Advertisement

ಸಂತೋಷಕ್ಕೆ ಬಾಳೂ ಸಂತೋಷಕ್ಕೇ..

12:18 PM Oct 30, 2017 | |

ಥೂ… ಏನಪ್ಪಾ ಇದು? ಜೀವನದಲ್ಲಿ ಎಷ್ಟು ಸಂಪಾದನೆ, ಕೆಲಸ ಮಾಡಿದರೂ ಸಂತೋಷ, ನೆಮ್ಮದಿ ಇಲ್ಲ. ಇಂಥ ಮಾತುಗಳಿಗೆ ನಮ್ಮ ನಿಮ್ಮೆಲ್ಲರ ನಡುವೆ ಯಾವುದಕ್ಕೂ ಕಡಿಮೆ ಇಲ್ಲ. ಹಾಗಿದ್ದರೆ ಏನಿದು ಸಂತೋಷ, ನೆಮ್ಮದಿ? ಅದಕ್ಕೆ ಆಕಾರ, ಬಣ್ಣ, ಪ್ರಮಾಣ ಏನೆಂದು ಪ್ರಶ್ನಿಸಲು ಹೊರಟರೆ, ನಿರ್ದಿಷ್ಟ ಉತ್ತರ ಸಿಕ್ಕುವುದು ಸಾಧ್ಯವೇ ಇಲ್ಲ. ಸಂತೋಷ, ನೆಮ್ಮದಿ ಹೀಗೆಂದು ಒಬ್ಬ ಹೇಳಿದರೆ, ಎರಡನೇ ವ್ಯಕ್ತಿ ಅದಕ್ಕೆ ಬೇರೊಂದು ವ್ಯಾಖ್ಯಾನವನ್ನೇ ಕೊಡುತ್ತಾನೆ. “ಡಿಪಾರ್ಟ್‌ಮೆಂಟ್‌ ಆಫ್ ಹ್ಯಾಪಿನೆಸ್‌’ ಅದನ್ನು ನಾವು ಕನ್ನಡದಲ್ಲಿ ಬರೆಯುವುದಿದ್ದರೆ ಸಂತೋಷ ಇಲಾಖೆಯೋ ಅಥವಾ ವಿಭಾಗವೋ, ಸಚಿವಾಲಯ ಎಂದೋ ಹೇಳಬೇಕು. 

Advertisement

ಏನಿದು ಹ್ಯಾಪಿನೆಸ್‌ ಡಿಪಾರ್ಟ್‌ಮೆಂಟ್‌?
ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆ ಈಗಂತೂ ತಿರಸ್ಕರಿಸಲಾಗದ ವ್ಯವಸ್ಥೆಯಾಗಿ ಹೋಗಿದೆ. ಎಲ್ಲವನ್ನೂ ಹಣದ ಮೌಲ್ಯದಿಂದ ಅಳೆಯುವ ಹಾಲಿ ದಿನಮಾನಗಳಲ್ಲಿ ಸಂತೋಷ, ಸಮಾನತೆಗೆ ಮಾನ್ಯತೆ, ಆದ್ಯತೆ ಎಲ್ಲಿ ಬರಬೇಕು?  ಹಣವಿದ್ದರೆ ಎಲ್ಲವೂ ಇರುತ್ತದೆ. ಇಂಥ ಒಂದು ವಿಶೇಷವಾದ ವ್ಯವಸ್ಥೆ ಬೆಳೆದು ಬಂದದ್ದು ನಮ್ಮ ಭಾರತದ ನೆರೆಯ ದೇಶವಾಗಿರುವ ಭೂತಾನ್‌ನಲ್ಲಿ. “ಗ್ರಾಸ್‌ ನ್ಯಾಷನಲ್‌ ಹ್ಯಾಪಿನೆಸ್‌’ ಅಂದರೆ ರಾಷ್ಟ್ರೀಯ ಒಟ್ಟು ಸಂತೋಷ ಕೋಷ್ಠಕ. 2008ರ ಜುಲೈ 18ರಂದು ಭೂತಾನ್‌ನ ಸಂವಿಧಾನದಲ್ಲಿ ಅದು ಉಲ್ಲೇಖಗೊಂಡಿತ್ತು. ಆದರೆ ಗ್ರಾಸ್‌ ನ್ಯಾಷನಲ್‌ ಹ್ಯಾಪಿನೆಸ್‌ ಎಂಬ ಪದ ಪ್ರಯೋಗಕ್ಕೆ ಶ್ರೀಕಾರವಾದದ್ದು ನಮ್ಮ ಮುಂಬೈನಲ್ಲಿ 1979ರಲ್ಲಿ. ಭೂತಾನ್‌ನ ರಾಜ ಜಿಗೆ ಶಿಂಗೆ ವಾಂಗ್‌ಚುಕ್‌ ಸಂದರ್ಶನವೊಂದರಲ್ಲಿ ಆ ಪದವನ್ನು ಮೊದಲ ಬಾರಿಗೆ ಬಳಕೆ ಮಾಡಿದ್ದರು.

