ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿಯ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರಿಗೆ ಸೋಮವಾರದಿಂದ ಸರ್ಕಾರ ಮುಕ್ತ ಅವಕಾಶ ನೀಡಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಉಪ ಅಧೀಕ್ಷಕಿ ಕಾಳಿಮುತ್ತು ತಿಳಿಸಿದ್ದಾರೆ.
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಹಂಪಿಗೆ ಪ್ರವಾಸಿಗರ ಭೇಟಿಯನ್ನು ಸಂಪೂರ್ಣ ನಿರ್ಬಂಧಿಸಲಾಗಿತ್ತು.
ಈಗಾಗಲೇ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದು ಇದೀಗ ಸ್ಮಾರಕಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಪುರಾತತ್ವ ಇಲಾಖೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಹಂಪಿ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಹೆಸರು ನೋಂದಣಿ ಕಡ್ಡಾಯವಾಗಿದೆ.
ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಸಬೇಕಿದೆ. ಥರ್ಮಲ್ ಸ್ಕ್ರೀನಿಂಗ್ ನಂತರ ದೈಹಿಕ ಅಂತರ ಕಾಪಾಡಿಕೊಂಡು ಸ್ಮಾರಕದೊಳಗಡೆ ಪ್ರವೇಶ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.