ಸವಣೂರು: ನೇತ್ರದಾನ ಅತ್ಯಂತ ಶ್ರೇಷ್ಠವಾದ ಕಾರ್ಯ. ಅನೇಕ ಅಂಧರ ಪಾಲಿಗೆ ಬೆಳಕಿನ ಭರವಸೆ ನೀಡುವ ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಅಂಧತ್ವ ನಿವಾರಣೆಗೆ ಮುಂದಾಗಬೇಕು ಎಂದು ಖ್ಯಾತ ಗಾಯಕ ಹನುಮಂತ ಲಮಾಣಿ ತಿಳಿಸಿದರು.
ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಸವಣೂರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೇತ್ರದಾನ ವಾಗ್ಧಾನ ಪತ್ರ ಸಹಿ ಅಭಿಯಾನದಲ್ಲಿ ರವಿವಾರ ಪಾಲ್ಗೊಂಡು, ನೇತ್ರದಾನ ವಾಗ್ಧಾನ ಪತ್ರಕ್ಕೆ ಸಹಿ ಹಾಕಿ ಮಾತನಾಡಿದರು.
ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕು ಪತ್ರಕರ್ತರು ನೇತ್ರದಾನ ವಾಗ್ಧಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಕಾರ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ. ನಾನು ನೇತ್ರದಾನ ವಾಗ್ಧಾನ ಪತ್ರಕ್ಕೆ ಸಹಿ ಹಾಕುವ ಮೂಲಕ ನನ್ನ ಕಾಲಾ ನಂತರ ಕಣ್ಣುಗಳನ್ನು ದಾನವಾಗಿ ನೀಡಲು ಒಪ್ಪಿಗೆ ಸೂಚಿಸಿದ್ದೇನೆ. ಆದ್ದರಿಂದ, ಈ ಕಾರ್ಯದಲ್ಲಿ ಸರ್ವರು ಪಾಲ್ಗೊಂಡು ನೇತ್ರದಾನ ವಾಗ್ಧಾನ ಪತ್ರಕ್ಕೆ ಸಹಿ ಹಾಕಿ ನೇತ್ರದಾನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಪತ್ರಕರ್ತ ಆನಂದ ಮತ್ತಿಗಟ್ಟಿ ಮಾತನಾಡಿ, ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆಯ ಅಂಗವಾಗಿ ಜು. 29 ರಂದು ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗುವ ಹಮ್ಮಿಕೊಂಡಿರುವ ವಿವಿಧ ಸಾಮಾಜಿಕ ಹಾಗೂ ಅಂಧತ್ವ ನಿವಾರಣೆ ಕಾರ್ಯಕ್ರಮ ಕುರಿತು ವಿವರಿಸಿದರು.
ಶಿಕ್ಷಕ ಎನ್.ಕೆ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ಅಶೋಕ ಕಾಳಶೆಟ್ಟಿ, ಗಣೇಶಗೌಡ ಪಾಟೀಲ, ಶಂಕ್ರಯ್ಯ ಹಿರೇಮಠ, ಯೋಗೇಂದ್ರ ಜಂಬಗಿ ಹಾಗೂ ಇತರರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಭಾಗ್ಯಜ್ಯೋತಿ ನಾಗನಗೌಡ ಪಾಟೀಲ, ವೆಂಕಟೇಶ ಮಲ್ಲೇಶಪ್ಪ ಲಮಾಣಿ ಹಾಗೂ ಇತರರು ನೇತ್ರದಾನ ವಾಗ್ಧಾನ ಪತ್ರಕ್ಕೆ ಸಹಿ ಹಾಕಿದರು.