ಹೊಸ ಕ್ಷೇತ್ರ
ಶಬ್ದ ಪುಂಜ ಮಾತ್ರ ಹೊಸತಾದರೂ ಮೂಲ ವಿಚಾರ ಹೊಸತೇನೂ ಅಲ್ಲ. ಸಾರ್ವಜನಿಕ ಸಂಪರ್ಕ ಕ್ಷೇತ್ರ ಅಥವಾ ಪಬ್ಲಿಕ್‌ ರಿಲೇಷನ್‌ ಆಫೀಸರ್‌ ಎಂಬ ವಿಭಾಗವೇ ಹೊಸತಾಗಿ ವಿಶ್ಲೇಷಣೆಗೆ ಒಳಪಟ್ಟುದಾಗಿದೆ ಎಂದು ಹೇಳಿಕೊಳ್ಳಬಹುದೇನೋ. ಹಣಕಾಸು ಕ್ಷೇತ್ರದಲ್ಲಿ ದೇಶದ ಒಟ್ಟು ತಲಾ ಆದಾಯ (ಜಿಡಿಪಿ) ಅಧ್ಯಯನ ಮಾಡುವಂತೆ, ದೇಶ ಅಥವಾ ರಾಜ್ಯದಲ್ಲಿ ಜನರು ಯಾವ ರೀತಿ ಸಂತೋಷದಲ್ಲಿದ್ದಾರೆ ಎಂಬುದನ್ನು ಈ ಇಲಾಖೆ ಅಧ್ಯಯನ ನಡೆಸುತ್ತದೆ. ನಮ್ಮ ದೇಶದಲ್ಲಿ ಮೊದಲ ಬಾರಿಗೆ ಈ ವಿಭಾಗವನ್ನು ಆರಂಭ ಮಾಡಿದ್ದು ಮಧ್ಯಪ್ರದೇಶ. ನಂತರ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಆರಂಭ ಮಾಡಿವೆ. 

ಯುಎಇನಲ್ಲಿದೆ
ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ)ದಲ್ಲಿ ಈ ಇಲಾಖೆಯನ್ನು ಆರಂಭ ಮಾಡಲಾಗಿದ್ದು, ಸರ್ಕಾರಿ ಯೋಜನೆಗಳ ಸಮನ್ವಯಗೊಳಿಸಲು, ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲು ಸೇರಿದಂತೆ ಒಟ್ಟು ಐದು ಧ್ಯೇಯಗಳನ್ನು ಹೊಂದಲಾಗಿದೆ. ಯುಎಇನಲ್ಲಿ ವಿವಿಧ ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಮತ್ತು ಅದರ ಅನುಷ್ಠಾನದಿಂದ ಜನರು ಯಾವ ರೀತಿ ಸಂತೋಷ ಹೊಂದಿದ್ದಾರೆ ಎಂದು ತಿಳಿದುಕೊಳ್ಳಲು ಸಮಾಜದ ವಿವಿಧ ಸ್ತರಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಜನರು ಸಂತೋಷ ಹೊಂದಿರದೇ ಇದ್ದರೆ ಯಾವ ಕಾರಣಕ್ಕಾಗಿ ಅಸಂತುಷ್ಟಿಯಾಗಿದ್ದರೆ ಎಂದು ತಿಳಿದುಕೊಂಡು ಆ ದಿಸೆಯಲ್ಲಿ ಹೆಚ್ಚಿನ ಪ್ರಮಾಣದ ಅಭಿವೃದ್ಧಿಯನ್ನು ಸಾಧಿಸುವ ಪ್ರಯತ್ನ ಮಾಡಲಾಗುತ್ತದೆ. ಕಾಲ ಮಿತಿಯಲ್ಲಿ ಅದರ ಅನುಷ್ಠಾನದ ಬಗ್ಗೆ ಪರಿಶೀಲನೆಯನ್ನೂ ಮಾಡಲಾಗುತ್ತದೆ.https://www.happy.ae/

ವೆನಿಜೂವೆಲಾದಲ್ಲಿ ಇದೆ
ದಕ್ಷಿಣ ಅಮೆರಿಕ ಖಂಡದ ಈ ರಾಷ್ಟ್ರದಲ್ಲಿಯೂ ಸಂತೋಷದ ವಿಭಾಗ ಅಥವಾ ಸಚಿವಾಲಯ ಇದೆ. ಯುಇಎ ಹೊಂದಿರುವ ಗುರಿ ಮತ್ತು ಆಶಯಗಳನ್ನೇ ಇಲ್ಲಿಯೂ ಅನುಸರಿಸಲಾಗಿದೆ. ಅಲ್ಲಿ ಅದನ್ನು ಸಾಮಾಜಿಕ ಸಂತೋಷ ಖಾತೆ ಎಂದು ಹೆಸರಿಸಲಾಗಿದೆ. ಬಡತನ ನಿರ್ಮೂಲನೆ ಕಾಮಗಾರಿಗಳ ಜತೆಗೆ ಸಂತೋಷ ಇಲಾಖೆಯನ್ನೂ ಸೇರ್ಪಡೆಗೊಳಿಸಲಾಗಿದೆ. 

Advertisement

ಭಾರತಕ್ಕೆ 127ನೇ ಸ್ಥಾನ 
ಹಾಲಿ ವರ್ಷ ಬಿಡುಗಡೆ ಮಾಡಿರುವ “ವಿಶ್ವ ಸಂತೋಷ ವರದಿ 2017’ರ ಪ್ರಕಾರ ನಮ್ಮ ಭಾರತಕ್ಕೆ 122ನೇ ಸ್ಥಾನ. ಜಗತ್ತಿನ ಒಟ್ಟು 155 ರಾಷ್ಟ್ರಗಳನ್ನು ಈ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಸಾರ್ಕ್‌ ರಾಷ್ಟ್ರಗಳ ಕೂಟದಲ್ಲಿ ಭಾರತ ತೀರಾ ಹಿಂದುಳಿದಿದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನಕ್ಕೆ 80ನೇ ಸ್ಥಾನ, ನೇಪಾಳಕ್ಕೆ 99, ಭೂತಾನ್‌ 97, ಬಾಂಗ್ಲಾದೇಶ 110ನೇ ಸ್ಥಾನ ಪಡೆದಿದೆ. ಮಾಲ್ಡೀವ್ಸ್‌ ಮಾತ್ರ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ.

