Advertisement

ಶಿಥಿಲವಾಗಿದೆ ಕೆಮ್ಮಣ್ಣು ತೋನ್ಸೆ ತೂಗು ಸೇತುವೆ! ಸೇತುವೆ ಮೇಲೆ ಪ್ರವಾಸಿಗರ ಮೋಜು

11:46 PM Oct 31, 2022 | Team Udayavani |

ಮಲ್ಪೆ: ಗುಜರಾತ್‌ನ ಮೊರ್ಬಿಯಲ್ಲಿ ಸಂಭವಿಸಿದ ತೂಗು ಸೇತುವೆ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿರುವಾಗಲೇ ದುಸ್ಥಿತಿಯಲ್ಲಿರುವ ಉಡುಪಿಯ ಕೆಮ್ಮಣ್ಣು ತೂಗುಸೇತುವೆಯೂ ಎಷ್ಟು ಸುಭದ್ರ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.

Advertisement

ಜಿಲ್ಲಾಡಳಿತ ತತ್‌ಕ್ಷಣ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಕೆಮ್ಮಣ್ಣು-ತೋನ್ಸೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ತೂಗುಸೇತುವೆಯನ್ನು ತಿಮ್ಮಣ್ಣ ಕುದ್ರು ಭಾಗದ ಜನರ ಅನುಕೂಲಕ್ಕಾಗಿ 80ರ ದಶಕದಲ್ಲಿ ನಿರ್ಮಿಸಲಾಗಿತ್ತು. ವರ್ಷಗಳ ಹಿಂದೆ ತಿಮ್ಮಣ್ಣ ಕುದ್ರುವಿಗೆ ಶಾಶ್ವತ ಸೇತುವೆ ನಿರ್ಮಾಣಗೊಂಡಿರುವುದರಿಂದ ತೂಗುಸೇತುವೆಯನ್ನು ಸ್ಥಳೀಯರು ಬಳಸುತ್ತಿಲ್ಲ. ಪ್ರಸ್ತುತ ಅದು ಪ್ರವಾಸಿಗರ ಆಕರ್ಷಣೆ ಭಾಗವಾಗಿ ಉಳಿದುಕೊಂಡಿದೆ. ವಾರಾಂತ್ಯ ದಿನಗಳಲ್ಲಿ ಈ ಸೇತುವೆಯನ್ನು ನೋಡಲು, ವಿಹರಿಸಲು, ಮೋಜಿಗಾಗಿ ಸಾಕಷ್ಟು ಮಂದಿ ಪ್ರವಾಸಿಗರು ಬರುತ್ತಾರೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇತುವೆ ಮೇಲೆ ಸೇರಿಕೊಂಡು ಮೋಜು ಮಾಡುತ್ತಾರೆ.

ಶಿಥಿಲವಾಗುತ್ತಿದೆ
ಈ ಸೇತುವೆಯ ಕೆಲವು ಭಾಗದಲ್ಲಿ ಹಾಳಾಗಿರುವುದು ಕಂಡು ಬಂದಿದೆ. ತಡೆಗೋಡೆ ರಾಡುಗಳು ಅಲ್ಲಲ್ಲಿ ತುಂಡಾಗಿವೆ. ತೂಗುಸೇತುವೆಯ ನಿರ್ವಹಣೆಯೂ ಇಲ್ಲ; ಹೇಳುವರು ಕೇಳುವರು ಯಾರೂ ಇಲ್ಲ ಎಂಬ ಸ್ಥಿತಿ ಇದೆ. ಗ್ರಾ.ಪಂ. ಎಚ್ಚರಿಕೆ ಮಾರ್ಗಸೂಚಿ ಫ‌ಲಕವನ್ನು ಅಳವಡಿಸಿದ್ದರೂ ಇದನ್ನು ಅವಗಣಿಸುವರೆ ಹೆಚ್ಚು.
ಈ ಹಿಂದೆ ಉದಯವಾಣಿ ತೂಗು ಸೇತುವೆಯ ಅಪಾಯಕಾರಿ ಸ್ಥಿತಿಯ ಬಗ್ಗೆ ವರದಿಯನ್ನು ಪ್ರಕಟಿಸಿ ಎಚ್ಚರಿಕೆ ನೀಡಿತ್ತು. 2015-16ರಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ಕೆಲವು ಭಾಗವನ್ನು ದುರಸ್ತಿಪಡಿಸಲಾಗಿತ್ತು. ಪ್ರವಾಸೋದ್ಯಮವಾಗಿ ಗಮನ ಸೆಳೆದ ಈ ಸೇತುವೆಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲು ಗ್ರಾ.ಪಂ.ನಲ್ಲಿ ಅನುದಾನವಿಲ್ಲ. ಆದರೆ ಸೇತುವೆ ನಿರ್ವಹಣೆ ಮತ್ತು ಅಭಿವೃದ್ಧಿ ಪ್ರವಾಸೋದ್ಯಮ ಇಲಾಖೆ, ಜಿ.ಪಂ.ಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಎರಡು ಕಡೆಗಳಿಂದ ಇದನ್ನು ಅವಗಣಿಸಲಾಗಿದೆ ಎಂದು ಗ್ರಾ.ಪಂ. ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ಸಂಭಾವ್ಯ ದುರ್ಘ‌ಟನೆಗಳನ್ನು ತಪ್ಪಿಸಲು, ಪ್ರವಾಸೋದ್ಯಮ ತಾಣವನ್ನು ಹೆಚ್ಚು ಸುರಕ್ಷಿತವಾಗಿಸಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಗಂಭೀರ ಚಿಂತನೆ ನಡೆಸಿ ಕ್ರಮ ತೆಗೆದುಕೊಳ್ಳಬೇಕಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next