Advertisement

ವಯಸ್ಸು –ಮನಸ್ಸು ಮಳೆಯೊಡನೆ ಬೆರೆತಾಗ

05:35 PM Jun 13, 2021 | Team Udayavani

ಮಳೆ ಅದೊಂದು ರೀತಿ ನೆನಪಿನ ಜೋಳಿಗೆಯಲ್ಲಿರುವ ಭಾವನೆಗಳನ್ನು ಹೊರಸೂಸುವ ಮಾಯೆ. ಒಣಗಿಹೋದ ನೆಲಕ್ಕೆ ಮೊದಲ ಹನಿ ಬಿದ್ದಾಗ ಬೀರುವ ಆ ಘಮ ಮನದಂಗಳದಿ ಮುದುರಿಕೊಂಡಿರುವ ಭಾವನೆಗಳನ್ನು ರಂಗೇರಿ ಸು ತ್ತದೆ. ಮಳೆ ಹನಿಗಳು ಇಳೆಯನು ಸೋಕಿದಾಗ ಹಸುರೆಲೆಗಳು ನಾಚುವಂತೆ ಮನದೊಳಗಿರುವ ಹುಚ್ಚು ಹುಚ್ಚು ಆಸೆಗಳು ಚಿಗುರೊಡೆಯುತ್ತವೆ.

Advertisement

ಮನೆಯ ಅಂಗಳವನ್ನೇ ಕಡಲನ್ನಾಗಿ ಮಾಡುವ ಮಳೆಯಲ್ಲಿ, ಸಣ್ಣ ಮಕ್ಕಳು ಆಡುವ ಆಟಗಳನ್ನು ನೋಡುವುದೇ ಚೆಂದ. ಮಕ್ಕಳು ಮಳೆಯಲ್ಲಿ ನೆನೆದರೆ ಅವರ ಆರೋಗ್ಯ ಕೆಡುತ್ತದೆ ಎಂಬ ಭಯಕ್ಕೆ ಅಮ್ಮನ ಬಾಯಲ್ಲಿ ಬರುವ ಬೈಗುಳಕ್ಕೂ ಕಿವಿಗೊಡದೆ ನೋಟ್‌ಬುಕ್‌ಗಳ ಹಾಳೆಯನ್ನು ಹರಿದು ದೋಣಿ ಮಾಡಿ ಅಂಗಳದಲ್ಲಿ ತುಂಬಿರುವ ಮಳೆ ನೀರಿನಲ್ಲಿ ಆಡುವ ಆ ಮಕ್ಕಳ ಲೋಕವೇ ಸುಂದರ. ಶಾಲೆ ಬಿಟ್ಟಾಗ ಜೋರು ಮಳೆ ಬಂದರೆ ಮಕ್ಕಳು ಪಡುವ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಕೊಡೆ ಇದ್ದರೂ ಅದನ್ನು ಬಿಡಿಸದೆ ಬ್ಯಾಗ್‌ನಲ್ಲಿ ತುರುಕಿ ಜಡಿ ಮಳೆಗೆ ಒದ್ದೆಯಾಗುತ್ತಾ ಕುಣಿದಾಡಿಕೊಂಡು ಮನೆಗೆ ಬರುವ ಆ ಬಾಲ್ಯವೇ ಚಂದ. ಬೆನ್ನ ಮೇಲೆ ಹೊತ್ತು ತಂದ ಮಣಭಾರದ ಬ್ಯಾಗ್‌ನ ಭಾರವನ್ನು ಇಳಿಸಿ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿ ಅಮ್ಮ ಮಾಡಿಟ್ಟ ಬಿಸಿ ಬಿಸಿ ಚಾದೊಂದಿಗೆ ಕಾಯಿಸಿದ ಹಪ್ಪಳವೋ ಸಂಡಿಗೆಯೊ ತಿನ್ನುವ ಮಜವೇ ಬೇರೆ.

ಮಳೆಗಾಲದಲ್ಲಿ ಯುವ ಪ್ರೇಮಿಗಳ ಕನಸುಗಳಂತೂ ಎಲ್ಲೆಯಿಲ್ಲದ ಬಾನಿನಂತಾಗುತ್ತದೆ. ತನ್ನ ಪ್ರೇಮಿಯೊಡನೆ ಭವಿಷ್ಯದಲ್ಲಿ ಕಳೆಯಲು ಬಯಸುವ ಸುಂದರ ಕ್ಷಣಗಳ ಕನಸಿಗೆ ಮಳೆರಾಯನೇ ಸಾಕ್ಷಿ. ತುಂತುರು ಮಳೆ ಹನಿಗಳು ಭುವಿಗೆ ಕಚಗುಳಿ ಇಡುವ ಹಾಗೆ ಪ್ರೇಮಿಗಳ ಮನದಲ್ಲೂ ಹೊಸ ಹೊಸ ಕನಸುಗಳೂ ಲಗ್ಗೆ ಇಡುತ್ತವೆ. ಇವೆಲ್ಲದರ ಅನುಭವ ಕಳೆದು ಈ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಿರುವ ಹಿರಿತನ ಕಿಟಕಿಯ ಗಾಜಿನಲಿ ಮಾಸಿ ಹೋಗುತ್ತಿರುವ ಮಂಜಿನ ಹಾಗೆ ಜೀವನವಿಷ್ಟೇ ಎಂದು ತಿಳಿಸುತ್ತದೆ.

