Advertisement
ಬೀಜ ಬಿತ್ತನೆ ಹೇಗೆ?ಕಡಲೆಯಲ್ಲಿ ಕಂದು, ಹಳದಿ, ಕಪ್ಪು, ಬಿಳಿ ಹೀಗೆ ನಾಲ್ಕು ಬಣ್ಣದವುಗಳಿವೆ, ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಧದ ಕಡಲೆ ಬೆಳೆಯುತ್ತಾರೆ. ಆದರೂ ಅಣ್ಣಿಗೇರಿ- 1 ಕಡಲೆ ಅತ್ಯಂತ ಜನಪ್ರಿಯ ತಳಿ. ಜೊತೆಗೆ ಬಿ.ಜಿ.ಡಿ.- 103 ಹಾಗೂ ಜೆ.ಜಿ. – 11 ಕೂಡ ಅಧಿಕ ಇಳುವರಿ ಕೊಡುವ ತಳಿಗಳು. ಮುಂಗಾರಿನ ಬೆಳೆಯ ನಂತರ ಜಮೀನನ್ನು ಎರಡು ಸಲ ಉಳುಮೆ ಮಾಡಿ ಕೊನೆಗೊಮ್ಮೆ ಕಪ್ಪು ಮಣ್ಣಿನಲ್ಲಿ ಜಮೀನಿನ ತುಂಬಾ ಮಡಿ ಆಗುವಂತೆ ಕುಂಟೆಯ ಸಹಾಯದಿಂದ ಮಣ್ಣು ಎತ್ತರಿಸಬೇಕು. ಬಿತ್ತನೆಗೆ ಎರಡು ವಾರ ಮೊದಲು ಎಕರೆಗೆ ಕೇವಲ 2- 3 ಟನ್‌ನಷ್ಟು ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಲ್ಲಿ ಬೆರೆಸಿ. ಮೊದಲೇ ಹೇಳಿದಂತೆ ದ್ವಿದಳ ಧಾನ್ಯಗಳಿಗೆ ರಾಸಾಯನಿಕ ಗೊಬ್ಬರಗಳ ಅವಶ್ಯ ಇಲ್ಲ. ಹೊಲ ಫಲವತ್ತಾಗಿದ್ದರೆ ಅಷ್ಟೇ ಸಾಕು, ಕೂರಿಗೆಯ ಸಹಾಯದಿಂದ ಒಂದೂವರೆ ಅಡಿ ಅಗಲದ ಸಾಲಿನಲ್ಲಿ ಅರ್ಧ ಅಡಿಗೊಂದು ಬೀಜ ಬೀಳುವಂತೆ ಬಿತ್ತನೆ ಮಾಡಿ.
ಕಡಲೆಯ ಹೊಲದಲ್ಲಿ ಹೆಚ್ಚಿನ ಕಳೆಯ ಕಾಟ ಇರಲ್ಲ. ಆದರೂ 2- 3 ಸಲ ಎಡೆಕುಂಟೆ ಹೊಡೆದು ಮಣ್ಣು ಸಡಿಲ ಮಾಡಿ, ಬಿರುಕುಗಳಿದ್ದರೆ ಮುಚ್ಚುವ ಹಾಗೆ ಮಾಡಿ. ಪ್ರತಿ ಸಲ ಎಡೆಕುಂಟೆ ಹೊಡೆಯುವಾಗ ತಂಪಾದ ವಾತಾವರಣದಲ್ಲಿ ಇಟ್ಟ ಒಳ್ಳೆ ಸಾವಯವ ಗೊಬ್ಬರ, ಎರೆಹುಳು ಗೊಬ್ಬರ ಹಾಗೂ ಮುಂಗಾರಿನ ಬೆಳೆಗಾಗಿ ತಂದ ಇತರ ಸೂಕ್ಷ್ಮ ಪೋಷಕಾಂಶಗಳು ಉಳಿದಿದ್ದರೆ ಅವುಗಳನ್ನು ಮಿಕ್ಸ್ ಮಾಡಿ ಎರಚಬೇಕು. ತೀರ ರಾಸಾಯನಿಕ ಗೊಬ್ಬರ ಕೊಡಲೇಬೇಕು ಅನಿಸಿದರೆ ಎಕರೆಗೆ ಹೆಚ್ಚೆಂದರೆ ಹತ್ತು ಕೇಜಿಯಷ್ಟು ಡಿ.ಎ.ಪಿ. ಗೊಬ್ಬರ ಮಾತ್ರ ಕೊಡಿ ಸಾಕು.