ಹಾನಗಲ್ಲ: ಶಿಕ್ಷಣದ ಕ್ರಾಂತಿಯಿಂದಷ್ಟೇ ದೇಶದ ವಿಕಾಸ ಸಾಧ್ಯ. ಅಳಿಯುತ್ತಿರುವ ದಾನ-ಧರ್ಮ ಮತ್ತೆ ಪ್ರತಿಷ್ಠಾಪಿಸಬೇಕಿದೆ. ಕಲಿತ ಸರ್ಕಾರಿ ಶಾಲೆಗಳ ಪ್ರಗತಿಗೆ ಕೈಜೋಡಿಸುವ ಮೂಲಕ ಅಕ್ಷರದ ಋಣ ತೀರುಸುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾವು ಕಲಿತ ಸರ್ಕಾರಿ ಶಾಲೆಗಳತ್ತ ಒಮ್ಮೆ ಹಿಂದಿರುಗಿ ನೋಡೋಣ. ಪ್ರತಿಯೊಬ್ಬರೂ ಕನಿಷ್ಟ 2 ಸಾವಿರ ನೀಡಿದರೂ ಕೋಟ್ಯಾಂತರ ರೂ. ಸಂಗ್ರಹವಾಗಲಿದೆ. ಆಗ ಶಿಕ್ಷಣ ಕ್ರಾಂತಿ ನಡೆಯಲಿದ್ದು, ಭಾರತ ಖಂಡಿತವಾಗಿಯೂ ಜಗದ್ಗುರುವಾಗಲಿದೆ ಎಂದರು.
ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪುರಸಭೆ ಸದಸ್ಯರಾದ ಮಹೇಶ ಪವಾಡಿ, ಖುರ್ಷಿದ್ ಹುಲ್ಲತ್ತಿ, ವಿಕಾಸ ನಿಂಗೋಜಿ, ಶಂಶಿಯಾ ಬಾಳೂರ, ರವಿ ಹನುಮನಕೊಪ್ಪ, ಪರಶುರಾಮ್ ಖಂಡೂನವರ, ಮಮತಾ ಆರೆಗೊಪ್ಪ, ಮುಖಂಡರಾದ ರವೀಂದ್ರ ದೇಶಪಾಂಡೆ, ರಾಜೂ ಗುಡಿ, ಸಿಪಿಐ ಗಣಾಚಾರಿ, ತಾಪಂ ಇಒ ಸುನೀಲಕುಮಾರ, ಚಂದ್ರಪ್ಪ ಜಾಲಗಾರ, ಗಂಗೂಬಾಯಿ ನಿಂಗೋಜಿ, ಪ್ರಸಾದ ಗೌಡ ಮೊದಲಾದವರು ಇದ್ದರು.
ಉದಾಸಿ-ಮನೋಹರ ಹೊಗಳಿಕೆ: ಶ್ರೀನಿವಾಸ ಮಾನೆ ಇಡೀ ಭಾಷಣದುದ್ದಕ್ಕೂ ಮಾಜಿ ಸಚಿವ ದಿ| ಸಿ.ಎಂ. ಉದಾಸಿ ಹಾಗೂ ಮನೋಹರ ತಹಶೀಲ್ದಾರ್ ಹಾನಗಲ್ಲ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದನ್ನು ನೆನೆದರು. ಶಾಲೆ, ಕಾಲೇಜು ಅದರಲ್ಲೂ ವಿಶೇಷವಾಗಿ ರಸ್ತೆ ನಿರ್ಮಾಣ ಸೇರಿದಂತೆ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದು, ಇಡೀ ನಾಡಿಗೆ ಮಾದರಿಯಾದುದು ಎಂದು ಹೊಗಳಿದ್ದು ವಿಶೇಷವಾಗಿತ್ತಲ್ಲದೆ ಸಾರ್ವಜನಿಕರ ಚಪ್ಪಾಳೆ ಮೂಲಕ ಅವರ ಮಾತುಗಳಿಗೆ ಸೈ ಎಂದರು.
ತಾಲೂಕಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಾಜಿ ಯೋಧರು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರಿದ ಯುವಕರನ್ನು ಸನ್ಮಾನಿಸಲಾಯಿತು.