ರಾಯಚೂರು: ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪುತ್ತಿದ್ದಂತೆ ಅಸಮಾಧಾನ ಭುಗಿಲೆದ್ದಿದೆ. ಪ್ರಬಲ ಆಕಾಂಕ್ಷಿಯಾಗಿದ್ದ ರವಿ ಪಾಟೀಲ ಬೆಂಬಲಿಗರೊಂದಿಗೆ ಪ್ರತ್ಯೇಕ ನಡೆಸಿದ್ದು, ಎರಡು ದಿನಗಳಲ್ಲಿ ಮುಂದಿನ ನಡೆ ಪ್ರಕಟಿಸುವುದಾಗಿ ತಿಳಿಸುವ ಮೂಲಕ ಬಂಡಾಯದ ಮುನ್ಸೂಚನೆ ನೀಡಿದ್ದಾರೆ.
ನಗರದ ಮಂತ್ರಿ ಗಾರ್ಡನ್‌ನಲ್ಲಿ ನಡೆದ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರು, ಬೆಂಬಲಿಗರ ಸಭೆಯಲ್ಲಿ ಕಾಂಗ್ರೆಸ್ ನಡೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕಳೆದ ಒಂದು ವರ್ಷದಿಂದ ಪಕ್ಷ ಸಂಘಟನೆ ಮಾಡಿ, ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ರವಿ ಪಾಟೀಲರಿಗೆ ಟಿಕೆಟ್ ಕೈ ತಪ್ಪಿಸಿದ್ದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಈ ವೇಳೆ ಮಾತನಾಡಿದ ಮುಖಂಡ ರವಿ ಪಾಟೀಲ, ಪಕ್ಷ ಯಾವ ಮಾನದಂಡದಿಂದ ಅಭ್ಯರ್ಥಿ ಆಯ್ಕೆ ಮಾಡಿದೆಯೋ ಗೊತ್ತಿಲ್ಲ. ನಾನು ಪ್ರಬಲ ಆಕಾಂಕ್ಷಿಯಾಗಿದ್ದು, ಕ್ಷೇತ್ರ ಸಂಚಾರ ಮಾಡಿ ಜನರ ವಿಶ್ವಾಸ ಗಳಿಸಿದ್ದೇನೆ. ಆದರೆ, ಕೊನೆ ಗಳಿಗೆಯಲ್ಲಿ ಈ ರೀತಿ ಮಾಡಿರುವುದು ನೋವಾಗಿದೆ. ಎರಡೂಮೂರು ದಿನಗಳಲ್ಲಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.
ಜೆಡಿಎಸ್‌ನತ್ತ ಚಿತ್ತ ರವಿ ಪಾಟೀಲ ಮೊದಲಿನಿಂದಲೂ ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಸೇರುತ್ತಾರೆ ಎಂಬ ಬಗ್ಗೆ ಚರ್ಚೆಗಳಿದ್ದವು. ಆದರೆ, ಅವರ ಸಂಬಂಧಿ ಸತೀಶ ಜಾರಕಿಹೊಳಿ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಕಾರಣ ಅವರೂ ಕಾಂಗ್ರೆಸ್ ಸೇರಿದ್ದರು. ಸಮಾಜ ಸೇವೆ, ರಾಜಕೀಯ ಹಿನ್ನೆಲೆ ಇತರೆ ವಿಚಾರಗಳಿಂದಾಗಿ ರವಿ ಪಾಟೀಲಗೆ ಟಿಕೆಟ್ ಖಚಿತ ಎನ್ನಲಾಗುತ್ತಿತ್ತು. ಆದರೆ, ಕೊನೆ ಕ್ಷಣದ ಬೆಳವಣಿಗೆಯಿಂದಾಗಿ ಅವರನ್ನು ಕೈ ಬಿಡಲಾಗಿದೆ. ಹೀಗಾಗಿ ಅವರು ಜೆಡಿಎಸ್ ಸೇರಿ ಅಲ್ಲಿಂದ ಸ್ಪರ್ಧಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ.