Advertisement

ಜಿಗಿಯದ ಹನುಮ; ಆಂಜನೇಯನಿಗೆ ವ್ಯಾಸರಾಜರ ದಿಗ್ಬಂಧನ

10:25 AM Dec 08, 2019 | mahesh |

ಸೀತೆಯನ್ನು ಹುಡುಕುವ ಹಾದಿಯಲ್ಲಿದ್ದ ಶ್ರೀರಾಮನ ಬದುಕಿನಲ್ಲಿ ಕಿಷ್ಕಿಂಧೆ ಒಂದು ಬಹುದೊಡ್ಡ ತಿರುವು. ಆ ಕಿಷ್ಕಿಂಧೆಯೇ ಕರ್ನಾಟಕದ ಹಂಪಿ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಹಂಪಿಯಲ್ಲಿ ಶ್ರೀರಾಮ ಮತ್ತು ಹನುಮ ಮೊದಲ ಭೇಟಿ ಆಗಿದ್ದು ಎಲ್ಲಿ?- ಎಂದು ಹುಡುಕುತ್ತಾ ಹೋದರೆ, ಶ್ರೀರಾಮನ ದೇಗುಲವೊಂದರ ಕುರುಹೂ ಇಲ್ಲಿ ಕಾಣಸಿಗುತ್ತದೆ. ಅದರ ಸನಿಹವೇ ಇರುವ, ಯಂತ್ರೋದ್ಧಾರಕ ಹನುಮನ ದೇಗುಲ ಒಂದು ವಿಶಿಷ್ಟ ಕ್ಷೇತ್ರ. ವಿಜಯನಗರವನ್ನು ಸ್ಥಾಪಿಸಿ, ವ್ಯಾಸರಾಜರು ಪ್ರತಿಷ್ಠಾಪಿಸಿದ 732 ಹನುಮ ದೇಗುಲಗಳಲ್ಲಿ ಇದೇ ಮೊದಲನೆಯದು ಎನ್ನುವ ನಂಬಿಕೆಯಿದೆ.

Advertisement

ಹನುಮನಿಗೆ ದಿಗ್ಬಂಧನ
ಒಮ್ಮೆ ವ್ಯಾಸರಾಜರು ಈ ಗುಹೆಯಲ್ಲಿ ತಮ್ಮ ಜಪತಪಾದಿಗಳನ್ನು ನಡೆಸುವಾಗ ಅಂಗಾರದಿಂದ (ಇದ್ದಿಲು) ಬಂಡೆಯ ಮೇಲೆ ಅಂಜನೇಯನ ಚಿತ್ರ ಬಿಡಿಸಿದರಂತೆ. ಸುಂದರ ಅಂಜನೇಯನ ಮೂರ್ತಿ ಆ ಬಂಡೆಯಲ್ಲಿ ರೂಪುಗೊಂಡಿತು. ಆದರೆ, ಕ್ಷಣಾರ್ಧದಲ್ಲಿ ಆ ಚಿತ್ರ, ಕಪಿರೂಪ ಧರಿಸಿ ಅಲ್ಲಿಂದ ಜಿಗಿದು ಕಣ್ಮರೆಯಾಯಿತಂತೆ. ವ್ಯಾಸರಾಯರು ಮತ್ತೂಮ್ಮೆ ಚಿತ್ರ ಬಿಡಿಸಿದಾಗಲೂ ಹಾಗೆಯೇ ಆಯಿತು. ಅದೇ ರೀತಿ 12 ಬಾರಿ ಪುನರಾವರ್ತಿಸಿದರು. ನಂತರ ಅವರು ಷಟ್ಕೊàನ ಬರೆದು, ಮಧ್ಯದಲ್ಲಿ ಮತ್ತೆ ಅಂಜನೇಯನ ಚಿತ್ರ ಬಿಡಿಸಿ, ಸುತ್ತಲೂ ಯಂತ್ರಬೀಜಾಕ್ಷರ ಬರೆದು ಪ್ರಾಣದೇವರನ್ನು ದಿಗ್ಬಂಧಿಸುತ್ತಾರೆ. ಆಗ ಉದ್ಭವವಾದ ಆಂಜನೇಯನ ಮೂರ್ತಿ, ಇಲ್ಲಿ ಕಲ್ಲು ಬಂಡೆಯಲ್ಲಿ ಶಾಶ್ವತವಾಗಿ ಪ್ರತಿಷ್ಠಾಪನೆಗೊಂಡಿತು ಎಂಬ ಐತಿಹ್ಯವಿದೆ. ಯಂತ್ರಗಳ ಮಧ್ಯದಲ್ಲಿ ಉದ್ಭವವಾದ ಕಾರಣ “ಯಂತ್ರೋದ್ಧಾರಕ’ ಎಂಬ ಹೆಸರು ಬಂತು.

