ವಿಧಾನಸಭೆ: ಮುಖ್ಯಮಂತ್ರಿಗಳ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಗುರುವಾರವೇ ಮುಗಿಸುವಂತೆ ರಾಜ್ಯಪಾಲರು ವಿಧಾನಸಭಾಧ್ಯಕ್ಷರಿಗೆ ಸಂದೇಶ ನೀಡಿದ ಬಗ್ಗೆಯೂ ಸದನದಲ್ಲಿ ಗುರುವಾರ ಗಂಭೀರ ಚರ್ಚೆ ನಡೆಯಿತು. ರಾಜ್ಯಪಾಲರ ಈ ನಡೆಗೆ ಆಡಳಿತಾರೂಢ ಕಾಂಗ್ರೆಸ್ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮಧ್ಯಾಹ್ನದ ಕಲಾಪ ಮೊದಲ ಬಾರಿ ಮುಂದೂಡಿಕೆಯಾಗಿ ಸಂಜೆ 4.55ಕ್ಕೆ ಮತ್ತೆ ಶುರುವಾಗುತ್ತಿದ್ದಂತೆ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್, ರಾಜ್ಯಪಾಲರಿಂದ ಒಂದು ಸಂದೇಶ ಬಂದಿದ್ದು, ಮುಖ್ಯಮಂತ್ರಿಗಳ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯನ್ನು ಗುರುವಾರವೇ ಮುಗಿಸಬೇಕೆಂಬ ಸಂದೇಶವಿದೆ. ಇದನ್ನು ಸದನದ ಗಮನಕ್ಕೆ ತರುತ್ತಿದ್ದೇನೆಂದು ಪ್ರಕಟಿಸಿದರು.
ಆಗ ಸಚಿವ ಆರ್.ವಿ.ದೇಶಪಾಂಡೆ, ನಿಯಮಾನುಸಾರ ಬಾಕಿ ಇರುವ ವಿಧೇಯಕ ಕುರಿತಂತೆ ರಾಜ್ಯಪಾಲರು ಸೂಚನೆ ನೀಡ ಬಹುದೇ ಹೊರತು ಈ ರೀತಿಯ ನಿರ್ದೇಶನ ನೀಡುವಂತಿಲ್ಲ. ರಾಜ್ಯಪಾಲರ ಬಗ್ಗೆ ಗೌರವವಿಟ್ಟುಕೊಂಡೇ ಈ ಮಾತು ಹೇಳುತ್ತಿದ್ದೇನೆ ಎಂದರು. ಆಗ ಸ್ಪೀಕರ್, ರಾಜ್ಯಪಾಲರು ನಿರ್ದೇ ಶನ ನೀಡಿಲ್ಲ, ಸಂದೇಶ ನೀಡಿದ್ದಾರಷ್ಟೇ’ ಎಂದು ತಿದ್ದಿದರು.
ಕಾಂಗ್ರೆಸ್‌ನ ಎಚ್.ಕೆ.ಪಾಟೀಲ್, ಸದನಕ್ಕೆ ಸಂದೇಶ ನೀಡುವ ಅಧಿಕಾರವನ್ನು ರಾಜ್ಯಪಾಲರಿಗೆ ನೀಡಿಲ್ಲ. ರಾಜ್ಯಪಾಲರು ಈ ರೀತಿ ಸಂದೇಶ ನೀಡಬಾರದು. ಸದನದ ಕಾರ್ಯ ಕಲಾಪದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು.
ರಾತ್ರಿ 12 ಆಗಲಿ ವಿಶ್ವಾಸ ಮತ ಯಾಚನೆ ನಡೆಯಲಿ: ಆಗ ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಮುಖ್ಯಮಂತ್ರಿಗಳು ಚರ್ಚೆ ಆರಂಭಿಸಲಿ. ರಾತ್ರಿ 12 ಗಂಟೆಯಾದರೂ ಮುಂದುವರಿಸೋಣ. ನಮ್ಮ ಕಡೆ 2-3 ಮಂದಿ ಐದು ನಿಮಿಷ ಮಾತನಾಡುತ್ತೇವೆ. ಆಡಳಿತ ಪಕ್ಷದವರಿಗೆ ಅವಕಾಶ ಕೊಡಿ. ಕೊನೆಗೆ ಮತಕ್ಕೆ ಹಾಕಿ ಎಂದು ಮನವಿ ಮಾಡಿದರು.
ಬಿಜೆಪಿಯ ಎಸ್.ಸುರೇಶ್ ಕುಮಾರ್, ತರಾತುರಿಯಲ್ಲಿ ನಿರ್ಧಾರ ಬೇಡ ಎಂದು ಸಚಿವರು ಹೇಳುತ್ತಾರೆ. ಅಧಿವೇಶನ ಆರಂಭವಾದ ಕಳೆದ ಶುಕ್ರವಾರ ಮುಖ್ಯಮಂತ್ರಿಗಳು ವಿಶ್ವಾಸ ಮತ ಯಾಚನೆ ಮಾಡುವುದಾಗಿ ಪ್ರಸ್ತಾಪಿಸಿದ ನಂತರವೂ ತರಾತುರಿಯಲ್ಲಿ ಕಡತ ವಿಲೇವಾರಿ, ವರ್ಗಾವಣೆ ಮಾಡುತ್ತಿದ್ದು, ಸದನದಿಂದ ಯಾವ ಸಂದೇಶ ಹೋಗಲಿದೆ ಎಂದು ಕೆಣಕಿದರು. ಆಗ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್, ಇಲ್ಲಿ ಲಾಭ, ನಷ್ಟದ ಪ್ರಶ್ನೆ ಇಲ್ಲ. ವಿಧಾನಸಭಾಧ್ಯಕ್ಷರ ಹಕ್ಕುಗಳಿಗೆ ಧಕ್ಕೆಯಾಗಿದೆ. ರಾಜೀನಾಮೆ ಸಲ್ಲಿಸಿರುವ ಶಾಸಕರು ಸದನಕ್ಕೆ ಬಾರದಿದ್ದರೆ ಅನರ್ಹಗೊಳಿಸುವ ಬಗ್ಗೆ ತಮ್ಮ ನಿಲುವೇನು? ಸ್ಪೀಕರ್ ಇಕ್ಕಟ್ಟಿಗೆ ಸಿಲುಕಲಿದ್ದಾರೆ ಎಂದು ಹೇಳಿದರು.