ಗಂಗಾವತಿ: ಹನುಮ ಜನಿಸಿದ ಕಿಷ್ಕಿಂದಾ ಅಂಜನಾದ್ರಿಯ ಸುತ್ತ ಶನಿವಾರ ಹನುಮ ಜಯಂತಿಯಂದು ಖಾವಿಧಾರಿ ಹನುಮ ಭಕ್ತರ ದಂಡು ನೆರೆದು ಇಡೀ ಬೆಟ್ಟಕ್ಕೆ ಕಳೆ ತಂದಿತ್ತು. ಹನುಮ ಜಯಂತಿ ನಿಮಿತ್ತ ಹನುಮಮಾಲೆ ಧರಿಸಿದ್ದ ಹನುಮ ಭಕ್ತರು ಶನಿವಾರ ಅಂಜನಾದ್ರಿಯಲ್ಲಿ ಮಾಲಾ ವಿಸರ್ಜನೆ ಮಾಡಿ ಪುನೀತರಾದರು.
ಕಳೆದ ಒಂದು ತಿಂಗಳಿಂದ ತಾಲೂಕು ಆಡಳಿತ ಮತ್ತು ಅಂಜನಾದ್ರಿ ದೇಗುಲ ಕಮಿಟಿಯ ಅಧಿಕಾರಿಗಳು ನಡೆಸಿದ್ದ ಪೂರ್ವತಯಾರಿಯಿಂದಾಗಿ ಹನುಮಮಾಲಾಧಾರಿಗಳ ಮಾಲಾ ವಿಸರ್ಜನೆಯಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ. ದೂರದ ಊರುಗಳಿಂದ ಆಗಮಿಸಿದ್ದ ಭಕ್ತರಿಗೆ ವಾಹನ ನಿಲುಗಡೆ ಸೇರಿ ಅನ್ನ ಪ್ರಸಾದ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಶನಿವಾರ ಬೆಳ್ಳಿಗ್ಗೆ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ನೇತೃತ್ವದಲ್ಲಿ ಉತ್ತರ ಭಾರತದ 108 ಸಾಧು ಸಂತರು ಶ್ರೀಆಂಜನೇಯಸ್ವಾಮಿಗೆ ಜಲಾಭಿಷೇಕ, ಪಂಚಾಮೃತಾಭಿಷೇಕ, ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಪವನಮಾನಹೋಮ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಹನುಮಮಾಲಾಧಾರಿಗಳ ಮಾಲಾ ವಿಸರ್ಜನೆ ಯಶಸ್ವಿಯಾಗಿ ಜರುಗಿತು.
ಗಮನ ಸೆಳೆದ ರಾಜಕಾರಣಿಗಳು: ಈ ಭಾರಿ ಹನುಮ ಜಯಂತಿಯ ನಿಮಿತ್ತ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ದಡೇಸೂಗೂರು ಬಸವರಾಜ, ಮಾಜಿ ಸಚಿವ ಶಿವರಾಜ್ ಎಸ್ ತಂಗಡಗಿ ಸೇರಿ ಕಾಂಗ್ರೆಸ್ ,ಬಿಜೆಪಿಯ ನೂರಾರು ಕಾರ್ಯಕರ್ತರು ಹನುಮಮಾಲೆಧರಿಸಿದ್ದು ವಿಶೇಷವಾಗಿತ್ತು. ಶಾಸಕ ದಡೇಸೂಗೂರು ಬಸವರಾಜ ಹಾಗೂ ಮಾಜಿ ಸಚಿವ ಶಿವರಾಜ್ ತಂಗಡಗಿ ಹನುಮಮಾಲೆಧರಿಸಿ ಕನಕಗಿರಿ ಗಂಗಾವತಿ ಕ್ಷೇತ್ರದ ಹನುಮಂತನ ದೇಗುಲಗಳಿಗೆ ತಮ್ಮ ತಮ್ಮ ಪಕ್ಷದ ಕಾರ್ಯಕರ್ತರ ಜತೆ ತೆರಳಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಶಿವರಾಜ್ ತಂಗಡಗಿಯವರಂತೂ ಇಡೀ ಕೊಪ್ಪಳ ಜಿಲ್ಲೆಯ ಹಾಲಿ ಮಾಜಿ ಶಾಸಕರು ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸಿ ಗಂಗಾವತಿಯ ಚನ್ನಬಸವಸ್ವಾಮಿ ಮಠದಲ್ಲಿ ಹನುಮಮಾಲಾಧಾರಿಗಳ ಧಾರ್ಮಿಕ ಸಭೆ ನಡೆಸಿ ನಗರದ ಪ್ರಮುಖ ಬೀದಿಗಳಲ್ಲಿ ಧಾರ್ಮಿಕ ಮೆರವಣಿಗೆ ನಡೆಸಿದರು.
ಕಿಷ್ಕಿಂದಾ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿಯವರು ಬೆಂಗಳೂರಿನಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದ್ದು ಬಜೆಟ್ ನಲ್ಲಿರುರಿಸಿರುವ 100 ಕೋಟಿ ಬಜೆಟ್ ಅನ್ವಯ ಭೂ ಸ್ವಾಧೀನ ಮಾಡಿಕೊಂಡು ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಸ್ಥಳೀಯ ಜನರಿಗೆ ತೊಂದರೆಯಾಗದಂತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಇಲ್ಲಿಗೆ ಆಗಮಿಸುವ ಹನುಮಭಕ್ತರಿಗೆ ಎಲ್ಲಾ ಮೂಲಸೌಕರ್ಯ ಕಲ್ಪಿಸಲಾಗುತ್ತದೆ.
-ಪರಣ್ಣ ಮುನವಳ್ಳಿ ಶಾಸಕರು.