ಚಿತ್ರದುರ್ಗ: ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ವರ್ಷದ ನಂತರ ಬಳಿಕ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದಾರೆಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ವಿರುದ್ಧ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದ ಘಟನೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನಡೆದಿದೆ.
ಭಾನುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಎಂಎಲ್‌ಸಿ ರಘು ಆಚಾರ್ ಭಾಗ ವಹಿಸಿದ್ದರು. ಆಯ್ಕೆಯಾದಾಗಿನಿಂದಲೂ ಕಚೇರಿಗೆ ಆಗಮಿಸದಿದ್ದ ರಘು ಈಗ ಚಿತ್ರದುರ್ಗದಿಂದ ಸ್ಪರ್ಧಿಸುವ ಉದ್ದೇಶದಿಂದ ಸಭೆ ಕರೆದಿದ್ದಾರೆ.
ಹೊರಗಿನವರು ಸ್ಪರ್ಧಿಸಲು ಅವಕಾಶ ಕೊಡುವುದಿಲ್ಲವೆಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಆಚಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಆಚಾರ್‌ರ ಅಂಗ ರಕ್ಷಕರನ್ನು ಹೊರಗೆ ಕಳುಹಿಸಿ ಆಚಾರ್‌ರ ಬೆಂಬಲಿಗರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊರಗೆ ಎಳೆದುಕೊಂಡು ಹೋಗಿ ಹಲ್ಲೆಯನ್ನೂ ಮಾಡಿದರು.
ಬಳಿಕ ಕಾರ್ಯಕರ್ತರನ್ನು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಯಣ್ಣ ಸಮಾಧಾನ ಪಡಿಸಿದರು. ಬಳಿಕ ಮಾತನಾಡಿದ ರಘು ಆಚಾರ್, ತಾವು ಚಿತ್ರದುರ್ಗದಿಂದ ಸ್ಪರ್ಧಿಸುವ ಉದ್ದೇಶ ಹೊಂದಿಲ್ಲ. ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸ್ಪರ್ಧಿಸಲು ಸೂಚಿಸಿದ್ದಾರೆ. ಮೂರ್‍ನಾಲ್ಕು ತಿಂಗಳು ಗಳಿಂದ ಅನಾರೋಗ್ಯ ಸಮಸ್ಯೆ ಕಾಡುತ್ತಿರುವುದರಿಂದ ಕ್ಷೇತ್ರಕ್ಕೆ ಬರಲಾಗಿಲ್ಲ. ತಪ್ಪಾಗಿದೆ ಎಂದು ಕಾರ್ಯಕರ್ತರನ್ನು ಕೈಮುಗಿದು ಕ್ಷಮೆ ಕೋರಿದರು.