Advertisement
ರಾಮ-ಸೀತೆಯರು ವಿಯೋಗದಿಂದ ದಗ್ಧರಾಗಿ ಹೋಗಿದ್ದಾರೆ. ಒಬ್ಬರಿಗೊಬ್ಬರ ಕ್ಷೇಮಸಮಾಚಾರಗಳ ಸುಳಿವಿಲ್ಲದೆ ಬಹುಕಾಲ ಕಳೆದು ಹೋಗಿದೆ. ಆಗ ಶ್ರೀರಾಮನಿಂದ ಉಂಗುರವನ್ನು ಪಡೆದು ಸೀತಾಮಾತೆಗೆ ತಲುಪಿಸಿ ಆಕೆಯಿಂದ ಚೂಡಾಮಣಿಯನ್ನು ತಂದು ಶ್ರೀರಾಮನಿ ಗೊಪ್ಪಿಸಿದ ಪರಸ್ಪರರ ಕುಶಲತೆಯ ವಾರ್ತೆಯನ್ನು ಮುಟ್ಟಿಸಿ ಸುಂದರ ಕಾಂಡಕ್ಕೆ ನಾಂದಿಯಾಗಿದ್ದು ಆಂಜನೇಯ.
Related Articles
Advertisement
ಸೀತೆಯನ್ನು ಒಮ್ಮೆಯೂ ಕಂಡಿಲ್ಲದ ಹನುಮ ಸ್ವರ್ಣ ಲಂಕೆಗೆ ಬಂದಿದ್ದಾನೆ. ತಾನು ಸೀತಾಮಾತೆಯ ಕುರಿತಾಗಿ ಕೇಳಿರುವ ಆಕೆಯ ಗುಣಗಳನ್ನು ಆಧಾರವಾಗಿಟ್ಟು ಕೊಂಡು ಆಕೆಯ ರೂಪವನ್ನು ತನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದಾನೆ. ಲಂಕೆಯಲ್ಲಿ ಅದೆಷ್ಟೋ ರೂಪವಂತ ಸ್ತ್ರೀಯರನ್ನ ನೋಡಿದಾಗಲೂ ಈಕೆ ನನ್ನ ಸೀತಾಮಾತೆಯಲ್ಲ, ಈಕೆಯೂ ಅಲ್ಲ.. ಅನ್ನುತ್ತಾ ಕೊನೆಗೆ ಅಶೋಕವನದಲ್ಲಿ ಕುಳಿತ ಸ್ತ್ರೀಯನ್ನು ನೋಡಿ ಆನಂದದಿಂದ ಮರದ ಮೇಲಿ ನಿಂದಲೇ ನಮಸ್ಕರಿ ಸಿದ. ಧುತ್ತನೆ ಆಕೆಯ ಮುಂದೆ ನಿಂತು ನಾನು ಆಂಜನೇಯ, ರಾಮನ ದೂತ’ ಎನ್ನಲಿಲ್ಲ. ಹನು ಮಂತ ಒಬ್ಬ ಮನಶಾಸ್ತ್ರಜ್ಞ. ಆ ರೀತಿ ಹೋದಾಗ ಆಕೆ ಗಾಬರಿ ಯಾಗುತ್ತಾಳೆ ಎಂದು ಯೋಚಿಸಿ, ಮರದ ಮೇಲೆ ಕುಳಿತು ದಶರಥ ಹಾಗೂ ಶ್ರೀ ರಾಮನ ಕಥೆಗಳನ್ನು ಮೆಲುವಾಗಿ ಹಾಡತೊಡಗಿದ. ಆ ಕಥೆ ಗಳನ್ನು ಕೇಳುತ್ತಾ ಕೇಳುತ್ತಾ ಸೀತೆಗೆ ಈ ಹಾಡು ಹಾಡುತ್ತಿರುವವ ನಮ್ಮವನಿರಬೇಕು ಎನಿಸಿತು. ಭಯ ದೂರವಾಯಿತು. ಆಗ ಆಕೆಯ ಮುಂದೆ ಬಂದು ಮಂಡಿ ಯೂರಿ ತನ್ನ ಪರಿಚಯಿಸಿಕೊಂಡು ಶ್ರೀ ರಾಮನ ಮುದ್ರೆಯುಂಗುರವನ್ನಿತ್ತ ಮನಶಾಸ್ತ್ರಜ್ಞ ಹನುಮ.