ಆಯಾ ದೇಶದ ಜಿಡಿಪಿ, ಜಾಗತಿಕ ಮಾನದಂಡಕ್ಕೆ ಒಳಗೊಂಡಂತೆ ಆರೋಗ್ಯವಂತ ಜೀವನ ಕ್ರಮವನ್ನು ಆಧರಿಸಿ ರಾಷ್ಟ್ರಗಳಿಗೆ ರ್‍ಯಾಂಕಿಂಗ್‌ ನೀಡಲಾಗಿದೆ. ಜನರು 1-10ರ ಆಧಾರದಲ್ಲಿ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಅಂಕಗಳನ್ನು ನೀಡುತ್ತಾರೆ. ಭ್ರಷ್ಟಾಚಾರ, ಜೀವನ ಕ್ರಮದ ಆಯ್ಕೆಯಲ್ಲಿನ ಲಭ್ಯತೆಗೆ ಅನುಗುಣವಾಗಿ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಮಧ್ಯಪ್ರದೇಶದಲ್ಲಿ ಶುರುವಾದದ್ದು ಏಕೆ?
ಇನ್ನು ನಮ್ಮದೇ ದೇಶದ ಮಧ್ಯಪ್ರದೇಶದಲ್ಲಿ ಸಂತೋಷ ವಿಭಾಗ ಶುರುವಾದ ಬಗ್ಗೆ ಕತೆಯೇ ಇದೆ. ಈ ರಾಜ್ಯದ ಮಂದಸೌರ್‌ ಜಿಲ್ಲೆಯಲ್ಲಿ ಬರದ ಹಿನ್ನೆಲೆಯಲ್ಲಿ ರೈತಾಪಿ ವರ್ಗಕ್ಕೆ ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ. ರಾಜ್ಯ ಸರ್ಕಾರದ ವತಿಯಿಂದ ಪರಿಹಾರಕ್ಕಾಗಿ ಒತ್ತಾಯಿಸಿ ಸಾವಿರಾರು ಮಂದಿ ರೈತರಿಂದ ಪ್ರತಿಭಟನೆ ಕೂಡಾ ನಡೆದಿತ್ತು. ಹೀಗಾಗಿ ಕಳೆದ ವರ್ಷ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ “ರಾಜ್ಯ ಆನಂದ ಸಂಸ್ಥಾನ್‌’ ಅಥವಾ ದೇಶದ ಮೊದಲ “ಸ್ವತಂತ್ರ ಖಾತೆ’ ಯನ್ನು ಆರಂಭಿಸಿದ್ದರು. ನೊಂದ ರೈತರನ್ನು ಸಂತೋಷ ಪಡಿಸಲೋಸುಗ “ಆನಂದಕ್‌’ ಅಥವಾ “ಸಂತೋಷ ನೀಡುವ ಸ್ವಯಂ ಸೇವಕ’ ಎಂದು 33 ಸಾವಿರ ಮಂದಿಯನ್ನೂ ನೇಮಕ ಮಾಡಲಾಗಿದೆ. ದುರಂತವೆಂದರೆ ಈ 33 ಸಾವಿರ ಮಂದಿಗೇ ಈಗ ಸರಿಯಾದ ರೀತಿಯಲ್ಲಿ ವೇತನ ಪಾವತಿಯಾಗುತ್ತಿಲ್ಲ.

ಅವರು ದುಃಖದಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸಂತೋಷ ಉಂಟು ಮಾಡುವಂತೆ ಮಾಡುವುದು ಕೆಲಸ. ಸಾರ್ವಜನಿಕ ಸಾರಿಗೆ, ಸ್ಥಳಗಳಲ್ಲಿ ಏನಾದರೂ ಅನಾನುಕೂಲಗಳು ಉಂಟಾದರೆ ಅದನ್ನು ಪರಿಹರಿಸಲು ಮುಂದಾಗುತ್ತಾರೆ. 

ಮಧ್ಯಪ್ರದೇಶದಲ್ಲಿ ಸಂತೋಷ ಹರಡಲು ಏನೇನು ಕ್ರಮ
1. ಆತ್ಮೀಯ ಅಪ್ಪುಗೆ
2. ಸಾರ್ವಜನಿಕ ಸಾರಿಗೆ ಅಥವಾ ಸ್ಥಳದಲ್ಲಿ ಕುಳಿತಿದ್ದ ಸ್ಥಳ ಮತ್ತೂಬ್ಬರಿಗೆ ಕೊಡುವುದು
3. ಸರತಿಯಲ್ಲಿ ನಿಲ್ಲಲು ಅನುಕೂಲ
4. ಅಪರಿಚಿತರ ಜತೆ ಸಂಭಾಷಣೆ
5. ಕಚೇರಿಯಲ್ಲಿ ಸಹೋದ್ಯೋಗಿಗೆ ಹಣ್ಣುಗಳನ್ನು ತಂದುಕೊಡುವುದು
6. ನೆರೆಹೊರೆಯವರಿಗೆ ಅಡುಗೆ ಮಾಡುವುದು
7. ಒಬ್ಬನೇ ಇರುವವನಲ್ಲಿಗೆ ಹೋಗಿ ಮಾತನಾಡಿಸುವುದು
8. ನೆರೆಮನೆಯ ವ್ಯಕ್ತಿಯ ಮನೆಯ ಹೂತೋಟದಲ್ಲಿ ಕೆಲಸ
9. ಬೇಸರಗೊಂಡಿರುವ ವ್ಯಕ್ತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುವುದು.
ಆ ರಾಜ್ಯದಲ್ಲಿರುವ ಸಮಸ್ಯೆ ಏನು?
2.3 ಕೋಟಿ ಮಂದಿಗೆ ಸರಿಯಾದ ರೀತಿಯಲ್ಲಿ ದಿನಕ್ಕೆ 2 ಹೊತ್ತು ಊಟಕ್ಕೆ ಸಮಸ್ಯೆ
21,000- ಬೆಳೆ ಸರಿಯಾದ ರೀತಿಯಲ್ಲಿ ಬೆಳೆಯದೇ ಇದ್ದುದರಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ
52- ಶಿಶುಗಳ ಸಾವಿನ ಪ್ರಮಾಣ. ಪ್ರತಿ ವರ್ಷ ಹುಟ್ಟುವ 10 ಸಾವಿರ ಶಿಶುಗಳ ಪೈಕಿ 52 ಅಸುನೀಗುತ್ತವೆ.