ಮಳೆಯೊಡನೆ ನೆಂಟರಂತೆ ಬರುವ ಗುಡುಗು ಸಿಡಿಲಿನ ಅಬ್ಬರ ಒಳಗೊಳಗೆ ಹುದುಗಿರುವ ಭಯವನ್ನು ಹೊರದಬ್ಬುತ್ತದೆ. ಇದರೊಡನೆ ಜತೆಯಾಗುವ ಮಿಂಚಿನ ಬೆಳಕು ಮನದೊಳಗೆ ಅವಿತಿರುವ ಭಯದ ಕತ್ತಲೆಯನ್ನು ಹೋಗಲಾಡಿಸುವ ಬೆಳಕಾಗಬಾರದೇ..! ಇನ್ನು ಮಳೆಯ ಕತ್ತಲೆಯೋ ರಾತ್ರಿಯ ಕತ್ತಲೆಯೋ ಎಂಬ ವ್ಯತ್ಯಾಸವನ್ನು ತಿಳಿಸದೇ ಕಗ್ಗತ್ತಲೆಯನ್ನು ಹೊತ್ತು ತರುವ ಸಂಜೆಯ ಮಳೆ ನಿಲ್ಲದೆ ಒಂದೇ ಸಮನೆ ಬರುತ್ತಲೇ ಇರುತ್ತದೆ. ಇದಕ್ಕಾಗಿಯೇ ಸಂಜೆ ಬರುವ ನೆಂಟ ಸಂಜೆ ಬರುವ ಮಳೆಯಂತೆ ಬೇಗನೆ ಹೋಗುವುದಿಲ್ಲ ಎಂಬ ಮಾತು ಬಂದಿರಬಹುದು.

ಆಗಸದಿ ಬೀಳುವ ಹನಿಗಳು ಭೂಮಿಯಂಗಳದಿ ಜತೆಯಾಗುವ ಹಾಗೆ ಸಂಜೆಯ ಮಳೆ ಮನೆಮಂದಿಯನ್ನು ಚಾವಡಿಯಲಿ ಒಗ್ಗೂಡಿಸಿ ಮಾತಿನ ವೇದಿಕೆಯನ್ನೇ ನಿರ್ಮಿಸುತ್ತದೆ. ಇನ್ನು ಆ ಹೊತ್ತಿನಲ್ಲಿ ಕರೆಂಟ್‌ ಇಲ್ಲದಿದ್ದರೆ ಚಿಮಿಣಿಯ ಬೆಳಕಿನಲಿ ಪರದಾಡುತ್ತಾ ಆಡುವ ಮಾತುಗಳಿಗೆ ಕೊನೆಯೇ ಇಲ್ಲ. ಅದೇ ಮಾತಿನ ಗುಂಗಿನಲ್ಲಿ ತಣ್ಣನೆಯ ಗಾಳಿಯ ಬೆಸುಗೆಯೊಂದಿಗೆ ದಪ್ಪನೆಯ ಕಂಬಳಿಯನ್ನು ಸುತ್ತಿ ಮಲಗುವಾಗ ಕೇಳುವ ಕಪ್ಪೆಗಳ ಸದ್ದಿನ ಗದ್ದಲ, ಮನೆಯ ಮಾಡಿನಲಿ ಸುರಿಯುವ ನೀರಿನ ನಿನಾದ ಸುಂದರ ಕನಸಿನ ಲೋಕಕ್ಕೆ ಕೊಂಡೊಯ್ಯುತ್ತದೆ. ಈ ರೀತಿ ಸೊಗಸಾದ ಅನುಭವ ನೀಡುವ ಮಳೆರಾಯನ ತುಂಟಾಟಕ್ಕೆ ಮನಸ್ಸು ಮತ್ತೆ ಮತ್ತೆ ಹಾತೊರೆಯುತ್ತದೆ. ಆದರೆ ಅವನದ್ದೇ ಹುಚ್ಚಾಟದಿಂದಾಗಿ ಉಂಟಾಗುವ ಪ್ರವಾಹಗಳು, ಸಿಡಿಲ ಹೊಡೆತಗಳು, ಆತಂಕವನ್ನು ಹುಟ್ಟಿಸುತ್ತದೆ. ಯಾವಾಗ ಈ ಮಳೆಗೆ ಕೊನೆ ಎಂದು ಚಿಂತೆಗೆ ತಳ್ಳುತ್ತದೆ

Advertisement

ಹೀಗೆ ಮಳೆಯೆಂಬ ಮಾಯೆಯೊಳಗೆ ವಯಸ್ಸು ಹಾಗೂ ಮನಸ್ಸು ಸಿಲುಕಿದಾಗ ಆಗುವ ಭಾವನೆಗಳ ತೊಳಲಾಟ ಅದು ಮಳೆಯೊಡನೆ ಆಡುವ ಮನದಾಟವಿದ್ದಂತೆ…

 

ನಳಿನಿ ಎಸ್‌. ಸುವರ್ಣ

ಆಳ್ವಾಸ್‌ ಕಾಲೇಜು ಮೂಡುಬಿದಿರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next