ಗಂಗಾವತಿ : ಹಂಪಿ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ ಆನೆಗೊಂದಿ ಸಣಾಪುರ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ರೆಸಾರ್ಟ್ ಹೋಟೆಲ್ ಗಳ ಸ್ವಯಂ ತೆರವಿಗೆ 24 ಗಂಟೆಗಳ ಗಡುವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ರೆಸಾರ್ಟ್ ಹೋಟೆಲ್ ಮಾಲೀಕರಿಗೆ ನೀಡಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಗಂಗಾವತಿ ತಾಲ್ಲೂಕಿನ ವಿರುಪಾಪುರ ಗಡ್ಡೆ ಯಲ್ಲಿದ್ದ 28 ರೆಸಾರ್ಟ್ ಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೊಪ್ಪಳ ಜಿಲ್ಲಾಡಳಿತ 2 ವರ್ಷಗಳ ಹಿಂದೆ ತೆರವು ಗೊಳಿಸಿ ದ್ದವು ನಂತರ ಆನೆಗುಂದಿ, ಹನುಮನ ಹಳ್ಳಿ ,ರಂಗಾಪುರ ಜಂಗ್ಲಿ, ಸಾಣಾಪುರ ಭಾಗದಲ್ಲಿ ರೈತರ ಗದ್ದೆಯಲ್ಲಿ ಅನಧಿಕೃತವಾಗಿ 40 ಕ್ಕೂ ಹೆಚ್ಚು ರೆಸಾರ್ಟ್ ಹೋಟೆಲ್ ಗಳು ಆರಂಭವಾಗಿದ್ದವು .ಈ ಮಧ್ಯೆ ಹಂಪಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ರೆಸಾರ್ಟ್ ಹೋಟೆಲ್ ಗಳ ತೆರವಿಗೆ ಮುಂದಾಗಿದ್ದ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಆನೆಗೊಂದಿ ಭಾಗದ ಜನರು ಮತ್ತು ಹೋಟೆಲ್ ಮಾಲೀಕರು ಭೇಟಿಯಾಗಿ ಹೊಸ ಮಾಸ್ಟರ್ ಪ್ಲಾನ್ ಬರುವ ತನಕ ತೆರವು ಕಾರ್ಯಾಚರಣೆ ಮಾಡದಂತೆ ಮನವಿ ಮಾಡಿದ್ದರು.
ಇದೀಗ ಕೊಪ್ಪಳ ಜಿಲ್ಲಾಧಿಕಾರಿ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಸಹ ಅಧ್ಯಕ್ಷರಾಗಿರುವ ಸುರಳ್ಕರ್ ವಿಕಾಸ್ ಕಿಶೋರ್ ಮಂಗಳವಾರ ಕೂಡಲೇ ಅನಧಿಕೃತ ರೆಸಾರ್ಟ್ ಹೋಟೆಲ್ ಗಳನ್ನು ತೆರವು ಮಾಡಿ 48 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಗಂಗಾವತಿ ತಹಸಿಲ್ ದಾರರು ಮತ್ತು ಇಒ ಹಾಗೂ ಜೆಸ್ಕಾಂ ಇಲಾಖೆಗೆ ಆದೇಶ ಮಾಡಿದ್ದರು .
ಬುಧವಾರ ಹಂಪಿ ಪ್ರಾಧಿಕಾರದ ಆಯುಕ್ತರು ತಹಸೀಲ್ದಾರ್ ಇಒ ಹಾಗೂ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಸಣಾಪುರ ಸೇರಿದಂತೆ ಆನೆಗೊಂದಿ ಭಾಗದ ರೆಸಾರ್ಟ್ ಗಳ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿ 24 ಗಂಟೆ ಒಳಗೆ ಸ್ವಯಂ ಆಗಿ ರೆಸಾರ್ಟ್ ಗಳನ್ನು ತೆರವು ಮಾಡಿಕೊಳ್ಳಬೇಕು ಇಲ್ಲದಿದ್ದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ತೆರವು ಮಾಡಲಾಗುತ್ತದೆ ಎಂದು ನೋಟಿಸನ್ನು ರೆಸಾರ್ಟ್ ಬಾಗಿಲಿಗೆ ಅಂಟಿಸಲಾಗಿದೆ .