ಸೀತೆಗೆ ಉಂಗುರವಿತ್ತು ಆಕೆಯಿಂದ ಚೂಡಾ ಮಣಿಯನ್ನು ಪಡೆದಾಗಿದೆ. ಮರಳಿ ಹೊರಡಬೇಕೆನ್ನುವಾಗ ಹನುಮನ ಒಳಗಿದ್ದ ಆ ರಣತಂತ್ರಗಾರ ಜಾಗ್ರತನಾದ. ಹೇಗಿದ್ದರೂ ಇನ್ನೂ ಒಂದೆರಡು ತಿಂಗಳು ಕಳೆದು ಇದೇ ನೆಲಕ್ಕೆ ಯುದ್ಧಕ್ಕೆ ಬರಬೇಕು. ಅಸ್ತ್ರಶಸ್ತ್ರಗಳ ಬಲಾಬಲಕ್ಕಿಂತ ಮೊದಲು ಶತ್ರುವಿನ ಎದೆಯಲ್ಲಿ ಭೀತಿಯನ್ನು ಹುಟ್ಟಿಸಬೇಕು. ಅದರಲ್ಲಿ ಯಶಸ್ವಿಯಾದರೆ ಅರ್ಧ ಯುದ್ಧ ಗೆದ್ದಂತೆ. ಯೋಚನೆ ಬಂದಿದ್ದೇ ತಡ ಅಶೋಕವನದ ಧ್ವಂಸ ಪ್ರಾರಂಭವಾಯಿತು. ತಡೆಯಲು ಬಂದ ಸಾವಿರಾರು ರಾಕ್ಷಸರಿಗೆ ತನ್ನ ಅಗಾಧ ಶಕ್ತಿಯ ಪರಿಚಯ ಮಾಡಿಸಿದ. ಕೊನೆಗೆ ಆಂಜನೇಯನನ್ನು ಬಂಧಿಸಲು ಇಂದ್ರಜಿತು ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಬೇಕಾಯಿತು.
ಮೊದಲ ಬಾರಿ ರಾವಣನನ್ನು ನೋಡಿದಾಗ ಹನುಮಂತ ನಾಡುವ ಮಾತುಗಳು ನಿಜಕ್ಕೂ ನಮಗೆ ಒಳ್ಳೆಯ ಪಾಠ. ಅಹೋ ರೂಪಂ, ಅಹೋ ಧೈರ್ಯಂ, ಅಹೋ ಸಣ್ತೀಂ ಅಹೋದ್ಯುತಿಃ| ಅಹೋ ರಾಕ್ಷಸ ರಾಜಸ್ಯ, ಸರ್ವಲಕ್ಷಣ ಯುಕ್ತಯಾ|| ಏನು ರೂಪ, ಏನು ಧೈರ್ಯ, ಸಣ್ತೀಗಳು ಇವನಲ್ಲಿ! ಸಮಸ್ತ ರಾಜ ಲಕ್ಷಣಗಳಿವೆ ಈ ರಾವಣನಲ್ಲಿ ಎಂದು ಶತ್ರುವಿನಲ್ಲಿ ಇರುವ ಸಕಾರಾತ್ಮಕ ಗುಣಗಳನ್ನು ಗುರುತಿಸಿ ಹೇಳುವ ಶತ್ರುಗುಣ ಪ್ರಶಂಸಕ ಹನುಮ ಇಲ್ಲೂ ನಮಗೆ ಪಾಠ ವಾಗುತ್ತಾನೆ, ಹಾಗೆಂದು ಅವನ ದುರ್ಗುಣ ಗಳನ್ನು ಹೇಳದೇ ಇರುವುದಿಲ್ಲ.
