Advertisement

ಹನೂರು: ಕಾಂಗ್ರೆಸ್ –ಬಿಜೆಪಿ ಮೈತ್ರಿ ಅಭ್ಯರ್ಥಿಗಳಿಗೆ ಅಧಿಕಾರ! ಜೆಡಿಎಸ್‍ಗೆ ತೀವ್ರ ಮುಖಭಂಗ

06:43 PM Nov 07, 2020 | sudhir |

ಹನೂರು: 13 ಸದಸ್ಯ ಬಲದ ಹನೂರು ಪಟ್ಟಣ ಪಂಚಾಯಿತಿಯಲ್ಲಿ ಜರುಗಿದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಜೆಡಿಎಸ್‍ಗೆ ತೀವ್ರ ಮುಖಭಂಗ ಉಂಟಾಗಿದೆ.

Advertisement

ಹನೂರು ಪಟ್ಟಣ ಪಂಚಾಯಿತಿಯಲ್ಲಿ 13 ಸದಸ್ಯ ಬಲವಿದ್ದು ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ 8 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ಚಂದ್ರಮ್ಮ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಹರೀಶ್ ಕುಮಾರ್ ಆಯ್ಕೆಯಾಗಿದ್ದಾರೆ. ಇವರಿಗೆ ಪ್ರತಿಸ್ಫರ್ಧಿಗಳಾಗಿದ್ದ ಜೆಡಿಎಸ್‍ನ ಅಧ್ಯಕ್ಷ ಅಭ್ಯರ್ಥಿ ಮಮ್ತಾಜ್‍ಭಾನು ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಆನಂದ್‍ಕುಮಾರ್ 6 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಹನೂರು ಪ.ಪಂನ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಇಂದು ಚುನಾವಣೆ ನಿಗದಿಯಾಗಿದ್ದ ಹಿನ್ನೆಲೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಬಿಜೆಪಿಯ 2, ಕಾಂಗ್ರೆಸ್‍ನ 4 ಮತಗಳ ಜೊತೆ ಶಾಸಕ ನರೇಂದ್ರ ಮತ್ತು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮತ ಚಲಾವಣೆ ಮಾಡಿ ಒಟ್ಟು 8 ಮತಗಳನ್ನು ಪಡೆದು ಮೈತ್ರಿಕೂಟದ ಅಭ್ಯರ್ಥಿಗಳು ವಿಜಯಗಳಿಸಿದ್ದಾರೆ.

ಇದನ್ನೂ ಓದಿ:ಸ್ಥಗಿತಗೊಂಡಿದ್ದ ಮುಂಬೈ ಕನ್ನಡ ಆಕಾಶವಾಣಿ ಕಾರ್ಯಕ್ರಮ ಆರಂಭಿಸಲು ಸಚಿವ ಸಿ.ಟಿ.ರವಿ ಮನವಿ

ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಮ್ಮ ಮಾತನಾಡಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ಶಾಸಕ ನರೇಂದ್ರ, ಹಾಗೂ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಎಂಬ ಯಾವುದೇ ಭೇದಭಾವವಿಲ್ಲದೆ 13 ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸಿ ಹನೂರು ಪಟ್ಟಣವನ್ನು ಮಾದರಿ ಪಟ್ಟವನ್ನಾಗಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.

Advertisement

ನೂತನ ಉಪಾಧ್ಯಕ್ಷ ಹರೀಶ್‍ಕುಮಾರ್ ಮಾತನಾಡಿ ಪ.ಪಂನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕೊರತೆಯಿದ್ದು ಸಿಬ್ಬಂದಿಗಳ ನಿಯೋಜನೆಗೆ ಶಾಸಕರು ಕ್ರಮವಹಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ ಪಟ್ಟಣದಲ್ಲಿ ಇ-ಸ್ವತ್ತು ಪಡೆಯುವುದು ಸ್ವಲ್ಪ ದುಸ್ಥರವಾಗಿದ್ದು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸರಳೀಕರಣಗೊಳಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್, ಶಾಸಕ ನರೇಂದ್ರ ರಾಜೂಗೌಡ, ಸದಸ್ಯರಾದ ಗಿರೀಶ್, ಸಂಪತ್‍ಕುಮಾರ್, ಸೋಮಶೇಖರ್, ರೂಪ, ಪವಿತ್ರಾ, ಮುಮ್ತಾಜ್‍ಭಾನು, ಮಹೇಶ್, ಮಂಜುಳಾ, ಮಹೇಶ್‍ನಾಯ್ಕ, ಆನಂದ್‍ಕುಮಾರ್ ಭಾಗವಹಿಸಿ ಮತಚಲಾವಣೆ ಮಾಡಿದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ನಾಗರಾಜು ಅವರು ಕಾರ್ಯನಿರ್ವಹಿಸಿದ್ದರು.

ಬೆಂಬಲಿಗರ ಸಂಭ್ರಮಾಚರಣೆ: ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಯಗಳಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿಹಂಚಿ ತಮ್ಮ ಪಕ್ಷದ ನಾಯಕರು ಮತ್ತು ಅಭ್ಯರ್ಥಿಗಳ ಪರ ಜಯಘೋಷಗಳನ್ನು ಮೊಳಗಿಸಿದರು.

ಚುನಾವಣೆ ಹಿನ್ನೆಲೆ ಡಿವೈಎಸ್ಪಿ ನಾಗರಾಜು ನೇತೃತ್ವದಲ್ಲಿ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮಂಜಾಗ್ರತೆಯಾಗಿ ಪಟ್ಟಣ ಪಂಚಾಯಿತಿ ಕಚೇರಿಯ 100 ಮೀಟರ್ ಸುತ್ತಲೂ ನಿಷೇಧಾಜ್ಞೆ ಹೊರಡಿಸಲಾಗಿತ್ತು. ಅಂಗಡಿ ಮುಗ್ಗಟ್ಟುಗಳು ಬೆಳಿಗ್ಗೆಯಿಂದಲೇ ಚುನಾವಣಾ ಪ್ರಕ್ರಿಯೆ ಮುಕ್ತಾಯದವರೆಗೂ ಮುಚ್ಚಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next