ಗದಗ: ಮುದ್ರಣ ಕಾಶಿ ಗದುಗಿನಲ್ಲಿ ಬೇಸಿಗೆಯ ಬಿಸಿಲಿನೊಂದಿಗೆ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಕಣ ಕಾವೇರುತ್ತಿದೆ. ಸತತ ಒಂದು ದಶಕದಿಂದ ಕ್ಷೇತ್ರವನ್ನು ಪ್ರತಿನಿಧಿಸಿರುವ ಹಾಲಿ ಸಂಸದ ಶಿವಕುಮಾರ ಉದಾಸಿ ಹಾಗೂ ಸ್ಥಳೀಯರಾದ ಮಾಜಿ ಶಾಸಕ ಡಿ.ಆರ್.ಪಾಟೀಲರನ್ನು ಮತದಾರ ಪ್ರಭುಗಳು ಅಳೆದು ತೂಗುವ ಜಿಜ್ಞಾಸೆಯಲ್ಲಿ ತೊಡಗಿದ್ದಾರೆ.
ಗದಗ ಮತ ಕ್ಷೇತ್ರವು ಒಂದು ನಗರಸಭೆ, ಒಂದು ಪಟ್ಟಣ ಪಂಚಾಯತ್ ಹಾಗೂ 13 ಗ್ರಾಪಂಗಳನ್ನು ಒಳಗೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ಅವಲೋಕಿಸಿದರೆ, ಕ್ಷೇತ್ರದಲ್ಲಿ “ಕೈ’, “ಕಮಲ’ ಸಮಬಲ ಸಾ ಧಿಸಿವೆ. ಕೇವಲ 1800 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಪಾಟೀಲ ಜಯ ಸಾಧಿಸಿದ್ದರು. ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆ ಸಹಜವಾಗಿಯೇ ಕುತೂಹಲ ಕೆರಳಿಸಿದೆ. ಯಾವ ಪಕ್ಷ ಹೆಚ್ಚು ಮತ ಸೆಳೆಯುತ್ತದೋ ಎಂಬ ಚರ್ಚೆಗಳು ಶುರುವಾಗಿವೆ.
ಗದಗ ತಾಲೂಕು 1,097 ಚದುರ ಕಿ.ಮೀ ವಿಸ್ತೀರ್ಣ ಹೊಂದಿದೆ. ಬಹುತೇಕ ಮಳೆಯಾಶ್ರಿತ ಪ್ರದೇಶ. ಜೋಳ, ಮೆಕ್ಕೆ ಜೋಳ, ಹತ್ತಿ, ತೊಗರಿ, ಶೇಂಗಾ, ಸೂರ್ಯಕಾಂತಿ ಇಲ್ಲಿನ ಪ್ರಮುಖ ಬೆಳೆಗಳು. ಗದಗ ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಕೈಗಾರಿಕೆಗಳಿಲ್ಲ. ಮಳೆ ಬಂದರೆ ಬೆಳೆ, ಇಲ್ಲವೇ ಗುಳೆ ಎಂಬುದು ಇಲ್ಲಿನ ಪರಿಸ್ಥಿತಿ. ಬರ-ನೆರೆ ಬಂದಾಗಲೆಲ್ಲಾ ಜನರು ತುತ್ತಿನ ಚೀಲಕ್ಕಾಗಿ ಪಟ್ಟಣಗಳತ್ತ ಹೆಜ್ಜೆ ಹಾಕುವುದು ಅನಿವಾರ್ಯ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಸತತ ನಾಲ್ಕು ವರ್ಷಗಳಿಂದ ಭೀಕರ ಬರಗಾಲ ಕಾಡಿದರೂ, ಗುಳೆ ಹೋಗುವವರ ಸಂಖ್ಯೆ ಹೆಚ್ಚಾಗಿ ಕಾಣಲಿಲ್ಲ. ದಶಕಗಳಿಂದ ಕ್ಷೇತ್ರದ ಜನರನ್ನು ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಸುಧಾರಿಸಿದೆ. ಗದಗ- ಬೆಟಗೇರಿ 24×7, ಹಳ್ಳಿಗಳಿಗೆ ಪೈಪ್‌ಲೈನ್ ಮೂಲಕ ನೀರೊದಗಿಸುವ ಡಿಬಿಒಟಿ(ಬಹುಗ್ರಾಮ ಕುಡಿಯುವ ನೀರಿನ ಯೋಜನೆ) ಗಳಿಂದಾಗಿ ಸತತ ಬರಗಾಲ ಮುಂದುವರಿದಿದ್ದರೂ, ಅಷ್ಟಾಗಿ ನೀರಿನ ಸಮಸ್ಯೆ ತಲೆದೋರಿಲ್ಲ ಎಂಬುದು ಸಮಾಧಾನಕರ ಸಂಗತಿ.
ಶಾಸಕರ ನಿಧಿ , ಕೇಂದ್ರ ಸರ್ಕಾರದ ಅಮೃತ ನಗರ ಯೋಜನೆಯಡಿ ಅವಳಿ ನಗರದ ವಿವಿಧೆಡೆ 10ಕ್ಕೂ ಹೆಚ್ಚು ಉದ್ಯಾನಗಳನ್ನು ಅತ್ಯಾಕರ್ಷಕವಾಗಿ ಅಭಿವೃದ್ಧಿಗೊಳಿಸಲಾಗಿದೆ. ಅವುಗಳಲ್ಲಿ ಫಿಟ್ನೆಸ್ ಜಿಮ್ ಗಳನ್ನು ಅಳವಡಿಸಿದ್ದು, ವಾಯು ವಿಹಾರಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಒಳಂಗಣ ಕ್ರೀಡಾಂಗಣ, ಕ್ರಿಕೆಟ್ ನೆಟ್ ಪ್ರ್ಯಾಕ್ಟೀಸ್ ಪಿಚ್, ಹಾಕಿ ಮೈದಾನಗಳು ಕ್ರೀಡಾಗಳಿಗೆ ಸ್ಫೂರ್ತಿ ನೀಡುತ್ತಿವೆ.
ಗದುಗಿಗೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನದಿಂದಾಗಿ ಸೂಕ್ಷ್ಮ ಹಾಗೂ ಹನಿ ನೀರಾವರಿ ಯೋಜನೆಯಡಿ ಗದಗ ಮತ್ತು ಮುಂಡರಗಿ ತಾಲೂಕಿನ 8903 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಗದಗಿನ ಭೀಷ್ಮ ಕೆರೆಗೆ ನದಿ ನೀರು ತುಂಬಿಸಿ, ದೋಣಿ ವಿಹಾರ ಆರಂಭಿಸಲಾಗಿದೆ. ಬಸವಣ್ಣ ಪುತ್ಥಳಿ ಸುತ್ತಲೂ ಉದ್ಯಾನ ಅಭಿವೃದ್ಧಿಯಾಗಿದೆ. ದೇಶದ ಮೊಟ್ಟಮೊದಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದುಗಿನಲ್ಲಿ ಸ್ಥಾಪನೆಯಾಗಿದೆ.
ಪ್ರಮುಖ ಸಮಸ್ಯೆಗಳೇನು?: ಗದಗ ಕ್ಷೇತ್ರದಲ್ಲಿ ಕುಡಿಯುವ ನೀರಿನದ್ದೇ ದೊಡ್ಡ ಚಿಂತೆ. ಅವಳಿ ನಗರದಲ್ಲಿ 24×7,
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ಸಿಕ್ಕಿದ್ದರೂ, ನೀರಿನ ದಾಹ ನೀಗುತ್ತಿಲ್ಲ. ತಾಲೂಕಿನಲ್ಲಿ
ಅನೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳಿಂದಾಗಿ ಕುಡಿಯುವ ನೀರಿನ ಸಮಸ್ಯೆ ಗಂಭೀರತೆ ಕಾಣುತ್ತಿಲ್ಲ. ಆದರೆ, ದಿನ ಬಳಕೆಗೆ ತುಂಗಭದ್ರಾ ನದಿ ನೀರನ್ನೇ ಕ್ಷೇತ್ರದ ಜನರು ಅವಲಂಬಿಸಿದ್ದಾರೆ. ಬರ ಹೀಗೆ ಮುಂದುವರಿದರೆ, ನದಿ ಪಾತ್ರದ ನೀರು ಬತ್ತಿದರೆ, ಪರದಾಟ ತಪ್ಪಿದ್ದಲ್ಲ.
ನಾಯಕರ ಭರ್ಜರಿ ಮತ ಬೇಟೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರ ಸೆಳೆಯುವಲ್ಲಿ ಯಾವುದೇ ಪಕ್ಷ ಹಿಂದೆ ಬಿದ್ದಿಲ್ಲ. ಬಿಜೆಪಿ- ಕಾಂಗ್ರೆಸ್ ವಿಫಲ- ಸಫಲತೆಯನ್ನು ಜನರ ಮುಂದಿಟ್ಟು, ಮತ ಕೋರುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಪರ ಈಗಾಗಲೇ ಗದುಗಿನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಾಜಿ ಸಿಎಂ ಜಗದೀಶ್ ಶೆಟ್ಟರ,
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮತಬೇಟೆ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಸಹೋದರ, ಸ್ಥಳೀಯ ಶಾಸಕರೂ ಆಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಹೊರತಾಗಿ, ಯಾವುದೇ ನಾಯಕರು ಇತ್ತ ಸುಳಿದಿಲ್ಲ. ಆದರೂ, ಸ್ಥಳೀಯ ನಾಯಕರು, ಕಾರ್ಯಕರ್ತರು ತಳ ಮಟ್ಟದಲ್ಲಿ ಮನೆ ಮನೆ ಭೇಟಿ, ಪ್ರಚಾರ ಸಭೆಗಳನ್ನು ಚುರುಕುಗೊಳಿಸಿದ್ದಾರೆ.
ದೇಶದಲ್ಲಿ ಬಹು ಚರ್ಚಿತ ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ದಾಳಿ ಹಾಗೂ ನೋಟ್ ಅಪಮೌಲಿಕರಣ, ಉಜ್ವಲ, ಆಧಾರ್ ಸೀಡಿಂಗ್ ನಗರ ಪ್ರದೇಶದಲ್ಲಿ ಚರ್ಚಿತ ವಿಷಯಗಳಾಗಿವೆ. ಪಾಕ್ ದಾಳಿ ಮಾಡಿದರೆ, ಮೋದಿ ಬಿಡಲ್ಲ ಎಂಬುದು ಹಳ್ಳಿಗರ ಚರ್ಚಾ ವಿಷಯವಾಗಿದೆ. ಬಿಜೆಪಿ ವರ್ಷಕ್ಕೆ 6 ಸಾವಿರ ರೂ., ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವ ತಿಂಗಳಿಗೆ 6 ಸಾವಿರ ರೂ. ಭರವಸೆ ಹಳ್ಳಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.