Advertisement
ಹಂಪಿ-ಆನೆಗೊಂದಿ ಪ್ರದೇಶವನ್ನು ಯುನೆಸ್ಕೋ ವಿಶ್ವಪರಂಪರಾ ಪಟ್ಟಿಗೆ ಸೇರ್ಪಡೆ ನಂತರ ಇಲ್ಲಿಗೆ ಆಗಮಿಸುವ ದೇಶ ವಿದೇಶದ ಪ್ರವಾಸಿಗರಲ್ಲಿ ಶೇ.40 ರಷ್ಟು ಪ್ರವಾಸಿಗರು ಶಿಲಾರೋಹಣ ಕ್ರೀಡೆ ಕಲಿಯಲು ಆಗಮಿಸುತ್ತಾರೆ. ಶಿಲಾರೋಹಣ ಕಲಿಸಲು ಆನೆಗೊಂದಿ ಹಂಪಿಯಲ್ಲಿ ಕೆಲ ಯುವಕರು ತರಬೇತಿಯನ್ನು ಪಡೆದು ಶಿಲಾರೋಹಿಗಳಿಗೆ ಕಲ್ಲು, ಬೆಟ್ಟಗುಡ್ಡಗಳನ್ನು ಹತ್ತುವ ಕುರಿತು ಅಗತ್ಯ ಸುರಕ್ಷತೆಯೊಂದಿಗೆ ಕಲಿಸಉವ ಮೂಲಕ ಸ್ವಯಂ ಉದ್ಯೋಗ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಒಲಂಪಿಕ್ ವಿಶ್ವದ ಕ್ರೀಡಾಕೂಟದಲ್ಲಿ ಶಿಲಾರೋಹಣ ಸ್ಪರ್ಧೆ ಪರಿಚಯಿಸಿದ ನಂತರ ಶಿಲಾರೋಹಣ ಕಲಿಯುವವರ ಸಂಖ್ಯೆ ಹೆಚ್ಚಾಗಿದ್ದು ಹಂಪಿ ಆನೆಗೊಂದಿ ಪ್ರದೇಶಕ್ಕೆ ವೀಕ್ ಎಂಡ್ ಹಾಗೂ ಪ್ರವಾಸಕ್ಕೆ ಆಗಮಿಸುವವರು ಕಡ್ಡಾಯವಾಗಿ ಸ್ಥಳೀಯ ಯುವ ತರಬೇತುದಾರರಿಂದ ಶಿಲಾರೋಹಣ ಮಾಡುವುದನ್ನು ಕಲಿಯುತ್ತಿದ್ದಾರೆ.
Related Articles
Advertisement
ಕಿಷ್ಕಿಂಧಾ ಏಳುಗುಡ್ಡ ಪ್ರದೇಶ ಶಿಲಾರೋಹಣಕ್ಕೆ ಪ್ರಾಶ್ಯಸ್ತ :ರಾಮಾಯಣ ಕಾಲದಿಂದಲೂ ತಾಲೂಕಿನ ಆನೆಗೊಂದಿ ಕಿಷ್ಕಿಂಧಾ-ಅಂಜನಾದಿ ಏಳುಗುಡ್ಡ ಪ್ರದೇಶ ಖ್ಯಾತಿ ಪಡೆದಿದೆ.ಇಲ್ಲಿ ವಾನರ ಸಾಮ್ರಾಜ್ಯವಿತ್ತು. ಮಧುವನ,ಮಾಲ್ಯವಂತ, ಮೋರ್ಯಯ ಬೆಟ್ಟ ಹೀಗೆ ಹಲವು ಪ್ರಾಕೃತಿಕ ಸೌಂದರ್ಯದ ಬೆಟ್ಟಗುಡ್ಡಗಳಿದ್ದು ಇಲ್ಲಿಯ ಶಿಲಾರಾಶಿ ಪ್ರಕೃತಿ ಪ್ರಿಯರಿಗೆ ಅಚ್ಚುಮೆಚ್ಚಾಗುತ್ತದೆ.