ಶೇ.42- ಇಷ್ಟು ಪ್ರಮಾಣದ ಮಕ್ಕಳಲ್ಲಿ ಬೆಳವಣಿಗೆ ಪ್ರಮಾಣ ಕುಂಠಿತ ಶೇ.25.8- ಮಕ್ಕಳಲ್ಲಿ ವಯಸ್ಸಿಗೆ ತಕ್ಕಂತೆ ಭಾರ ಹೊಂದಿಲ್ಲ.
ಮಧ್ಯಪ್ರದೇಶದಲ್ಲೀಗ ಆರಂಭವಾಗಿರುವ ಸಂತೋಷ ಖಾತೆಯ ವ್ಯಾಪ್ತಿಯಲ್ಲಿ ಯಾರು ಯಾರು ಕೆಲಸ ಮಾಡುತ್ತಿದ್ದಾರೆ ಅವರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಲಾಗಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ತರಬೇತುದಾರರನ್ನು ರೂಪಿಸಲಾಗುತ್ತದೆ ಎನ್ನುವುದು ಸರ್ಕಾರದ ಪ್ರತಿಪಾದನೆ. ಈಗಾಗಲೇ ತರಬೇತಿ ಪಡೆದವರಿಗೆ, ಜನರಿಗೆ ಯಾವ ರೀತಿ ಸಂತೋಷ ನೀಡಬೇಕೆನ್ನುವುದೇ ಸಂದೇಹ. ಏಕೆಂದರೆ ಮಂದಸೌರ್‌ ಮತ್ತಿತರ ಜಿಲ್ಲೆಗಳಲ್ಲಿ ರೈತರು ಮತ್ತು ಇತರರು ಹಸಿವಿನಿಂದ ಕೂಡಿರುವಾಗ ಯಾವ ರೀತಿ ತರಬೇತಿ ನೀಡಬೇಕು ಎನ್ನುವುದು ಸಂತೋಷ ಕಾರ್ಯಕರ್ತರ ಸಂದೇಹ.

