Advertisement

ಕೋಟಿಲಿಂಗ ಅತಿಥಿ ಗೃಹದ ಕೀಲಿ ಕಾರ್ಯದರ್ಶಿ ಕೈಗೆ

07:45 AM Mar 05, 2019 | Team Udayavani |

ಬಂಗಾರಪೇಟೆ: ಕೋಟಿಲಿಂಗ ದೇವಾಲಯದ ಆವರಣದಲ್ಲಿ ಕಾರ್ಯದರ್ಶಿ ಕೆ.ವಿ.ಕುಮಾರಿಗೆ ಅತಿಥಿಗೃಹದ ಕೀಲಿ ನೀಡಲು ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ನಿರಾಕರಣೆ ಮಾಡಿದ್ದರಿಂದ ತಹಶೀಲ್ದಾರ್‌ ಕೆ.ರಮೇಶ್‌ ತಾಕೀತು ಮಾಡಿ ಕೀಲಿ ಕೊಡಿಸಿದ ಪ್ರಸಂಗ ನಡೆಯಿತು.

Advertisement

ಕಳೆದ 3 ದಿನಗಳ ಹಿಂದೆ ಡಿವೈಎಸ್‌ಪಿ, ಪರಮೇಶ್ವರ್‌ಹೆಗಡೆ, ಕೋಲಾರ ಉಪವಿಭಾಗಾಧಿಕಾರಿ ಸೋಮಶೇಖರ್‌, ಕೆಜಿಎಫ್ ತಹಶೀಲ್ದಾರ್‌ ಕೆ.ರಮೇಶ್‌ ನೇತೃತ್ವದಲ್ಲಿ ಹಲವಾರು ಬಾರಿ ಈ ಎರಡೂ ಗುಂಪುಗಳಿಗೆ ಮಾತುಕತೆ ಮೂಲಕ ಬುದ್ಧಿವಾದ ಹೇಳಿ ಮಹಾಶಿವರಾತ್ರಿ ಜಾತ್ರೆ ಸುಸೂತ್ರವಾಗಿ ನಡೆಸಲು ಸೂಚನೆ ನೀಡಿದ್ದರು. 

ದೇವಾಲಯದಲ್ಲಿ ಸುಮಾರು 6 ದಿನ ಜಾತ್ರೆ ನಡೆಯುವುದರಿಂದ ಕೆ.ವಿ.ಕುಮಾರಿ ಹಾಗೂ ಡಾ.ಶಿವಪ್ರಸಾದ್‌ ಹೊಂದಾಣಿಕೆಯಿಂದ ಕಾರ್ಯಕ್ರಮಗಳನ್ನು ನಡೆಸುವಂತೆ ಅಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ, ಕಾರ್ಯದರ್ಶಿ ಕೆ.ವಿ.ಕುಮಾರಿಗೆ ಅತಿಥಿಗೃಹದ ಬೀಗ ನೀಡದೇ ಸತಾಯಿಸುತ್ತಿದ್ದರಿಂದ ತಹಶೀಲ್ದಾರ್‌ ಕೆ.ರಮೇಶ್‌, ಕಂದಾಯ ಅಧಿಕಾರಿಗಳು ಸೋಮವಾರ ಬೆಳಗ್ಗೆ 7ಕ್ಕೆ ಆಗಮಿಸಿ ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ರಿಗೆ ಬೀಗ ನೀಡುವಂತೆ ಸೂಚನೆ ನೀಡಿದರು.

ಆದರೆ, ಶಿವಪ್ರಸಾದ್‌ ವಿರೋಧ ವ್ಯಕ್ತಪಡಿಸಿದರು. ಇದರಿಂದ ಕೋಪಗೊಂಡ ಕೆಜಿಎಫ್ ತಹಶೀಲ್ದಾರ್‌ ಕೆ.ರಮೇಶ್‌, ಅತಿಥಿಗೃಹದ ಕೀಲಿ ನೀಡದೇ ಹೋದಲ್ಲಿ ತಾವು ಇರುವ ಅತಿಥಿಗೃಹವನ್ನು ಖಾಲಿ ಮಾಡುವಂತೆ ತಾಕೀತು ಮಾಡಿದರು. ಅಲ್ಲದೇ, ದೇವಾಲಯದ ಆಸ್ತಿ ವಿವಾದ ಏನೇ ಇದ್ದರೂ ಕೋರ್ಟ್‌ನಲ್ಲಿಟ್ಟುಕೊಳ್ಳಿ.

ಅತಿಥಿ ಗೃಹದ ಬೀಗದ ಕೀಲಿ ನೀಡದೇ ಇದ್ದಲ್ಲಿ ನೀವೂ ಖಾಲಿ ಮಾಡಿ ಬೇರೆಡೆಗೆ ಹೋಗುವಂತೆ ಖಡಕ್‌ ಆಗಿ ಎಚ್ಚರಿಕೆ ನೀಡಿದರು. ನಂತರ ತಹಶೀಲ್ದಾರ್‌ ಕೆ.ರಮೇಶ್‌ರ ಆದೇಶಕ್ಕೆ ಮಣಿದು ಅತಿಥಿ ಗೃಹದ ಬೀಗದ ಕೀಲಿ ನೀಡಿದರು. ನಂತರ ತಹಶೀಲ್ದಾರ್‌ ತಮ್ಮ ಸಿಬ್ಬಂದಿಯಿಂದಲೇ ಬೀಗ ತೆಗೆದು ಸುಮಾರು ಒಂದು ಗಂಟೆಗಳ ಕಾಲ ಕುಳಿತು ದೇಗುಲದಲ್ಲಿ ನಡೆಯುತ್ತಿರುವ ಪೂಜಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.

