ಹುಣಸೂರು: ತಾಲೂಕಿನ ವೀರನಹೊಸಳ್ಳಿ ಹಾಡಿಯಲ್ಲಿ ಮನೆಗೋಡೆ ಕುಸಿದು ಮೃತಪಟ್ಟ ಆದಿವಾಸಿ ಗಣಪತಿ ನಿವಾಸಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಶಾಸಕ ಎಸ್.ಎ.ರಾಮದಾಸ್, ನಿರಂಜನ್, ಮಾಜಿ ಶಾಸಕ ಎಚ್.ವಿಶ್ವನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಭೇಟಿ ನೀಡಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ರೂ. ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಚ್.ವಿಶ್ವನಾಥ್, ತಾಲೂಕಿನಾದ್ಯಂತ ಮಹಾಮಳೆಯು ಸಾಕಷ್ಟು ಅನಾಹುತ ಸೃಷ್ಟಿಸಿದೆ. ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಆಸ್ತಿಪಾಸ್ತಿ ಮತ್ತು ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಸಂತ್ರಸ್ತರಿಗಾಗಿ ಪರಿಹಾರ ಕೇಂದ್ರಗಳನ್ನು ಪ್ರತಿ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿದೆ. ಹನಗೋಡಿನ ಎರಡು ಹೋಟೆಲ್‌ಗಳಲ್ಲಿ 42 ಕೊಠಡಿ ಮೀಸಲಿರಿಸಲಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ ಶುಂಠಿ, ತಂಬಾಕು ಮತ್ತು ಮುಸುಕಿನ ಜೋಳ ಬೆಳೆ ನಾಶವಾಗಿದೆ. ಹೆಚ್ಚಿನ ಪರಿಹಾರ ದೊರಕಿಸಲು ಶ್ರಮಿಸುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈಯಕ್ತಿಕವಾಗಿ ನೀಡಿರುವ 50 ಸಾವಿರ ರೂ.ಗಳನ್ನು ಮೃತ ಗಣಪತಿಯ ತಾಯಿ ಪಾರ್ವತಮ್ಮಗೆ ಹಸ್ತಾಂತರಿಸಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಜಿಲ್ಲಾದ್ಯಂತ ಮಳೆಹಾನಿ ಕುರಿತಂತೆ ಸಮೀಕ್ಷೆ ನಡೆದಿದ್ದು, ಇನ್ನೆರಡು ದಿನಗಳಲ್ಲ ಪೂರ್ಣಗೊಳ್ಳಲಿದೆ ಎಂದರು.
ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ನಾಳೆ(ಭಾನುವಾರ) ಸಂಜೆಯೊಳಗೆ ಮೈಸೂರು ಜಿಲ್ಲಾದ್ಯಂತ ನೆರೆಪೀಡಿತ ಪ್ರದೇಶಗಳ ಹಾನಿ ಕುರಿತಂತೆ ವರದಿ ಸಿಗಲಿದೆ. ಅನುದಾನದ ಕೊರತೆಯಿಲ್ಲ. ಅವಶ್ಯಕತೆಯಿರುವಡೆ ಅನುದಾನ ಬಳಸಿ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಈ ವೇಳೆ ಎಚ್.ಡಿ.ಕೋಟೆ ಮಾಜಿ ಶಾಸಕ ಶಿವಣ್ಣ, ರಾಜೀವ್, ಸಿದ್ದಲಿಂಗಸ್ವಾಮಿ, ಕಿರಂಗೂರು ಬಸವರಾಜು, ಸುಬಾಷ್, ಲೋಕೇಶ್, ಎಸಿ ವೀಣಾ, ತಹಶೀಲ್ದಾರ್ ಐ.ಇ.ಬಸವರಾಜು ಇತರರಿದ್ದರು.