ಗುಹೆಯ ಒಳಗೆ ಹನುಮ
ಧ್ಯಾನಾಸಕ್ತನಾಗಿರುವ ಹಾಗೂ ಭಕ್ತರ ಕಡೆ ಮುಖ ಮಾಡಿರುವ ಪುರಾತನ ಹನುಮಂತನ ಮೂರ್ತಿಗಳಲ್ಲಿ ಇದು ನಿಜಕ್ಕೂ ಅಪರೂಪ. ವಿಜಯನಗರದ ಅರಸನಾಗಿದ್ದ ತಿಮ್ಮರಾಯನ ಕಾಲದಲ್ಲಿ ಈ ದೇಗುಲ ನಿರ್ಮಾಣವಾಯಿತು. ಬಂಡೆಯ ಮೇಲಿನ ಸಣ್ಣ ಗುಹೆಯಂತಿರುವ ದೇಗುಲದಲ್ಲಿ ಹನುಮನ ವಿರಾಜಮಾನ ರೂಪ, ಭಕ್ತರ ಮನತಣಿಸುತ್ತದೆ. ದೇಗುಲದ ಮುಂಭಾಗದಲ್ಲಿ ಹರಿಯುವ ತುಂಗಾಭದ್ರಾ ನದಿಯ ಭಾಗಕ್ಕೆ “ಚಕ್ರತೀರ್ಥ’ ಎಂದು ಕರೆಯುತ್ತಾರೆ.

ಹನುಮ ದೇಗುಲದ ಮುಂದೆ ಪುರಾತನ ಅತ್ತಿ ಮರವಿದ್ದು, ಅದರ ಕೆಳಗೆ ಅನೇಕ ನಾಗಶಿಲ್ಪಗಳನ್ನು ನೋಡಬಹುದು. ಇಲ್ಲಿನ ಪರಿಸರ ಶಾಂತವಾಗಿದ್ದು, ಮನಸ್ಸಿಗೆ ಅಪಾರ ನೆಮ್ಮದಿ ಸಿಗುತ್ತದೆ. ರಾಮನವಮಿ ಹಾಗೂ ಹನುಮ ಜಯಂತಿಗಳಂದು, ಇಲ್ಲಿ ನಡೆವ ವಿಶೇಷ ಪೂಜೆಗಳಿಗೆ ಸಾವಿರಾರು ಭಕ್ತರು ಸೇರುತ್ತಾರೆ.

ದರುಶನಕೆ ದಾರಿ…
ಹಂಪಿಯ ವಿರೂಪಾಕ್ಷ ದೇಗುಲದಿಂದ 2 ಕಿ.ಮೀ. ದೂರದಲ್ಲಿ ಯಂತ್ರೋದ್ಧಾರಕ ಹನುಮನ ದೇಗುಲವಿದೆ. ತುಂಗಾಭದ್ರಾ ನದಿಯ ದಡದ ಮೇಲೆ, ಸುಂದರ ಪರಿಸರದಲ್ಲಿ ಈ ಹನುಮನ ಸನ್ನಿಧಾನವಿದೆ.

Advertisement

– ಪ್ರಕಾಶ್‌ ಕೆ. ನಾಡಿಗ್‌, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next