನ್ನು ಸಂಪರ್ಕಿಸುವುದು ಮುಂದಿನ ವರ್ಷ, ಇನ್ನು ಕೆಲವರು  ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಶುಭ ಕೋರಿ, ಎದುರಿಗೆ ದೊರೆತಾಗ ಪರಿಚಯವೇ ಇಲ್ಲದಂತಿರುತ್ತಾರೆ. ಎಲ್ಲರ ನೆಚ್ಚಿನ ವಾಟ್ಸಾಪ್‌ನಲ್ಲಿ ಹುಟ್ಟುಹಬ್ಬದ ಆಚರಣೆ ಮಾಡುತ್ತ ಕಾಲೇಜು ಹುಡುಗರು ಕೇಕಿನಿಂದ ಹೊಡೆದಾಡಿಕೊಂಡು ಹೊರಡುವಾಗ ಆ ಕೇಕನ್ನು ತಿನ್ನಲು ಭಿಕ್ಷುಕನೊಬ್ಬ ಬರುವ ವಿಡಿಯೋ ಚಿತ್ರಣವನ್ನು ಕಂಡಿರಬಹುದು. ಹಿತಮಿತವಾಗಿ ಆಚರಣೆ ಮಾಡಿ  ಉಳಿದ ತಿನಿಸುಗಳನ್ನು ಹಸಿದವರಿಗೆ ನೀಡಿದರೆ ಅವರ ಹಾರೈಕೆಯೇ ನಮಗೆ ಶ್ರೇಯೋಭಿಲಾಷೆ.

ಹುಟ್ಟುಹಬ್ಬ ಬಂದಿತೆಂದರೆ ನಾವು ಇನ್ನಷ್ಟು ಪ್ರೌಢರಾದಂತೆ, ಪ್ರತಿ ಹುಟ್ಟುಹಬ್ಬಕ್ಕೂ ಏನಾದರೂ ಸಾಧನೆಯ ಪಣತೊಟ್ಟು, ಆ ಪಣವನ್ನು ಸಾಧಿಸುವತ್ತ ಶ್ರಮವಹಿಸಿದರೆ, ಖಂಡಿತ ಜೀವನದಲ್ಲಿ ಉನ್ನತಿಯನ್ನು ಪಡೆಯುತ್ತೇವೆ. ಪ್ರತಿ ಹುಟ್ಟುಹಬ್ಬಕ್ಕಾಗಿ, ಇನ್ನಷ್ಟು ಉನ್ನತಿಗಾಗಿ ಕಾಯುತ್ತಾ ಉತ್ತಮ ನಾಗರಿಕರಾಗೋಣ. ಯುಗಾದಿ ಕಳೆದರೂ ಯುಗಾದಿ ಮರಳಿ ಬರುವುದು ಎಂಬಂತೆ ಹುಟ್ಟುಹಬ್ಬ ಮರಳಿ ಮರಳಿ ಬಂದು ಹೊಸತು ಹೊಸತು ತರುವುದು ಎಂಬುದೇ ಆಶಯ.

ಸಾವಿತ್ರಿ ಶ್ಯಾನುಭಾಗ್‌

Advertisement

Udayavani is now on Telegram. Click here to join our channel and stay updated with the latest news.

Next