ಇಲ್ಲಿಯ ಬೃಹದಾಕಾರದ ಬಂಡೆಗಳು, ಆಕಾಶವನ್ನು ಚುಂಬಿಸುವಂತಿಸುವ ಶಿಲೆಗಳಿಗೆ ದೇಶ ವಿದೇಶದ ಪ್ರವಾಸಿಗರು ಮನಸೋತು ಇಲ್ಲಿಗೆ ಆಗಮಿಸಿ ಶಿಲಾರೋಹಣ ಮಾಡುತ್ತಾರೆ. ಹನುಮನಹಳ್ಳಿ ಮತ್ತು ವಿರೂಪಾಪೂರಗಡ್ಡಿ ಮಧ್ಯೆ ಇರುವ ಋಷಿಮುಖ ಪರ್ವತದ ಶಿಲೆಗಳು ಆಕಾಶದೆತ್ತರವಾಗಿದ್ದು ಈ ಶಿಲೆಗಳನ್ನು ಹತ್ತಲು ವಿದೇಶಿಗ ತಂಡ ಒಂದು 2006 ರಲ್ಲಿ ಅಗತ್ಯ ಸುರಕ್ಷತೆಯೊಂದಿಗೆ ಶಿಲಾರೋಹಣ ಆರಂಭವಾಗಿದ್ದು ಇದೀಗ ನಿತ್ಯವೂ ನೂರಾರು ಪ್ರವಾಸಿಗರು ಶಿಲಾರೋಹಣ ನಡೆಸಲು ಆಗಮಿಸುತ್ತಿದ್ದು ಸ್ಥಳೀಯವಾಗಿ ಕೆ.ತಿಮ್ಮಪ್ಪ ಹಾಗೂ ವಿಕಾಸ(ಜರ‍್ರಿ) ಸೇರಿ ಹಲವು ಯುವಕರು ಶಿಲಾರೋಹಣ ಕಲೆಯನ್ನು ಕಲಿಸುತ್ತಾರೆ. ಅಗತ್ಯ ಸುರಕ್ಷತೆ ಮತ್ತು ಶಿಲಾರೋಹಣಕ್ಕೆ ಬೇಕಾಗುವ ವಸ್ತುಗಳನ್ನು ಸಹ ಇವರು ಹನುಮನಹಳ್ಳಿ ಮತ್ತು ಸಾಶಾಪೂರದಲ್ಲಿ ಮಾರಾಟ ಮಾಡಲು ಅಂಗಡಿಗಳನ್ನು ಆರಂಭ ಮಾಡಿದ್ದಾರೆ.
ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ನಿರ್ಲಕ್ಷ್ಯ: ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ನವೀನರಾಜ್ ಸಿಂಗ್, ಪಿ.ಸುನೀಲ್ ಕುಮಾರ, ವಿಕಾಸ ಕಿಶೋರ ಸುರಳ್ಕರ್ ಇವರು ಆನೆಗೊಂದಿ ಭಾಗದಲ್ಲಿ ಹಿಪ್ಪಿ ಸಂಸ್ಕೃತಿಯನ್ನು ಹೋಗಲಾಡಿಸಿ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದ್ದರು. ಆನೆಗೊಂದಿ ಉತ್ಸವದ ಸಂದರ್ಭದಲ್ಲಿ ಹನುಮನಹಳ್ಳಿ ಋಷಿಮುಖ ಪರ್ವತ ಶ್ರೇಣಿ, ಸಾಣಾಪೂರ ಬೆಟ್ಟ ಪ್ರದೇಶದಲ್ಲಿ ಶಿಲಾರೋಹಣ, ಸಾಣಾಪೂರ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಹೊಸತನವನ್ನು ತೋರಿಸುವ ಯತ್ನ ಮಾಡಿದ ನಂತರ ಶಿಲಾರೋಹಣ ಹೆಚ್ಚು ಜನಪ್ರಿಯವಾಗಲು ಆರಂಭಿಸಿದ್ದು ನಿತ್ಯವೂ ಶಿಲಾರೋಹಣ ಮಾಡುವರ ಸಂಖ್ಯೆ ಹೆಚ್ಚಾಗಿದ್ದರಿಂದ ಹಂಪಿ, ಹನುಮನಹಳ್ಳಿ, ಸಾಣಾಪೂರ, ವಿರೂಪಾಪೂರಗಡ್ಡಿ, ಕಡ್ಡಿರಾಂಪೂರ, ತಿರುಮಲಾಪೂರ, ಆನೆಗೊಂದಿ ಭಾಗದಲ್ಲಿ ಶಿಲಾರೋಹಣ ತರಬೇತಿ ನೀಡುವ ಯುವಕರು ಅಗತ್ಯ ತರಬೇತಿ ಪಡೆದು ಕೆಲಸ ಆರಂಭಿಸಿ ಸ್ವಯಂ ಉದ್ಯೋಗ ಕಂಡುಕೊಂಡಿದ್ದರು.
