Advertisement

ಹನೂರು: ಅಧಿವೇಶನದಲ್ಲಿ ಪ್ರತಿಧ್ವನಿಸಿದ ಕ್ಷೇತ್ರದ ಸಮಸ್ಯೆಗಳು; ಶಾಸಕ ನರೇಂದ್ರರಿಂದ ಪ್ರಸ್ತಾಪ

04:28 PM Sep 13, 2022 | Team Udayavani |

ಹನೂರು: ಗುಂಡಾಲ್ ಜಲಾಶಯ ಭರ್ತಿಯಾಗಿದ್ದರೂ ನೀರು ಬಳಕೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕಾಲುವೆಗಳ ದುರಸ್ಥಿಗಾಗಿ ಮತ್ತು15 ಸಾವಿರ ಎಕರೆಗೆ ನೀರು ಉಣಿಸಲು ಕನಿಷ್ಠ12 ಕೋಟಿ ಅನುದಾನದ ಅವಶ್ಯಕತೆಯಿದೆ. ಆದ್ದರಿಂದ ಸಚಿವರು ಹೆಚ್ಚಿನ ಅನುದಾನ ನೀಡಬೇಕು ಎಂದು ಶಾಸಕ ಆರ್. ನರೇಂದ್ರ ವಿಧಾನಸಭಾ ಅಧಿವೇಶನದಲ್ಲಿ ಮನವಿ ಮಾಡಿದರು.

Advertisement

ಬೆಂಗಳೂರಿನಲ್ಲಿ ಜರಗುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ವಿವರ ಪ್ರಸ್ತಾಪ ಮಾಡಿದ ಶಾಸಕ ನರೇಂದ್ರ, ಗುಂಡಾಲ್ ಜಲಾಶಯವು 1980ರಲ್ಲಿ ನಿರ್ಮಾಣವಾಗಿ ಕಳೆದ 2 ವರ್ಷದಿಂದ ನಿರಂತರವಾಗಿ ತುಂಬುತ್ತಿದೆ. ಈ ಜಲಾಶಯವು 15 ಸಾವಿರ ಎಕರೆಯಷ್ಟು ಅಚ್ಚುಕಟ್ಟು ಹೊಂದಿದ್ದು, ಕೇವಲ 2-3 ಸಾವಿರ ಎಕರೆಗೆ ಮಾತ್ರ ಬಳಕೆಯಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಕಾಲುವೆಗಳು ದುರಸ್ಥಿಗೊಂಡಿದ್ದು, ಅವುಗಳ ನವೀಕರಣಕ್ಕಾಗಿ ಅಂದಾಜು 12 ಕೋಟಿ ಅನುದಾನ ಬೇಕೆಂಬ ಲೆಕ್ಕಾಚಾರವನ್ನು ಅಧಿಕಾರಿಗಳು ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಚಿವರು ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ನಿರ್ವಹಣೆಗಾಗಿ ಕಳೆದ 6 ವರ್ಷಗಳಿಂದೀಚೆಗೆ 1 ಕೋಟಿ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದರು.

ಪ್ರಸ್ತಾವನೆ ಬಂದ ಬಳಿಕ ಅನುಮೋದನೆ: ಹನೂರು ನೂತನ ತಾಲೂಕು ಕೇಂದ್ರವಾಗಿ 9 ವರ್ಷ ಕಳೆದಿದ್ದರೂ ಕಚೇರಿಗಳು ಅಸ್ಥಿತ್ವಕ್ಕೆ ಬಾರದಿರುವ ಬಗ್ಗೆ ಮತ್ತು ಮಿನಿ ವಿಧಾನಸೌಧ ನಿರ್ಮಾಣ ಸಂಬಂಧ ಶಾಸಕ ನರೇಂದ್ರ ಪ್ರಶ್ನಿಸಿದ್ದು, ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಈಗಾಗಲೇ ಕೆಲ ತಾಲೂಕು ಮಟ್ಟದ ಕಚೇರಿಗಳನ್ನು ಪ್ರಾರಂಭಿಸಿದ್ದು, ಬಾಕಿ ಉಳಿದಿರುವ ಕಚೇರಿಗಳನ್ನು ಪ್ರಾರಂಭಿಸಲು ಆರ್ಥಿಕ ಇಲಾಖೆಯ ಸಹಮತಯೊಂದಿಗೆ ಹುದ್ದೆಗಳನ್ನು ಸೃಜಿಸಿ ಹಂತ-ಹಂತವಾಗಿ ಕಚೇರಿಗಳನ್ನು ಪ್ರಾರಂಭಿಸಲು ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಕಂದಾಯ ಇಲಾಖೆಯಿಂದ ಸೂಚನೆ ನೀಡಲಾಗುವುದು. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಈಗಾಗಲೇ 8.93 ಎಕರೆ ಜಮೀನು ಮೀಸಲಿಟ್ಟಿದ್ದು, ಕಟ್ಟಡ ನಿರ್ಮಾಣ ಸಂಬಂಧ ಲೋಕೋಪಯೋಗಿ ಇಲಾಖೆಯ ಮುಖ್ಯ ವಾಸ್ತು ಶಿಲ್ಪಿಗಳಿಂದ 2 ಮಾದರಿಯ ನೀಲನಕ್ಷೆ ಪಡೆದಿದ್ದು, ಪರಿಶೀಲನಾ ಹಂತದಲ್ಲಿದೆ. ನಕ್ಷೆ ಅನುಮೋದನೆಗೊಂಡ ಬಳಿಕ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಸ್ವೀಕರಿಸಿ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ನೀಡಲಾಗುವುದು ಎಂದು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next