ಗಂಗಾವತಿ: ಕಳೆದ 4 ದಿನಗಳಿಂದ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ವಿಕಲಚೇತನ ಅನಾಥ ವ್ಯಕ್ತಿಯೊಬ್ಬ ಮಳೆಯಲ್ಲೇ ನೆನೆಯುತ್ತಾ ಬಿದ್ದಿರುವ ಅಮಾನವೀಯ ಘಟನೆ ಗಂಗಾವತಿ ನಗರದಲ್ಲಿ ಜರುಗಿದೆ.
ನಗರಕ್ಕೆ ಅನ್ಯ ಊರಿನಿಂದ ಆಗಮಿಸಿದ ವ್ಯಕ್ತಿ ಮಳೆಯಿಂದಾಗಿ ಬೇರೆ ಕಡೆ ಹೋಗಲಾರದೆ ಬಸ್ ನಿಲ್ದಾಣದ ಮುಂಭಾಗದಲ್ಲಿಯೇ ಬಿದ್ದಿದ್ದಾನೆ. ಕಾಲುಗಳಿ,ಲ್ಲ ದೇಹದ ನಡುವಿನಲ್ಲಿ ಶಕ್ತಿಯಿಲ್ಲದ ಕಾರಣ ತೆವಳುತ್ತಾ ಈತ ಚಲಿಸುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 4 ದಿನಗಳಿಂದ ಮಳೆ ಸುರಿಯುತ್ತಿದ್ದು ಚಳಿ ಮತ್ತು ಮಳೆಯಲ್ಲಿಯೇ ಬಿದ್ದಿರುವ ವಿಕಲಚೇತನನ ಕಂಡು ಇಲ್ಲಿಯ ಆಟೋ ನಿಲ್ದಾಣ ದಲ್ಲಿರುವ ಚಾಲಕರು ಪ್ಲಾಸ್ಟಿಕ್ ಹೊದಿಕೆಯನ್ನು ಮಾತ್ರ ಮುಚ್ಚಿದ್ದಾರೆ. ಸುತ್ತಲಿನ ಅಂಗಡಿಯವರು ಉಪಾಹಾರ ಮತ್ತು ನೀರನ್ನು ಕೊಡುತ್ತಿದ್ದಾರೆ.
ಇದನ್ನೂ ಓದಿ:ಅರ್ಧಕ್ಕರ್ಧ ತಗ್ಗಿದ ನಿಯಮ ಉಲ್ಲಂಘನೆ: ಕೋವಿಡ್ ಭೀಕರತೆಯಿಂದ ನಿಯಮ ಪಾಲನೆ
ಕೂಗಳತೆಯಲ್ಲೇ ನಗರಸಭೆಯಿದೆ, ಪೊಲೀಸ್ ಠಾಣೆಗಳಿವೆ. ಇತರ ಇಲಾಖೆಗಳ ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಇಂಥವರ ಸುರಕ್ಷತೆಗಾಗಿ ಪ್ರತಿವರ್ಷ ನಗರಸಭೆಗೆ ಕೋಟ್ಯಂತರ ರೂ ಅನುದಾನ ಬರುತ್ತದೆ. ನಗರಸಭೆ ವತಿಯಿಂದ ನಿರಾಶ್ರಿತರ ಕೇಂದ್ರವನ್ನು ಕಳೆದ 3 ವರ್ಷಗಳ ಹಿಂದೆ ಆರಂಭ ಮಾಡಲಾಗಿದೆ. ಇಲ್ಲಿ ಬಿದ್ದಿರುವ ಅನಾಥ ವಿಕಲಚೇತನನ ಬಗ್ಗೆ ಯಾರಿಗೂ ಮಾಹಿತಿ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಸಂಬಂಧಪಟ್ಟ ಇಲಾಖೆಯವರು ಇಂತಹ ವ್ಯಕ್ತಿಗಳ ಸುರಕ್ಷತೆ ಮತ್ತು ಕ್ಷೇಮದ ಬಗ್ಗೆ ಕಾಳಜಿ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