ಅನಧಿಕೃತ ನೆಪದಲ್ಲಿ ಇತ್ತೀಚೆಗೆ ರೆಸಾರ್ಟ್, ಹೊಟೇಲ್ ತೆರವು ಮಾಡಿದ್ದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು ಶಿಲಾರೋಹಣ ತರಬೇತಿ ನೀಡುವ ಕೆಲಸ ಮಾಡುತ್ತಿದ್ದವರ ಬದುಕು ಕಷ್ಟವಾಗಿದೆ.
ಪ್ರವಾಸೋದ್ಯಮ ಇಲಾಖೆ ಹಂಪಿ ಆನೆಗೊಂದಿ ಭಾಗದಲ್ಲಿ ಕಳೆದ 30 ವರ್ಷಗಳಿಂದ ನಡೆಯುತ್ತಿರುವ ಶಿಲಾರೋಹಣವನ್ನು ಇನ್ನಷ್ಟು ಜನಪ್ರಿಯಗೊಳಿಸುವ ಮೂಲಕ ಶಿಲಾರೋಹಿಗಳ ಸಂಖ್ಯೆ ಹೆಚ್ಚು ಮಾಡಬೇಕಿದೆ. ಇದರಿಂದ ಬದುಕನ್ನು ಕಟ್ಟಿಕೊಂಡಿರುವ ಸ್ಥಳೀಯ ಯುವಕರಿಗೆ ಇನ್ನಷ್ಟು ತರಬೇತಿ ನೀಡಿ ಅವರ ಬದುಕಿಗೆ ಭದ್ರತೆ ನೀಡುವುದು ಅಗತ್ಯವಾಗಿದೆ.
ಹನುಮನಹಳ್ಳಿ, ವಿರೂಪಾಪೂರಗಡ್ಡಿ ಋಷಿಮುಖ, ಸಾಣಾಪೂರ ಲೇಖ್, ಜಂಗ್ಲಿ, ಮಲ್ಲಾಪೂರ, ಆನೆಗೊಂದಿ, ವಾನಭದ್ರೇಶ್ವರ ಬೆಟ್ಟಗಳಲ್ಲಿ ಶಿಲಾರೋಹಣಕ್ಕೆ ಹೇಳಿ ಮಾಡಿದ ಶಿಲಾಬಂಡೆಗಳಿದ್ದು(ಬೋಲ್ರ‍್ಸ್) ಇಲ್ಲಿ ಶಿಲಾರೋಹಣ ಮಾಡಲು ದೇಶ ವಿದೇಶದ ಶಿಲಾರೋಹಿಗಳು ಆಗಮಿಸುತ್ತಿದ್ದು ಕೆಲ ಯುವಕರು ಶಿಲಾರೋಹಣ ಕಲಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಪ್ರವಾಸೋದ್ಯಮ ಮತ್ತು ಯುವಜನ ಸೇವಾ ಕ್ರೀಡಾ ಇಲಾಖೆ ಶಿಲಾರೋಹಣ ಕ್ರೀಡೆಯನ್ನು ಪ್ರೋತ್ಸಾಹಿಸಬೇಕು. ವೆಬ್ ಸೈಟ್,ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡಬೇಕು. ಉತ್ಸವದ ಸಂದರ್ಭದಲ್ಲಿ ಶಿಲಾರೋಹಣದ ಕುರಿತು ತರಬೇತಿ ಮತ್ತು ಪ್ರದರ್ಶನ ಏರ್ಪಡಿಸಬೇಕು.