ಹಾನಗಲ್ಲ: ಹತ್ತಿ, ಶೇಂಗಾ, ಮೆಣಸಿನಕಾಯಿ ಹೊರತಾಗಿ ಇನ್ನುಳಿದ ಯಾವುದೇ ಕೃಷಿ ಉತ್ಪನ್ನಗಳು, ಆಹಾರ ಧಾನ್ಯಗಳು ಬರುವುದು ವಿರಳವಾಗುತ್ತಿದೆ. ಆದಾಗ್ಯೂ ಜಿಎಸ್‌ಟಿ ಜಾರಿ ಯಾದ ಮೇಲೆ ತೆರಿಗೆ ಪ್ರಮಾಣವೂ ಹೆಚ್ಚಾಗುತ್ತಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ 80 ಲಕ್ಷ ರೂ.ಗಳ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಹಾನಗಲ್ಲ ಕೃಷಿ ಉತ್ಪನ್ನ ಮಾರುಕಟ್ಟೆಗೆ ಯಾವುದೇ ಧಾನ್ಯಗಳು ಮಾರಾಟಕ್ಕೆ ಬರುತ್ತಿಲ್ಲ. ಸ್ಥಳೀಯ ವ್ಯಾಪಾರಸ್ಥರ ಮೂಲಕ ಖರೀದಿಗಳು ನಡೆಯುತ್ತಿವೆ. ಅವುಗಳ ಮೇಲಿನ ತೆರಿಗೆ ವಸೂಲಾತಿಗೆ ಎಪಿಎಂಸಿ ಅಧಿಕಾರಿಗಳು ತೀವ್ರ ಕ್ರಮ ಕೈಗೊಂಡರೆ ಸಂಸ್ಥೆಯ ಆದಾಯ ಇನ್ನಷ್ಟು ಹೆಚ್ಚಲಿದೆ ಎಂದರು.
ಹಾವೇರಿ ಜಾನುವಾರು ಮಾರುಕಟ್ಟೆಗಿಂತ ಹೆಚ್ಚು ವ್ಯವಹಾರ ಅಕ್ಕಿಆಲೂರಿನಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಅಕ್ಕಿಆಲೂರಿನ ಜಾನುವಾರು ಮಾರುಕಟ್ಟೆ ಅಭಿವೃದ್ಧಿಗಾಗಿ ಹಣದ ಲಭ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಜಾನುವಾರು ಮಾರುಕಟ್ಟೆಯಿಂದ ಆದಾಯ ನಿರೀಕ್ಷಿಸಲಾಗದು. ರೈತರ ಜಾನುವಾರು ಖರೀದಿ ವ್ಯವಹಾರಕ್ಕೆ ಸಹಾಯವಾಗಲೆಂದು ಈ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ ಮಾತನಾಡಿ, 1998ರಲ್ಲಿ ಎಪಿಎಂಸಿ ಮಾರುಕಟ್ಟೆಯ ವಾರ್ಷಿಕ ಆದಾಯ ಕೇವಲ 3 ಲಕ್ಷದಷ್ಟಿತ್ತು. ಈಗ 3.50 ಕೋಟಿಗೂ ಹೆಚ್ಚಾಗಿದೆ. ಇತ್ತೀಚಿನ ಮಳೆ-ಪ್ರವಾಹದಿಂದಾಗಿ ರೈತರ ಹೊಲಗಳ ರಸ್ತೆಗಳು ಕೊಚ್ಚಿಹೋಗಿವೆ. ಸರ್ಕಾರ ಈ ರಸ್ತೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಬೇಕು ಎಂದು ಶಾಸಕರೆದುರು ಬೇಡಿಕೆಯಿಟ್ಟರು.
ಎಪಿಎಂಸಿ ಅಧ್ಯಕ್ಷ ಶೇಕಣ್ಣ ಮಹರಾಜಪೇಟ ಮಾತನಾಡಿ, ಅಕ್ಕಿಆಲೂರಿನ ಜಾನುವಾರು ಮಾರುಕಟ್ಟೆಗೆ ಎಲ್ಲ ಮೂಲ ಸೌಲಭ್ಯ ಕೈಗೊಳ್ಳಲು 15 ಕೋಟಿ ರೂ.ಗಳ ಅಗತ್ಯವಿದೆ. ಇದರೊಂದಿಗೆ ರೈತರ ವಿಶ್ರಾಂತಿ ಭವನ ನಿರ್ಮಾಣಕ್ಕೆ 5 ಕೋಟಿರೂ ಅಗತ್ಯವಿದೆ. ಇದಕ್ಕಾಗಿ ಸಂಸ್ಥೆಯಿಂದ 3 ಕೋಟಿ ರೂ.ಮೀಸಲಿಡಲಾಗಿದೆ. ಚಿಕ್ಕಾಂಶಿಹೊಸೂರ ಗ್ರಾಮದ ರೈತ ಸಂತೆ ಪ್ರಾಂಗಣದಲ್ಲಿ ರಸ್ತೆ ಕಾಮಗಾರಿಗೆ 1.70 ಕೋಟಿ ಅನುದಾನ ಬಿಡುಗಡೆಯಾಗಿದೆ. ಸದ್ಯ ಟೆಂಡರ್ ಹಂತದಲ್ಲಿದೆ. ಇನ್ನೂ ಪ್ರಮುಖ ಗ್ರಾಮಗಳಲ್ಲಿ ಸಂತೆ ಕಟ್ಟೆ ನಿರ್ಮಾಣ ಕೈಗೊಳ್ಳಬೇಕಿದೆ. ಸರ್ಕಾರದ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಎಪಿಎಂಸಿ ಸದಸ್ಯ ಶಿವಯೋಗಿ ವಡೆಯರ ಮಾತನಾಡಿದರು. ಉಪಾಧ್ಯಕ್ಷೆ ಸುಜಾತಾ ಪಸಾರದ, ಗೀತಾ ಕೋರಿ, ದಯಾನಂದ ನಾಗನೂರ, ನಾಗಪ್ಪ ಶಿವಣ್ಣನವರ, ರಾಮಪ್ಪ ಮಾದಪ್ಪನವರ, ಕೂಬೆಪ್ಪ ಲಮಾಣಿ, ಶಿದ್ದಪ್ಪ ಬಂಗಾರೇರ, ರಾಜಣ್ಣ ಪಟ್ಟಣದ, ಹನುಮಂತಪ್ಪ ಗಂಜೀಗಟ್ಟಿ, ಚಂದ್ರಶೇಖರ ಹೊಳಲದ ಇದ್ದರು. ಕಾರ್ಯದರ್ಶಿ ಬಸವರಾಜ ಪರಮಶೆಟ್ಟಿ ನಿರೂಪಿಸಿದರು.