ದೀಪದಿಂದ ದೀಪವ ಹಚ್ಚಬೇಕು ಮಾನವ ಎನ್ನುವ ಸಾಲು ಜನ ಜನಿತ. ದೀಪಗಳ ಹಬ್ಬ ದೀಪಾವಳಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಜೀವನದಲ್ಲಿ ಕವಿದ ಕತ್ತಲೆಯನ್ನು ಸರಿಸಿ ಬದುಕಿಗೆ ಬೆಳಕನ್ನು ನೀಡುವ ಹಬ್ಬವೇ ದೀಪಾವಳಿ. ಈ ಪದ ಕೇಳಿದಾಗಲೆಲ್ಲ ನೆನಪಾಗುವುದು ನನ್ನ ಬಾಲ್ಯ.
ದೀಪಾವಳಿ ಮೊದಲನೆಯ ದಿನದಿಂದ ಕೊನೆಯ ದಿನದ ತನಕ ನಮ್ಮನ್ನು ಹಿಡಿಯುವವರು ಯಾರು ಇರುತ್ತಿರಲಿಲ್ಲ. ಮೊದಲ ದಿನವಂತೂ ನೆತ್ತಿಗೆ ಎಣ್ಣೆ ಹಾಕಿ ಬಿಸಿ ಬಿಸಿ ನೀರಿಂದ ಸ್ನಾನವನ್ನು ಮಾಡಬೇಕಿತ್ತು. ಆ ಎಣ್ಣೆಯನ್ನು ಹಾಕಿಸಿಕೊಳ್ಳಲು ಇಷ್ಟವಿಲ್ಲದೆ ಮನೆಯಲೆಲ್ಲ ಓಡಾಡಿ, ತಪ್ಪಿಸಿಕೊಂಡು ಕೊನೆಗೂ ಅಮ್ಮನ ಕೈಯಲ್ಲಿ ಒದೆ ತಿಂದು ಎಣ್ಣೆ ಹಚ್ಚಿಸಿಕೊಂಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಅದಾದ ಅನಂತರ ಮನೆಯಲ್ಲಿ ಪಟಾಕಿ ತಂದಿಲ್ಲವೆಂದು ಹಠ ಮಾಡಿ ಪಟಾಕಿಯ ಬಾಕ್ಸ್ ಅನ್ನೇ ಕೊಳ್ಳಲು ಹೊಂಚುಹಾಕಿ ಕೊನೆಗೆ 5ರಿಂದ 6 ಪಟಾಕಿಗೆ ಸಮಾಧಾನ ಪಟ್ಟು ಕೊಳ್ಳುತ್ತಿದ್ದ ದಿನವಂತೂ ಕಣ್ಣ ಮುಂದಿದೆ. ಪಟಾಕಿಯನ್ನು ಹೊಡೆಯುವಾಗ ಕೈ ಸುಟ್ಟಿದ್ದೂ ಇದೆ.
ಇದೆಲ್ಲದಕ್ಕಿಂತ ಮುಖ್ಯವಾಗಿ ಹಬ್ಬಕ್ಕೆ ವೈವಿಧ್ಯಮಯ ಅಡುಗೆ ಮಾಡಿ ಬಡಸಿದಾಗ ಚಪ್ಪರಿಸಿ ತಿಂದ ರುಚಿ ಇನ್ನೂ ನಾಲಿಗೆಯ ಕೊನೆಯಲ್ಲಿ ಹಾಗೆಯೇ ಇದೆ. ಮನೆಯ ಸುತ್ತ ಮುತ್ತಲು ದೀಪವನ್ನು ಹಚ್ಚಿ ಅದರ ಸೌಂದರ್ಯ ಸವಿದ ಕ್ಷಣವನ್ನಂತೂ ಮರೆಯಲು ಸಾಧ್ಯವೇ ಇಲ್ಲ.
ಇದನ್ನೂ ಓದಿ:ಸಿಹಿ ತಿನಿಸು, ಪಟಾಕಿ, ಅಪ್ಪನ ಬೋನಸ್..: ದೀಪಗಳ ಹಬ್ಬದ ನೆನಪು
ಹಬ್ಬದ ದಿನದಂದು ದೇವರಿಗೆ ವಿಶೇಷ ಪೂಜೆ ನಡೆಯುವಾಗ ಹಸಿವನ್ನು ತಡೆಯಲಾರದೆ ಮನದಲ್ಲಿ ಬೈದುಕೊಂಡು ಶಿಕ್ಷೆ ಅನುಭವಿಸಿದ್ದೂ ಇದೆ. ಹೀಗೆ ಬಾಲ್ಯದಲ್ಲಿ ಆಚರಿಸಿದ ದೀಪಾವಳಿಯನ್ನು ನೆನೆದುಕೊಂಡರೆ ಮತ್ತೂಮ್ಮೆ ಬಾಲ್ಯ ಬರಬಾರದಿತ್ತೇ ಎಂದು ಅನ್ನಿಸುವುದು ಸುಳ್ಳಲ್ಲ. ಖುಷಿ, ಹಠ, ಬೈಗುಳ, ಕೀಟಲೆ ಇವುಗಳಿಂದಲೇ ತುಂಬಿತ್ತು ಆ ದಿನಗಳು. ದೀಪಾವಳಿ ಹಬ್ಬದ ಬರುವಿಕೆಗಾಗಿ ಕಾದ ಖುಷಿ, ಬಂದಾಗ ಅದನ್ನು ಸಂತೋಷದಿಂದ ಆಚರಿಸಿದ ರೀತಿ, ಮುಗಿದಾಗ ಆದ ಬೇಸರ ಇವೆಲ್ಲವನ್ನೂ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಬಾಲ್ಯದ ಮಧುರ ನೆನಪುಗಳೇ ಸಾದಾ ನಮ್ಮ ಜತೆ ಇರುವಂತದ್ದು. ಮನಸು ಮನಸುಗಳು ಸೇರಿ ಖುಷಿ ಸಂತೋಷದಿಂದ ಆಚರಿಸುವ ಈ ಹಬ್ಬದಂತೆ ಇದರ ನೆನಪುಗಳು ಸದಾ ನಮ್ಮೊಳಗೆ ನಂದಾದೀಪದಂತೆ ಉರಿಯುತ್ತ ಇರುತ್ತದೆ.
ಮಧುರಾ ಎಲ್. ಭಟ್ಟ
ಎಸ್.ಡಿ.ಎಂ. ಕಾಲೇಜು ಉಜಿರೆ