ದಾವಣಗೆರೆ: ಹನುಮ ಜಯಂತಿ ಪ್ರಯುಕ್ತ ಏ.16ರಂದು ಶೋಭಾಯಾತ್ರೆ ಮತ್ತು ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಹನುಮಂತಪ್ಪ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನುಮ ಜಯಂತಿ ಪ್ರಯುಕ್ತ ಹಮ್ಮಿಕೊಂಡಿರುವ ಶೋಭಾಯಾತ್ರೆ ಮತ್ತು ವೇದಿಕೆ ಕಾರ್ಯಕ್ರಮಕ್ಕೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕಮ್ಯೂನಿಸ್ಟ್ ಒಳಗೊಂಡಂತೆ ಎಲ್ಲಾ ಪಕ್ಷಗಳ ಮುಖಂಡರನ್ನೂ ಆಹ್ವಾನಿಸಲಾಗಿದೆ. ಪಕ್ಷಾತೀತವಾಗಿ ಎಲ್ಲ ಹಿಂದೂ ಬಾಂಧವರು ಒಗ್ಗೂಡಿ ಹನುಮ ಜಯಂತಿ ಆಚರಿಸುತ್ತಿರುವುದು ವಿಶೇಷ ಎಂದರು.
ಶನಿವಾರ ಬೆಳಗ್ಗೆ 11ಕ್ಕೆ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾಗುವ ಶೋಭಾಯಾತ್ರೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡುವರು. ನಾಸಿಕ್ ಮೇಳ, ಡೊಳ್ಳು, ನಾದಸ್ವರ ಮುಂತಾದ ಜಾನಪದ ಕಲಾತಂಡಗಳೊಂದಿಗೆ ಶೋಭಾಯಾತ್ರೆ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ, ಚರ್ಚ್ ರಸ್ತೆ, ರಾಂ ಆ್ಯಂಡ್ ಕೋ ವೃತ್ತ, ಎ.ವಿ. ಕಮಲಮ್ಮ ಮಹಿಳಾ ಕಾಲೇಜು ರಸ್ತೆ ಮೂಲಕ ವೇದಿಕೆ ಕಾರ್ಯಕ್ರಮ ನಡೆಯುವ ಶ್ರೀರಾಮ ಮಂದಿರದಲ್ಲಿ ಮುಕ್ತಾಯವಾಗಲಿದೆ. ಬಹಿರಂಗ ಸಭೆಯಲ್ಲಿ ದಾವಣಗೆರೆ ವಿನೋಬ ನಗರದ ಶ್ರೀ ಜಡೇಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿವಿಧ ಸ್ವಾಮೀಜಿಗಳು, ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಜಿ. ರವೀಂದ್ರ, ಮಲ್ಲೇಶ್, ಬಜರಂಗದಳದ ರಾಜಶೇಖರ್, ಶಕುಂತಲಮ್ಮ ಸುದ್ದಿಗೋಷ್ಠಿಯಲ್ಲಿದ್ದರು.