ಈಶ್ವರಮಂಗಲ: ಶಿಕ್ಷಣ ಕ್ಷೇತ್ರದಲ್ಲಿ ಊಹೆಗೆ ಮೀರದ ಬದಲಾವಣೆ ಆಗುತ್ತಾ ಇದೆ. ಇಂದಿನ ಶಿಕ್ಷಣ ಪದ್ಧತಿ ನಿಂತ ನೀರಲ್ಲ. ಬೋಧನೆಯಲ್ಲಿ ಹೊಸತನ ಬೇಕು ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ. ಶಿವರಾಮಯ್ಯ ಹೇಳಿದರು. ಅವರು ಹನುಮಗಿರಿ ಶ್ರೀ ಗಜಾನನ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಮುಕ್ತವಾಗಿ ಬೆರೆತುಕೊಳ್ಳಿ
ಮಕ್ಕಳಿಗೆ ಕಲಿಕೆಗೆ ಹೆತ್ತವರು ಪ್ರೋತ್ಸಾಹ ನೀಡಬೇಕೆ ಹೊರತು ನಮ್ಮತನವನ್ನು ಹೇರಬಾರದು. ಮಕ್ಕಳೊಂದಿಗೆ ಮುಕ್ತವಾಗಿ ಬೆರೆತು ಅವರ ಭಾವನೆಗಳಿಗೆ ಬೆಲೆ ಕೊಡಬೇಕು. ದೇಶಾಭಿಮಾನ, ಸಂಸ್ಕಾರ, ಸಂಸ್ಕೃತಿಯ ಬಗ್ಗೆ ತಿಳಿಹೇಳಬೇಕು. ಇದರಿಂದ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಗೌರವಾಧ್ಯಕ್ಷ ಜಿ.ಕೆ. ಮಹಾಬಲೇಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ಗಣೇಶ್ ಜೋಶಿ ಶುಭ ಹಾರೈಸಿದರು. ಪಾಳ್ಯತ್ತಡ್ಕ ಗಜಾನನ ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ಶರ್ಮ ಮತ್ತು ಕ್ರೀಡಾಪಟು ಅನುಶ್ರೀ ಅವರನ್ನು ಸಮ್ಮಾನಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ನಾರಾಯಣ ರೈ ಕುದ್ಕಾಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರವೀಣ್ ರೈ ಮೇನಾಲ, ಪ್ರಾಥಮಿಕ
ಶಾಲಾ ಮುಖ್ಯ ಗುರು ಶಂಕರನಾರಾಯಣ ಭಟ್, ಪ್ರಾಂಶುಪಾಲ ಶಾಮಣ್ಣ ಕೆ. ಉಪಸ್ಥಿತರಿದ್ದರು.
ಉಪನ್ಯಾಸಕ ರಾಮಚಂದ್ರ ಭಟ್ ವರದಿವಾಚಿಸಿದರು. ಶಿಕ್ಷಕಿ ವಿಲಾಸಿನಿ ಬಹುಮಾನಗಳ ಪಟ್ಟಿವಾಚಿಸಿದರು. ಉಪನ್ಯಾಸಕಿ ಶೈಲಜಾ ಸಾಧಕರ ಸಮ್ಮಾನ ಪತ್ರವನ್ನು ವಾಚಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಸ್ಥೆಯ ಸಂಚಾಲಕ ಪಿ. ಶಿವರಾಮ ಸ್ವಾಗತಿಸಿದರು. ಉಪನ್ಯಾಸಕ ಕುಮಾರನರಸಿಂಹ ಭಟ್ ವಂದಿಸಿದರು. ಶಿಕ್ಷಕಿಯರಾದ ರೇಖಾ ಇ. ಹಾಗೂ ಗೌರಿ ನಿರ್ವಹಿಸಿದರು.
ಸಂಸ್ಕಾರಯುತ ಶಿಕ್ಷಣ
ಸಂಸ್ಥೆಯ ಅಧ್ಯಕ್ಷ ನನ್ಯ ಅಚ್ಯುತ ಮೂಡಿತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕಾರಯುತ ಶಿಕ್ಷಣ ನಮ್ಮ ಧ್ಯೇಯವಾಗಿದೆ. ವಿದ್ಯಾ ಸಂಸ್ಥೆಯಲ್ಲಿ 730ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ ಎಂದರೆ ಶಿಕ್ಷಕರ, ಹೆತ್ತವರ ಪರಿಶ್ರಮವಿದೆ. ವಾರ್ಷಿಕೋತ್ಸವದ ಅನಂತರ ವಿಶೇಷ ಕಾರ್ಯಯೋಜನೆಯ ಮೂಲಕ ಶಿಕ್ಷಕರು ಪಠ್ಯವನ್ನು ಬೋಧಿಸಲಿದ್ದಾರೆ ಎಂದು ಹೇಳಿದರು.