ಎಲ್ಲ ಲಕ್ಷಣಗಳಿವೆ ನಿಜ, ಆದರೆ ಇವನಲ್ಲಿ ಬಲವಾದ ಅಧರ್ಮವೊಂದು ಇಲ್ಲದೇ ಹೋಗಿದ್ದರೆ ಇವನು ಆ ಇಂದ್ರನಿಗೆ ಅಧಿಪತಿಯಾಗುತ್ತಿದ್ದ ಎಂದು ಚುಚ್ಚುತ್ತಾನೆ. ಕೆಲವೇ ಗಂಟೆಗಳಲ್ಲಿ ರಾವಣ ಕುಲ ದವರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಹನುಮ ಈಗ ಸ್ವತಃ ರಾವಣನ ಮುಂದೆ ಕುಳಿತು ನಾನೊಬ್ಬನೇ ಇಷ್ಟೆಲ್ಲ ಮಾಡ ಬಹುದಾದರೆ, ಯೋಚಿಸು ರಾವಣ… ನನಗಿಂತ ಬಲಿಷ್ಠ ರಾದ ಲಕ್ಷಾಂತರ ಮಂದಿ ವಾನರರು ಶ್ರೀ ರಾಮನ ಜತೆಗಿದ್ದಾರೆ. ಎಂದು ಘರ್ಜಿಸಿ ಲಂಕಾಧಿಪತಿಯಲ್ಲೂ ಭಯದ ಮೊದಲ ಬೀಜ ಬಿತ್ತಿದ್ದ ರಣತಂತ್ರಗಾರ ಆಂಜನೇಯ. ಸಾಲದು ಎಂಬಂತೆ ತನ್ನ ಬಾಲಕ್ಕೆ ಹಚ್ಚಿದ ಬೆಂಕಿ ಯಿಂದ ಅರ್ಧ ಲಂಕೆಯನ್ನು ಸುಟ್ಟು ಅರ್ಧ ಯುದ್ಧವನ್ನು ಗೆದ್ದಿದ್ದ.
ರಾವಣನ ಸಂಹಾರ, ಸೀತೆಯ ಅಗ್ನಿ ಪರೀಕ್ಷೆಗಳು ಮುಗಿದಿವೆ. ಅಯೋಧ್ಯೆಯಲ್ಲಿ ಮತ್ತೆ ಸಂಭ್ರಮದ ವಾತಾವರಣ. ಶ್ರೀ ರಾಮ ತನ್ನ ಸತಿ ಸೀತೆಗೆ ಅಪರೂಪದ ರತ್ನಖಚಿತವಾದ ಹಾರವೊಂದನ್ನು ಉಡುಗೊರೆಯಾಗಿ ನೀಡುತ್ತಾನೆ. ಆದರೆ ಸೀತೆ ಇದು ಸೇರಬೇಕಾಗಿರುವುದು, ನಮ್ಮೆಲ್ಲರ ಆನಂದಕ್ಕೆ ಕಾರಣನಾದವನಿಗೆ, ತೇಜ, ಯಶ, ದಕ್ಷತೆ, ಧೃತಿ, ಸಾಮರ್ಥ್ಯ, ನಯ, ವಿನಯ, ಪೌರುಷ, ವಿಕ್ರಮ, ಬುದ್ಧಿ ಈ ಎಲ್ಲ ಗುಣಗಳ ಸಾಕಾರಮೂರ್ತಿ ಹನುಮನಿಗೆ.. ಎನ್ನುತ್ತ ಆ ಹಾರವನ್ನು ಆಂಜನೇಯನ ಕೊರಳಿಗೆ ಹಾಕುತ್ತಾಳೆ. ನಿರಪೇಕ್ಷವಾದ ಸೇವೆಗೆ ಫಲ ನಿಶ್ಚಿತ ಎನ್ನುವುದಕ್ಕೆ ಆಂಜನೇಯನೇ ನಮಗೆ ಉದಾಹರಣೆ.
ಇಂದು ಹನುಮ ಜಯಂತಿ ನಾವು ಸ್ವೀಕರಿಸಿರುವ ಧ್ಯೇಯದ ಅನುಸಂಧಿಯಲಿ ಜೀವಭಾರವನ್ನು ಮರೆಯುವ ಆಂಜನೇಯರು ನಾವಾಗೋಣ.
-ಪ್ರಕಾಶ್ ಮಲ್ಪೆ