Advertisement

ಹಂಪಿ ಸ್ಮಾರಕ ಧ್ವಂಸ: ಪೊಲೀಸರಿಂದ ತನಿಖೆ

01:19 AM Feb 03, 2019 | |

ಹೊಸಪೇಟೆ: ಐತಿಹಾಸಿಕ ಹಂಪಿಯಲ್ಲಿ ಕೆಲವು ಕಿಡಿಗೇಡಿಗಳು ಸ್ಮಾರಕ ಧ್ವಂಸಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಹಿನ್ನೆಲೆಯಲ್ಲಿ ಶನಿವಾರ ಎಸ್ಪಿ ಅರುಣ್‌ ರಂಗರಾಜನ್‌ ಭೇಟಿ ನೀಡಿ ಧ್ವಂಸಗೊಂಡ ಸ್ಮಾರಕಗಳ ಪರಿಶೀಲನೆ ನಡೆಸಿದರು.

Advertisement

ಹಂಪಿಯ ಗಜಶಾಲೆಯ ಹಿಂಭಾಗದ ವಿಷ್ಣು ದೇವಾಲಯದ ಎಡಭಾಗದ ಮಂಟಪದಲ್ಲಿ ಒಟ್ಟು 14 ಕಂಬಗಳನ್ನು ಧ್ವಂಸಗೊಳಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಅರುಣ್‌ ರಂಗರಾಜನ್‌, ಕೇಂದ್ರ ಪುರಾತತ್ವ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ನಾಲ್ವರು ಭಾಗಿಯಾಗಿದ್ದು, ತನಿಖೆ ಮುಂದುವರಿದಿದೆ. ಆರು ತಿಂಗಳ ಹಿಂದೆ ಈ ಘಟನೆ ನಡೆದಿರಬಹುದು. ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದರು.

ಹಂಪಿ ಉಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಡಿಜಿಟಲ್‌ ಆಯುಷ್‌ ಎಂಬ ಯುವಕನ ಸಂಪರ್ಕ ಸಾಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಆರೋಪಿಗಳ ಕುರಿತು ಮಹತ್ವದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಖುದ್ದು ಎಸ್ಪಿ ಅರುಣ್‌ ರಂಗರಾಜನ್‌ ಜವಾಬ್ದಾರಿ ವಹಿಸಿದ್ದು, ಅನುಮಾನಗೊಂಡವರನ್ನು ಕರೆಸಿ ವಿಚಾರಣೆ ಮಾಡುತ್ತಿದ್ದಾರೆ. ಹಂಪಿ ಸ್ಮಾರಕಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಕಮಲಾಪುರ ಪಟ್ಟಣದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಹಂಪಿ ಸ್ಮಾರಕಗಳ ಮೇಲೆ ವಿಕೃತ ಸಂತೋಷ ವ್ಯಕ್ತಪಡಿಸುತ್ತಿರುವ ಕಿಡಿಗೇಡಿಗಳು ನಡೆದುಕೊಂಡ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇವರು ಸ್ಥಳೀಯರೇ ಅಥವಾ ಹೊರ ರಾಜ್ಯದವರಾ ಎಂಬ ಬಗ್ಗೆ ಈವರೆಗೂ ಪೊಲೀಸರು ಮಾಹಿತಿ ಬಿಟ್ಟು ಕೊಟ್ಟಿಲ್ಲ. ಸ್ಥಳೀಯವಾಗಿಯೂ ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next