ಗದಗ: ಜಿಲ್ಲಾದ್ಯಂತ ಮಸೀದಿಗಳ ಮೇಲೆ ಅಕ್ರಮವಾಗಿ ಅಳವಡಿಸಿರುವ ಬೋಂಗಾಗಳನ್ನು ತೆರವುಗೊಳಿಸಬೇಕು. ನಿಗದಿಗಿಂತ ಹೆಚ್ಚಿನ ಧ್ವನಿ ಹೊರಹೊಮ್ಮಿಸದಂತೆ ಕ್ರಮಕ್ಕೆ ಆಗ್ರಹಿಸಿ ಅಜಾನ್ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಹನುಮಾನ ಚಾಲೀಸ್ ಮೊಳಗಿಸುವ ಮೂಲಕ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜುಮ್ಮಾ ಮಸೀದಿಯಿಂದ ಕೂಗಳೆ ದೂರದಲ್ಲಿರುವ ತ್ರಿಕೂಟೇಶ್ವರ ದೇವಸ್ಥಾನ, ವೀರನಾರಾಯಣ ದೇವಸ್ಥಾನ, ರಾಚೋಟೇಶ್ವರ ದೇವಸ್ಥಾನ, ಜೋಡ ಮಾರುತಿ ಮಂದಿರ, ಮುಳಗುಂದ ನಾಕಾ ಸಮೀಪದ ಶಿವಾಜಿ ಮಂದಿರ, ಒಕ್ಕಲಗೇರಿಯ ದುರ್ಗಾದೇವಿ ದೇವಸ್ಥಾನ, ಹೊನ್ನೆತೆಮ್ಮನ ಗುಡಿ, ಪತ್ರೇಶ್ವರ ದೇವಸ್ಥಾನ, ದ್ಯಾಮವ್ವ, ಖಾನ್ ತೋಟದ ಅಚನೂರು ಹನುಮ ಮಂದಿರಗಳಲ್ಲಿ ಆಜಾನ್ ಮೊಳಗುವ ಸಮಯಕ್ಕೆ ಭಜನೆ, ಭಕ್ತಿ ಮೊಳಗಿಸಲಾಯಿತು. ಬೆಳಗ್ಗೆ 5.15 ಮೊಳಗುವ ಆಜಾನ್‌ಗಿಂತ 20 ನಿಮಿಷಗಳ ಮುಂಚಿತವಾಗಿ ಭಜನೆ ಆರಂಭಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಶ್ರೀರಾಮ ಸೇನೆ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ ಮಾತನಾಡಿ, ದೇವಸ್ಥಾನಗಳಲ್ಲಿ ಹಬ್ಬ ಮತ್ತಿತರೆ ವಿಶೇಷ ಸಂದರ್ಭದಲ್ಲಿ ಮಾತ್ರ ಮೈಕ್‌ಗಳನ್ನು ಅಳವಡಿಸುತ್ತಾರೆ. ಆದರೆ ಮಸೀದಿಗಳಲ್ಲಿ ಸೂರ್ಯೋದಯಕ್ಕೂ ಮುನ್ನವೇ ಕರ್ಕಷ ಶಬ್ದದಲ್ಲಿ ಆಜಾನ್ ಮೊಳಗಿಸುತ್ತಾರೆ.
ದಿನದ ಐದು ಬಾರಿ ಆಜಾನ್ ಮೊಳಗಿಸುವುದರಿಂದ ಸಮೀಪದ ಆಸ್ಪತ್ರೆಗಳ ರೋಗಿಗಳು ಮತ್ತು ಶಾಲಾ, ಕಾಲೇಜಿನ ಮಕ್ಕಳಿಗೆ, ನೆರೆಹೊರೆಯ ಹಿರಿಯ ನಾಗರಿಕರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಭಾರಿ ಕಿರಿಕಿರಿ ಉಂಟಾಗುತ್ತದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಸರ್ವೋತ್ಛ ನ್ಯಾಯಾಲಯ ಈ ಕುರಿತು ಆದೇಶ ಹೊರಡಿಸಿದ್ದರೂ ಪೊಲೀಸರಿಗೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಕಣ್ಣು, ಕಿವಿಯಿದ್ದರೂ ಆಧುನಿಕ ದೃತರಾಷ್ಟ್ರನಂತೆ ವರ್ತಿಸುತ್ತಿದ್ದಾರೆಂದು ಕಿಡಿಕಾರಿದರು.
ಖುರಾನ್‌ನಲ್ಲಿ ಧ್ವನಿವರ್ಧಕ ಬಳಸಬೇಕೆಂದು ಎಲ್ಲಿಯೂ ಹೇಳಿಲ್ಲವಾದ್ದರಿಂದ ಮೌಲ್ವಿಗಳು, ಮುಲ್ಲಾಗಳು ಹಾಗೂ ಸಮುದಾಯದ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲದೇ 50 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಹೊರಹೊಮ್ಮಿಸಬಾರದು ಎಂಬ ನಿರ್ದೇಶನವನ್ನು ಯಾರೂ ಪಾಲಿಸುತ್ತಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವವರಿಗೆ ರಾಜ್ಯಾದ್ಯಂತ ಆಜಾನ್ ಸಂದರ್ಭದಲ್ಲೇ ಭಜನೆ, ಭಕ್ತಿಗೀತೆಗಳನ್ನು ಮೊಳಗಿಸುತ್ತೇವೆ ಎಂದು ಹೇಳಿದರು.
ಇಲ್ಲಿನ ಜುಮ್ಮಾ ಮಸೀದಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮುತ್ತಣ್ಣ ಪವಾಡಶೆಟ್ಟರ, ಸೋಮು ಗುಡಿ, ಮಹೇಶ ರೋಖಡೆ, ಸತೀಶ ಕುಂಬಾರ, ಕಿರಣ ಹಿರೇಮಠ, ಬಸವರಾಜ ಕುರ್ತಕೋಟಿ, ವೆಂಕಟೇಶ ಇದ್ದರು.