ಹಿಂದೆ ಸಂತೋಷ ಇರಲಿಲ್ಲವೇ?
ಈಗ ಏಕೆ ಡಿಪಾರ್ಟ್‌ಮೆಂಟ್‌ ಆಫ್ ಹ್ಯಾಪಿನೆಸ್‌ ಬರುತ್ತಾ ಇದೆ? ಹಿಂದೆ ಸಂತೋಷ ಇದ್ದದ್ದು ಮರೆಯಾಯಿತೇ ಎಂಬ ಪ್ರಶ್ನೆಗಳು ಒಡಮೂಡಬಹುದು. ಉತ್ತರ ಒಂದೇ. ಇತ್ತು. ಆದರೆ ಅದು ಪ್ರತ್ಯೇಕವಾಗಿರದೆ ನಮ್ಮ ನಿಮ್ಮೆಲ್ಲರ ಜತೆಯೇ ಇರುತ್ತಿತ್ತು. ಈಗ ಸಂತೋಷ, ನೆಮ್ಮದಿ, ಆನಂದ, ನಗು ಎನ್ನುವುದನ್ನು ಕೊಳ್ಳುವಂತಾಗಿದೆ. ವಿವಿಧ ಧರ್ಮಗಳ ಹಬ್ಬ, ಆಚರಣೆಗಳ ಮೂಲಕ ಕುಟುಂಬ ಸದಸ್ಯರು ಒಟ್ಟು ಸೇರುತ್ತಿದ್ದರು. ಮನೆಗಳಲ್ಲಿ ನಡೆಯುವ ಶುಭ ಕಾರ್ಯಕ್ರಮಗಳಿಗೆ ನಿಗದಿತ ದಿನಕ್ಕೆ ಮುಂಚಿತವಾಗಿ ಆಗಮಿಸಿ ಕೈ ಕೈ ಜೋಡಿಸಿ ಕೆಲಸ ಮಾಡಿ ಅದನ್ನು ಸಾಂಗವಾಗಿ ನೆರವೇರಿಸಿಕೊಡುತ್ತಿದ್ದರು. ಈಗ ಯಾವುದೇ ಶುಭ ಕಾರ್ಯಕ್ರಮಕ್ಕೆ ಹೋಗುವುದೆಂದರೆ ಊಟದ ಸಮಯಕ್ಕೆ ತೆರಳಿ, ಊಟವಾದ ಬಳಿಕ ಕೈ ತೊಳೆಯಲು ಅವರವರ ಮನೆಗೇ ತೆರಳುವಂಥ ಒತ್ತಡದ ಪರಿಸ್ಥಿತಿ ಇದೆ. ಹಳ್ಳಿಯಿಂದ ದಿಲ್ಲಿಯ ವರೆಗೆ ಈ ಸ್ಥಿತಿ ಎದ್ದು ಕಾಣುತ್ತದೆ.

ಸಂತೋಷಕ್ಕೇನು ಮಾಡಬೇಕು?
ಈ ಪ್ರಶ್ನೆಗೆ ಉತ್ತರ ಒಂದೇ ರೀತಿಯದ್ದಾಗಿರಲು ಸಾಧ್ಯವೇ ಇಲ್ಲ. ಯಾವುದೇ ಕೆಲಸವಿದ್ದರೂ ಶ್ರದ್ಧೆ, ಪ್ರೀತಿಯಿಂದ ಮಾಡಬೇಕು. ಆದಾಗ ಮಾತ್ರ ಗುರಿ, ಯಶಸ್ಸು, ನೆಮ್ಮದಿ ಖಚಿತ. ಆದರೆ ಈಗಂತೂ ಕಾಲಾಯ ತಸೆ¾„ ನಮಃ 

ಹೆಚ್ಚು ಸಂತೋಷದಾಯಕ ರಾಷ್ಟ್ರಗಳು
ಸಂಖ್ಯೆ           ದೇಶ                           ಅಂಕ
1              ನಾರ್ವೆ                            7.54
2              ಡೆನ್ಮಾರ್ಕ್‌                         7.42
3.             ಐಸ್‌ಲ್ಯಾಂಡ್‌                    7.50
4             ಸ್ವಿಜರ್‌ಲ್ಯಾಂಡ್‌                   7.49
5             ಫಿನ್‌ಲಾÂಂಡ್‌                     7.47
6             ನೆದರ್‌ಲ್ಯಾಂಡ್‌                   7.38
7             ಕೆನಡಾ                              7.32
8             ನ್ಯೂಜಿಲೆಂಡ್‌                      7.321
9             ಆಸ್ಟ್ರೇಲಿಯಾ                        7.28
10            ಸ್ವೀಡನ್‌                             7.28
ದುಃಖದಾಯಕ ರಾಷ್ಟ್ರಗಳು
146          ಯೆಮೆನ್‌                           3.59
147           ದಕ್ಷಿಣ ಸೂಡಾನ್‌                  3.59
148           ಲೈಬೀರಿಯಾ                        3.51
159            ಗಿನಿಯಾ                            3.51
150             ಟೋಗೋ                          3.49
151             ರವಾಂಡ                           3.47
152            ಸಿರಿಯಾ                             3.46
153            ಟಾಂಜಾನಿಯಾ                      3.35
154             ಬುರುಂಡಿ                           2.91
155             ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌      2.69

ಸದಾಶಿವ ಖಂಡಿಗೆ

Advertisement

Udayavani is now on Telegram. Click here to join our channel and stay updated with the latest news.

Next