Advertisement

ಈ ಹಿಂದೆಯೂ ಕಾರ್ಯದರ್ಶಿಗೆ ಕೀಲಿ ನೀಡಲು ಸೂಚನೆ: ಕಮ್ಮಸಂದ್ರದ ಶ್ರೀಕೋಟಿಲಿಂಗೇಶ್ವರ ದೇಗುಲದ ಆವರಣದಲ್ಲಿರುವ ಅತಿಥಿಗೃಹದಲ್ಲಿ ಡಾ.ಶಿವಪ್ರಸಾದ್‌ ತನ್ನ ಕುಟುಂಬ ಸಮೇತ ವಾಸ್ತವ್ಯ ಹೂಡಿದ್ದಾರೆ. ಅಲ್ಲದೇ, ಕಲ್ಯಾಣ ಮಂಟಪದ ಪಕ್ಕದ ಮತ್ತೂಂದು ಅತಿಥಿ ಗೃಹಕ್ಕೆ ಡಾ.ಶಿವಪ್ರಸಾದ್‌ ಬೀಗ ಜಡಿದು ಯಾರನ್ನೂ ಒಳಬಿಟ್ಟಿರಲಿಲ್ಲ. ಈ ಹಿಂದೆ ಕೆ.ವಿ.ಕುಮಾರಿಗೆ ಅತಿಥಿಗೃಹದ ಬೀಗ ನೀಡುವಂತೆ ಬೇತಮಂಗಲ ಸಬ್‌ ಇನ್ಸ್‌ಪೆಕ್ಟರ್‌ ಸುನೀಲ್‌ಕುಮಾರ್‌ ಹಲವು ಬಾರಿ ಚರ್ಚಿಸಿ ತಿಳಿಸಿದ್ದರೂ ಶ್ರೀಗಳ ಪುತ್ರ ಶಿವಪ್ರಸಾದ್‌ ಮನ್ನಣೆ ನೀಡಿರಲಿಲ್ಲ.

ಇಬ್ಬರಿಗೂ ಸಂಸದರಿಂದ ಬುದ್ಧಿವಾದ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಸಂಸದ ಕೆ.ಎಚ್‌.ಮುನಿಯಪ್ಪ ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲಕ್ಕೆ ಸೋಮವಾರ ಭೇಟಿ ನೀಡಿದ್ದರು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಬ್ರಹ್ಮ ರಥೋತ್ಸವ ವೀಕ್ಷಿಸಿದರು. ನಂತರ ಲಿಂಗೈಕ್ಯರಾದ ಶ್ರೀಗಳು ವಾಸವಿದ್ದ ಜಾಗಕ್ಕೆ ಬಂದು ನಮಿಸಿದರು. ಬಳಿಕ,  ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ರನ್ನು ಕರೆಸಿ ಕೆ.ವಿ.ಕುಮಾರಿ ಸುಮಾರು 30 ವರ್ಷಗಳಿಂದ ದೇಗುಲದ ಅಭಿವೃದ್ಧಿಗಾಗಿ ಶ್ರೀಗಳ ಜೊತೆ ಶ್ರಮಿಸಿದ್ದಾರೆ.

ನಿಮಿಗಿನ್ನೂ ಅನುಭವದ ಕೊರತೆ ಇದೆ. ಕೆ.ವಿ.ಕುಮಾರಿ ಅವರನ್ನು ಜೊತೆಯಲ್ಲಿಟ್ಟುಕೊಂಡು ಯಾವುದೇ ವಿವಾದ ಮಾಡಿಕೊಳ್ಳದೇ ಒಗ್ಗಟ್ಟಿನೊಂದಿಗೆ ದೇವರ ಕೆಲಸ ಮಾಡಿ. ನೀವಿಬ್ಬರೂ ಕಿತ್ತಾಡುವುದರಿಂದ ದೇಗುಲದ ಪ್ರತೀತಿಗೆ ಕೆಟ್ಟ ಹೆಸರು ಬರುತ್ತದೆ. ನಿಮ್ಮಿಬ್ಬರ ನಡುವೆ ಕೆಲವರು ವಿವಿಧ ಕಾರಣಗಳಿಗಾಗಿ ತಪ್ಪು ಸಂದೇಶಗಳನ್ನು ರವಾನೆ ಮಾಡುತ್ತಿರುವುದು ತಿಳಿದು ಬಂದಿದೆ. ಇವೆಲ್ಲಾ ನಡೆಯದಂತೆ ಎಚ್ಚರ ವಹಿಸಬೇಕೆಂದು ಬುದ್ಧಿವಾದ ಹೇಳಿದರು.

* ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next