Advertisement

ಎಲ್ಲೆಡೆ ಹನುಮ ಜಯಂತಿ ಸಂಭ್ರಮ

03:10 PM Apr 17, 2022 | Team Udayavani |

ಗದಗ: ಕೋವಿಡ್‌-19ರ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸಾಂಕೇತಿಕ ಆಚರಣೆಗೆ ಸೀಮಿತವಾಗಿದ್ದ ಪವನ ಪುತ್ರ ಹನುಮ ಜಯಂತಿಯನ್ನು ಈ ಬಾರಿ ಎಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

Advertisement

ಹನುಮ ಜಯಂತಿ ನಿಮಿತ್ತ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಮಾರುತಿ ಮಂದಿರಗಳಲ್ಲಿ ಶನಿವಾರ ಶ್ರದ್ಧಾ-ಭಕ್ತಿಯಿಂದ ಪೂಜೆ, ಪುನಸ್ಕಾರ ನೆರವೇರಿಸಲಾಯಿತು.

ಗದಗ-ಬೆಟಗೇರಿ ಅವಳಿ ನಗರದ ವಿವಿಧೆಡೆಯಿರುವ ಆಂಜನೇಯ ಸ್ವಾಮಿ ದೇವಸ್ಥಾನಗಳನ್ನು ಬಣ್ಣ ಬಣ್ಣದ ರಂಗೋಲಿ, ತಳಿರು-ತೋರಣ, ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದಲೇ ಧಾರ್ಮಿಕ ವಿವಿಧಾನಗಳೊಂದಿಗೆ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದವು.

ವಿಶೇಷ ಪೂಜೆ: ನಗರದ ಪುರಾತನ ಕಿಲ್ಲಾದ ಜೋಡ ಮಾರುತಿ ದೇವಸ್ಥಾನ, ವಿವೇಕಾನಂದ ನಗರದ ವೀರಾಂಜನೇಯ ದೇವಸ್ಥಾನ, ನರಸಾಪುರದ ಗುಂಡದ ಮಾರುತಿ ಗುಡಿ, ಬಸವೇಶ್ವರ ನಗರದ ಜೋಡ ಹನುಂತದೇವರ ಗುಡಿ, ಗಂಗಾಪುರ ಪೇಟೆಯ ಮಾರುತಿ ಮಂದಿರ, ಹೆಲ್ತ್‌ಕ್ಯಾಂಪ್‌ನ ಮಾರುತಿ ದೇವಸ್ಥಾನ, ರೈಲ್ವೆ ನಿಲ್ದಾಣ ಸಮೀಪದ ಮಾರುತಿ ಮಂದಿರ, ಹುಡ್ಕೊà ಕಾಲೋನಿಯ ಬಯಲು ಆಂಜನೇಯ ದೇವಸ್ಥಾನ, ಶರಣಬಸವೇಶ್ವರ ನಗರದ ಆಂಜನೇಯ ಗುಡಿ, ಸೆಟ್ಲಮೆಂಟ್‌ ಬಡಾವಣೆಯ ಮಾರುತಿ ದೇವಸ್ಥಾನಗಳಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಬೆಳಗ್ಗೆಯಿಂದಲೇ ವಾಯು ಪುತ್ರನಿಗೆ ಮಹಾಭಿಷೇಕ, ರುದ್ರಾಭಿಷೇಕ ನೆರವೇರಿಸಲಾಯಿತು. ಹೋಮ-ಹವನದ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು. ತುಳಸಿ ಅರ್ಚನೆ ಹಾಗೂ ಮಹಾಮಂಗಳಾರತಿ ಬೆಳಗಿ ಇಷ್ಟಾರ್ಥಗಳೊಂದಿಗೆ ನಾಡಿನ ಸಮೃದ್ಧಿಗೆ ಪ್ರಾರ್ಥಿಸಲಾಯಿತು.

Advertisement

ತೊಟ್ಟಿಲೋತ್ಸವ: ಗಂಗಾಪುರ ಪೇಟೆಯ ಬಾಲ ಮಾರುತಿ ದೇವಸ್ಥಾನದಲ್ಲಿ ಮಹಿಳಾ ಮಂಡಳದ ಸದಸ್ಯರು ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು. ಬಾಲ ಮಾರುತಿಯನ್ನು ತೊಟ್ಟಿಲಿಗೆ ಹಾಕಿ, ಜೋಗುಳ ಗೀತೆಗಳನ್ನು ಹಾಡಿದರು. ಉತ್ಸಾಹದಿಂದ ತೊಟ್ಟಿಲು ತೂಗಿ ಕೃತಾರ್ಥರಾದರು. ಅದರಂತೆ ಬೆಳಗ್ಗೆಯಿಂದಲೇ ಭಕ್ತರು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ ಹೂ-ಹಣ್ಣು, ಕಾಯಿ ಅರ್ಪಿಸಿದರು. ಸುಮಂಗಲೆಯರು, ಭಕ್ತರು ಬಾಲ ಹನುಮನನ್ನು ತೊಟ್ಟಿಲಿಗೆ ಹಾಕಿ ತೂಗಿದರು. ನಾಮಕರಣ ಮಾಡಿ ಸಂಭ್ರಮಿಸಿದರು.

ವಿವಿಧೆಡೆ ಅನ್ನಸಂತರ್ಪಣೆ: ಸ್ವಾಮಿ ವಿವೇಕಾನಂದ ನಗರದ ವೀರಾಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ನಡೆಯಿತು. ಪಂಚಾಕ್ಷರಿ ನಗರದ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ನಗರದ ಜೋಡ ಮಾರುತಿ ದೇವಸ್ಥಾನ, ಕೆ.ಎಚ್‌.ಪಾಟೀಲ ಬಡಾವಣೆ, ಬಯಲು ಆಂಜನೇಯ ಸ್ವಾಮಿ ಸೇರಿದಂತೆ ಅವಳಿ ನಗರದ ಅನೇಕ ಮಾರುತಿ ಮಂದಿರಗಳಲ್ಲಿ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next