ಕುಷ್ಟಗಿ: ತಾಲೂಕಿನ ಜುಂಜಲಕೊಪ್ಪ ಗ್ರಾಮದಲ್ಲಿ ಹನುಮಪ್ಪ ದಾಸರ್ ಎಂಬುವವರು ತಮ್ಮ ತಾಯಿಯನ್ನು ಮೂರು ಕಿ.ಮೀ. ದೂರದ ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರು ತರುವ ತಳ್ಳುಗಾಡಿಯಲ್ಲಿ ಮತ್ತೆ ಕರೆದೊಯ್ದ ಪ್ರಸಂಗ ಬೆಳಕಿಗೆ ಬಂದಿದೆ.
ಮೇ 5, 2017ರಂದು “ಉದಯವಾಣಿ’ಯಲ್ಲಿ “ತಳ್ಳುಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ದ ಮಗ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ಜುಂಜಲಕೊಪ್ಪ ಗ್ರಾಮದ 78 ವೃದ್ಧೆ ಹನುಮವ್ವ ಕಲ್ಲಪ್ಪ ದಾಸರ್ ಅವರು ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಗ್ರಾಮಕ್ಕೆ ಬಸ್ ಸೌಲಭ್ಯ ಹಾಗೂ ಬೇರಾವುದೇ ವಾಹನ ಸೌಲಭ್ಯ ಇಲ್ಲದ ಕಾರಣ 3 ಕಿ.ಮೀ. ದೂರದ ಚಳಗೇರಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವುದು ಪುತ್ರನಿಗೆ ಕಷ್ಟವಾಗಿದೆ. ಆದ್ದರಿಂದ ಅನಾರೋಗ್ಯ ಪೀಡಿತ ತಾಯಿಯನ್ನು ಹನುಮಪ್ಪ ನೀರಿನ ಗಾಡಿಯಲ್ಲಿ ತಳ್ಳಿಕೊಂಡು ಹೋಗಿದ್ದಾರೆ. ಈ ಕುಟುಂಬಕ್ಕೆ ಕೂಲಿಯೇ ಜೀವನಾಧರವಾಗಿದ್ದು, ಪಡಿತರ ಚೀಟಿಯ ಆಹಾರ ಧಾನ್ಯ, ವೃದ್ಧಾಪ್ಯ ವೇತನ ಕೊಂಚ ಆಸರೆಯಾಗಿದೆ.
ಚಳಗೇರಾ ಗ್ರಾಮದ ಸಂಗಮೇಶ ಕಟ್ಟಿಮನಿ ಅವರು ಈ ಕುರಿತು ಮಾತನಾಡಿ, ಜುಂಜಲಕೊಪ್ಪ ಗ್ರಾಮಕ್ಕೆ ಬಸ್ ಸೌಕರ್ಯ ಇದುವರೆಗೂ ಇಲ್ಲ. ಪ್ರಯಾಣಿಕರ ಸಾಗಾಟಕ್ಕೆ ಯಾವುದೇ ವಾಹನವಿಲ್ಲ. ಗ್ರಾಮಕ್ಕೆ ಸೌಕರ್ಯವಿಲ್ಲದ ಕಾರಣ ಸ್ವಂತ ವಾಹನ ಇಲ್ಲದ ಬಡ ಕುಟುಂಬದವರು ನಡೆದುಕೊಂಡು ಹೋಗುವುದು ಅನಿವಾರ್ಯ. ಆದ್ದರಿಂದ ರೋಗಿಗಳು, ವೃದ್ಧರು, ಗರ್ಭಿಣಿಯರು ಆಸ್ಪತ್ರೆ ಹಾಗೂ ಅಗತ್ಯ ಕೆಲಸಗಳಿಗೆ ತೆರಳು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ.
2017ರಲ್ಲೂ ವರದಿ ಪ್ರಕಟ: ಮೇ 5. 2017ರಂದು “ಉದಯವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ ಗಮನಿಸಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು, ವೃದ್ಧೆಯ ಮೊಬೈಲ್ ಸಂಖ್ಯೆ ಪಡೆದು, ಸಂಪರ್ಕಿಸಿ ಇನ್ಮುಂದೆ ನೀರಿನ ತಳ್ಳು ಗಾಡಿ ಹತ್ತದಿರುವಂತೆ ಅವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳ 1 ಸಾವಿರ ರೂ. ಹಾಕುತ್ತಿದ್ದಾರೆ. ವೃದ್ಧೆಗೆ ಕೈ ಕಾಲು ನೋವು ಜಾಸ್ತಿಯಾದಾಗಿದ್ದು, ಪುನಃ ಬೆಂಗಳೂರಿನ ದಾನಿಗೆ ಫೋನ್ ಮಾಡಿ, ಅನಾರೋಗ್ಯ ತೀವ್ರವಾಗಿದ್ದು ಬೈಕ್ ಹತ್ತಲು ಬಾರದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಯಾರು ಬೈಕ್ ಹತ್ತಿಸಿಕೊಳ್ಳುವುದಿಲ್ಲ. ಗ್ರಾಮದಲ್ಲಿ ಟಂಟಂ ವಾಹನಗಳು ಕಡಿಮೆ ಇದ್ದು ಅವುಗಳು ಕೃಷಿ ಉತ್ಪನ್ನ ಸಾಗಿಸಲು ಬಳಕೆಯಾಗುತ್ತಿವೆ. ಬಸ್ ಸೌಕರ್ಯ ಮೊದಲೇ ಇಲ್ಲದಿರುವ ಹಿನ್ನೆಲೆಯಲ್ಲಿ ಮಗ ಹನುಮಪ್ಪನ ನೆರವಿನಿಂದ ನೀರಿನ ತಳ್ಳು ಗಾಡಿಯಲ್ಲಿ ಕೂರಿಸಿಕೊಂಡು ಹೋಗುತ್ತಿರುವುದಾಗಿ ಪರಿಸ್ಥಿತಿ ಹೇಳಿಕೊಂಡಿದ್ದಾರೆ.