ಸುಪ್ರೀಂಕೋರ್ಟ್ ಆದೇಶ ಪಾಲನೆ :ವಿರುಪಾಪುರಗಡ್ಡಿ ತೆರವು ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಂತೆ ಆನೆಗುಂದಿ ಮತ್ತು ಹಂಪಿ ಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ರೆಸಾರ್ಟ್ ಹೋಟೆಲ್ ಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾಡಳಿತಗಳು ತೆರವು ಮಾಡಲು ಮುಂದಾಗಿವೆ .ಈಗಾಗಲೇ ಹಲವು ಬಾರಿ ರೆಸಾರ್ಟ್ ಹೋಟೆಲ್ ಮಾಲೀಕರಿಗೆ ಸ್ವಯಂ ಆಗಿ ತೆರವು ಮಾಡಿಕೊಳ್ಳುವಂತೆ ನೋಟಿಸ್ ಗಳನ್ನು ನೀಡಲಾಗಿದೆ ಕೊರೊನಾ ಮತ್ತಿತರ ಕಾರಣಕ್ಕಾಗಿ ಅನಧಿಕೃತ ರೆಸಾರ್ಟ್ ಹೋಟೆಲ್ ಗಳು ತೆರವಾಗಿಲ್ಲ .ಇದೀಗ ಪ್ರಾಧಿಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶದಂತೆ 24ಗಂಟೆಗಳ ಅವಧಿಯಲ್ಲಿ ರೆಸಾರ್ಟ್ ಹೋಟೆಲ್ ಮಾಲೀಕರು ಸ್ವಯಂ ಪ್ರೇರಣೆಯಿಂದ ತೆರವು ಮಾಡಿಕೊಳ್ಳಬೇಕು ಈಗಾಗಲೇ ಜೆಸ್ಕಾಂ ಇಲಾಖೆಯವರು ಅನಧಿಕೃತ ವಾಗಿ ಪಡೆದುಕೊಂಡಿದ್ದ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದ್ದಾರೆ
.ಪ್ರಾಧಿಕಾರ ವತಿಯಿಂದ ಪ್ರತಿ ರೆಸಾರ್ಟ್ ಬಾಗಿಲಿಗೂ ನೋಟಿಸನ್ನು ಅಂಟಿಸಲಾಗಿದೆ .ಈ ಬಾರಿ ಯಾವುದೇ ಕಾರಣಕ್ಕೂ ಅನಧಿಕೃತ ರೆಸಾರ್ಟ್ ಗಳು ಗಳನ್ನು ಉಳಿಸುವ ಮಾತೇ ಇಲ್ಲ ಸ್ವಯಂಪ್ರೇರಣೆಯಿಂದ ರೆಸಾರ್ಟ್ ಮಾಲೀಕರು ತೆರವು ಮಾಡಿಕೊಳ್ಳ ಬೇಕೆಂದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ಧರಾಮೇಶ ಉದಯವಾಣಿಗೆ ತಿಳಿಸಿದ್ದಾರೆ .
ಪ್ರವಾಸೋದ್ಯಮಕ್ಕೆ ಆದ್ಯತೆ ಮೂಲಕ ಸ್ಥಳೀಯರಿಗೆ ಉದ್ಯೋಗ : ವಿರುಪಾಪುರ ಗಡ್ಡೆಯಲ್ಲಿ ರೆಸಾರ್ಟ್ ಗಳ ತೆರವು ಮಾಡಿದ ನಂತರ ಆನೆಗೊಂದಿ ಸಣಾಪುರ ಭಾಗದಲ್ಲಿ ರೈತರ ಜಮೀನುಗಳಲ್ಲಿ ರೆಸಾರ್ಟ್ ಗಳನ್ನು ನಿರ್ಮಿಸಿಕೊಂಡು ಸ್ಥಳೀಯರು ಜೀವನ ನಡೆಸುತ್ತಿದೆ .ಇದೀಗ ಪ್ರಾಧಿಕಾರದವರು ರೆಸಾರ್ಟ್ ಮಾಡಿ ಸ್ಥಳೀಯರನ್ನು ಮಾಡುತ್ತಿದ್ದಾರೆ ಕೂಡಲೇ ಸರಕಾರ ನೂತನ ಹೊಸ ಮಾಸ್ಟರ್ ಪ್ಲಾನ್ ಅನುಷ್ಠಾನ ಮಾಡಿ ಸ್ಥಳೀಯರು ರೈತರು ತಮ್ಮ ಗದ್ದೆಗಳಲ್ಲಿ ಸಣ್ಣಪುಟ್ಟ ಹೋಟೆಲ್ ನಿರ್ಮಿಸಿಕೊಂಡು ಊಟ ವಸತಿ ಕಲ್ಪಿಸಲು ಅವಕಾಶ ಕಲ್ಪಿಸುವಂತೆ ಸ್ಥಳೀಯ ತರಕಾರಿ ವ್ಯಾಪಾರಿ ಹುಲುಗಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.