-ಶಮಾ ಪವಾರ್ ಮುಖ್ಯಸ್ಥರು ದಿ ಕಿಷ್ಕಿಂಧಾ ಟ್ರಸ್ಟ್ ಶಿಲಾರೋಹಣ ಕಲೆ ದೇಶಿಯ ಕ್ರೀಡೆಯಾಗಿದ್ದು ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣ ಗೇರಿಲ್ಲಾ ಮಾದರಿ ದಾಳಿ ಸಂದರ್ಭದಲ್ಲಿ ಶಿಲಾರೋಹಣ ಕಲೆಯನ್ನು ಯಶಸ್ವಿಯಾಗಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಕಿಷ್ಕಿಂಧಾ ಏಳುಗುಡ್ಡ ಪ್ರದೇಶ ಹಾಗೂ ಋಷಿಮುಖ ಪರ್ವತ ಶ್ರೇಣಿಗಳು ಶಿಲಾರೋಹಿಗಳಿಗೆ ಅತ್ಯುತ್ತಮ ಸ್ಥಳಗಳಾಗಿದ್ದು ಇಲ್ಲಿಗೆ ಕಳೆದ 20 ವರ್ಷಗಳಿಂದ ದೇಶ ವಿದೇಶದ ಶಿಲಾರೋಹಿಗಳು ಆಗಮಿಸುತ್ತಿದ್ದು ಶಿಲಾರೋಹಣದ ಪ್ರಾಥಮಿಕ ಕಲೆಗಳನ್ನು ಇಲ್ಲಿ ಕಲಿಯುತ್ತಾರೆ. ಇಲ್ಲಿಯ ಶಿಲಾರೋಹಣ ಮತ್ತು ಶಿಲಾಬಂಡೆಗಳು ಮತ್ತು ತರಬೇತಿದಾರರ ಕುರಿತು ಯುರೋಪ್ ದೇಶಗಳ ಪ್ರವಾಸಿಗರು ತಮ್ಮ ಪುಸ್ತಕಗಳಲ್ಲಿಯೂ ಬರೆದುಕೊಂಡಿದ್ದಾರೆ. ಪ್ರವಾಸೋದ್ಯಮ ಮತ್ತು ಯುವಜನ ಸೇವಾ ಕ್ರೀಡಾ ಇಲಾಖೆಯವರು ಮಾತ್ರ ಶಿಲಾರೋಹಣಕ್ಕೆ ಸರಿಯಾದ ಪ್ರೋತ್ಸಾಹ ನೀಡುತ್ತಿಲ್ಲ. ಶಿಲಾರೋಹಣ ಮಾಡುವಾಗ ಅಗತ್ಯ ಸುರಕ್ಷತೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತ ಪ್ರಚಾರ ಮತ್ತು ಶಿಲಾರೋಹಣದ ತರಬೇತಿದಾರರಿಗೆ ಅನುಕೂಲ ಕಲ್ಪಿಸಬೇಕು.ಸ್ಥಳೀಯ ಶಾಲಾ-ಕಾಲೇಜು ಮಕ್ಕಳಿಗೆ ಶಿಲಾರೋಹಣದ ಕುರಿತು ಶಿಬಿರಗಳನ್ನು ಹಮ್ಮಿಕೊಳ್ಳಬೇಕಿದೆ. ಈ ಎಲ್ಲಾ ಕಾರ್ಯಗಳಿಗೆ ಅರಣ್ಯ ಇಲಾಖೆಯವರ ಸಹಕಾರ ಅಗತ್ಯವಾಗಿದೆ.
-ಕೆ.ತಿಮ್ಮಪ್ಪ , ವಿಕಾಸ(ಜರ‍್ರಿ) ಶಿಲಾರೋಹಣ ತರಬೇತಿದಾರರು. ಕೆ.ನಿಂಗಜ್ಜ