Advertisement

ಹನಗೋಡು ಜಿಪಂ: ಶೇ.71 ಮತದಾನ

01:51 PM Jun 15, 2018 | Team Udayavani |

ಹುಣಸೂರು: ತಾಲೂಕು ಹನಗೋಡು ಜಿಪಂ ಕ್ಷೇತ್ರದ ಉಪ ಚುನಾವಣೆ ಭಾರೀ ಮಳೆ ನಡುವೆಯೂ ಶಾಂತಿಯುತವಾಗಿ ನಡೆದಿದ್ದು, ಶೇ.71.02ರಷ್ಟು ಮತದಾನವಾಗಿದೆ. ಬೆಳಗ್ಗೆ 7ಕ್ಕೆ ಮತದಾನ ಆರಂಭಗೊಂಡರೂ ಮತಕೇಂದ್ರಕ್ಕೆ ಮತದಾರರು ತಡವಾಗಿ ಆಗಮಿಸಿದರು.

Advertisement

10 ಗಂಟೆ ಬಳಿಕ ಹನಗೋಡಿನ ಮೂರು ಮತಕೇಂದ್ರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಜನರು ಸಾರದಿಯಲ್ಲಿ ನಿಂತು ಮತದಾನ ಮಾಡಿದರು. ಮಧ್ಯಾಹ್ನ 3ರ ವೇಳೆಗೆ ಶೇ.60ರಷ್ಟು ಮಾತ್ರ ಮತದಾನವಾಗಿತ್ತು. ಬಳಿಕ 2 ಗಂಟೆಯಲ್ಲಿಯೇ ಶೇ.11ರಷ್ಟು ಮತದಾನವಾಗಿ ಒಟ್ಟಾರೆ 71.02 ಮತದಾನವಾಯಿತು.

ಕೈಕೊಟ್ಟ ಇವಿಎಂ ಯಂತ್ರ: ಹನಗೋಡಿಗೆ ಸಮೀಪದ ಬಿ.ಆರ್‌.ಕಾವಲ್‌ ಮತಕೇಂದ್ರದಲ್ಲಿ ಇವಿಎಂ ಯಂತ್ರ ಕೈಕೊಟ್ಟಿತ್ತು, ತಕ್ಷಣವೇ ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಹಲವು ಮತ ಕೇಂದ್ರಗಳಲ್ಲಿ ಪಕ್ಷಗಳ ಕಾರ್ಯಕರ್ತರು ಛತ್ರಿ ಹಿಡಿದು ಮತಯಾಚಿಸಿದರು. ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಕಟ್ಟನಾಯ್ಕ, ಜೆಡಿಎಸ್‌ನ ಶಿವಣ್ಣ, ಬಿಜೆಪಿಯ ಗಿರೀಶ್‌ ಕ್ಷೇತ್ರಾದ್ಯಂತ ಸುತ್ತಾಡಿ ಮತಯಾಚಿಸಿದರು. 

ಹಾಡಿಗಳಲ್ಲಿ ಆದಿವಾಸಿಗಳು ಕೆಲಸಕ್ಕೆ ತೆರಳದೆ ಮತದಾನ ಮಾಡಿದ್ದು ವಿಶೇಷವಾಗಿತ್ತು. ಎಲ್ಲಿಯೂ ಗಲಾಟೆ ನಡೆಯದೆ ಶಾಂತಿಯುತವಾಗಿ ಚುನಾವಣೆ ನಡೆಯಿತು. ಸಹಾಯಕ ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್‌ ಮಹೇಶ್‌, ಚುನಾವಣಾ ಸೆಕ್ಟರಲ್‌ ಮ್ಯಾಜಿಸ್ಟೇಟರ್‌ಗಳು ಕ್ಷೇತ್ರಾದ್ಯಂತ ಸಂಚರಿಸಿದರು. ಎಸ್‌ಐ ಆನಂದ್‌ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕ್ಷೇತ್ರದ 32,093 ಮತದಾರರ ಪೈಕಿ 22,856 ಮಂದಿ ಮತದಾನ ಮಾಡಿದ್ದು, ಈ ಪೈಕಿ 11,485 ಪುರುಷ, 11,371 ಮಹಿಳಾ ಮತದಾರರು ಮತದಾನ ಮಾಡಿದ್ದು, ಶೇ.71.02ರಷ್ಟು ಮತದಾನವಾಗಿದೆ.

Advertisement

ಮತದಾನಕ್ಕೆ ಮಳೆ ಅಡ್ಡಿ: ಬುಧವಾರ ರಾತ್ರಿಯಿಂದಲೇ ಆರಂಭಗೊಂಡ ಮಳೆಯು ಬೆಳಗ್ಗೆ 10 ಗಂಟೆವರೆಗೂ ಸುರಿಯಿತು. ಮುಂಜಾನೆ ಮಳೆಯು ಅಭ್ಯರ್ಥಿಗಳನ್ನು ಚಿಂತೆಗೀಡು ಮಾಡಿತ್ತು. ಆದರೆ 10 ನಂತರ ಬಿಡುವು ಕೊಟ್ಟಿತಾದರೂ ಮದ್ಯೆ-ಮದ್ಯೆ ತುಂತುರು ಮಳೆ ಬೀಳುತ್ತಲೇ ಇತ್ತು. ಇದರಿಂದಾಗಿ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ ಮಂದಗತಿಯಲ್ಲಿ ಸಾಗಿದ ಮತದಾನ ಮಧ್ಯಾಹ್ನ ಚುರುಕುಗೊಂಡಿತ್ತು. 

ಗೋವಿಂದನಗಳ್ಳಿ ಗ್ರಾಪಂ ಚುನಾವಣೆ: ತಾಲೂಕಿನ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ಆಜಾದ್‌ ನಗರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ 1339ಕ್ಕೆ 1027 ಮತದಾರರು ಮತ ಚಲಾಯಿಸಿದ್ದಾರೆ, ಶೇ.76ರಷ್ಟು ಮತದಾನವಾಗಿದೆ. 

17ಕ್ಕೆ ಫಲಿತಾಂಶ: ಹನಗೋಡು ಜಿಪಂ ಹಾಗೂ ಆಜಾದ್‌ನಗರದ ಕ್ಷೇತ್ರದ ಉಪ ಚುನಾವಣೆ ಮತಗಳ ಎಣಿಕೆಯು ಜೂ.17ರಂದು ತಾಲೂಕು ಕಚೇರಿಯಲ್ಲಿ ನಡೆಯಲಿದ್ದು, ಬೆಳಗ್ಗೆ 10ರ ವೇಳೆಗೆ ಫಲಿತಾಂಶ ಹೊರಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next