ಗಂಗಾವತಿ: ಕೋವಿಡ್ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಹನುಮಮಾಲೆ ವಿಸರ್ಜನೆಗೆ ಬಾರದಂತೆ ನಿಷೇಧ ಹೇರಿದ್ದರೂ ಹನುಮ ಮಾಲೆಧಾರಿಗಳು ನಾಡಿನ ವಿವಿಧ ಭಾಗದಿಂದ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಅಂಜನಾದ್ರಿಯಲ್ಲಿ ಸ್ವಯಂ ಆಗಿ ಮಾಲೆ ವಿಸರ್ಜನೆ ಮಾಡಿ ಪೂಜೆ ಸಲ್ಲಿಸಿ ತೆರಳುತ್ತಿದ್ದಾರೆ.
14 ದಿನಗಳ ಹನುಮಮಾಲೆ ಧಾರಣೆ ನಂತರ ಹನುಮಭಕ್ತರು ಅಂಜನಾದ್ರಿಗೆ ಆಗಮಿಸಿ ಹನುಮಮಾಲೆ ವಿಸರ್ಜನೆ ಮಾಡುವುದು ವಾಡಿಕೆಯಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಈ ಭಾರಿ ಸ್ಥಳೀಯವಾಗಿ ಮಾಲೆ ವಿಸರ್ಜನೆಯ ಕಾರ್ಯ ಮಾಡಿಕೊಳ್ಳಲು ಜಿಲ್ಲಾಡಳಿತ ಮನವಿ ಮಾಡಿ ಅಂಜನಾದ್ರಿಯ ಪ್ರವೇಶಕ್ಕೆನಿಷೇಧ ಹೇರಿತ್ತು. ಆದರೂ ಮಾಹಿತಿ ಕೊರತೆಯಿಂದಾಗಿ ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ.
ಇದನ್ನೂ ಓದಿ:ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಶುಭ ಹಾಗೂ ಅಶುಭ ಫಲಗಳ ಸಮ್ಮಿಲನವಿದೆ
ಸಂಚಾರ ದಟ್ಟಣೆ: ಹನುಮಮಾಲೆ ವಿಸರ್ಜನೆಗಾಗಿ ಆಗಮಿಸಿದ ಹನುಮ ಮಾಲಾಧಾರಿಗಳ ವಾಹನಗಳಿಂದಾಗಿ ಕಡೆಬಾಗಿಲು ಕ್ರಾಸ್ ನಿಂದ ಮುನಿರಾಬಾದ ರಾಷ್ಟ್ರೀಯ ಹೆದ್ದಾರಿ ವರೆಗೆ ಸಂಚಾರ ದಟ್ಟಣೆಯಿಂದ ಸ್ಥಳೀಯರ ಸಂಚಾರಕ್ಕೆ ತೊಂದರೆಯಾಗಿದೆ. ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರ ಕೊರತೆಯಿಂದ ಸಂಚಾರ ನಿಯಂತ್ರಣ ಇಲ್ಲವಾಗಿದೆ.
ವಿಶೇಷ ಅಲಂಕಾರ: ಹನುಮದ್ ವೃತ ನಿಮಿತ್ತ ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಬೆಳಗ್ಗೆ ಅಭಿಷೇಕ ಪೂಜೆ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಗಿದೆ. ದೇಗುಲದ ಒಳಗೆ ಸಾಮಾಜಿಕ ಅಂತರ ಕಾಪಾಡಲಾಗಿದೆ. ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿಲ್ಲ ಎಂದು ತಹಸೀಲ್ದಾರ್ ಎಂ. ರೇಣುಕಾ ಉದಯವಾಣಿಗೆ ತಿಳಿಸಿದ್ದಾರೆ.