Advertisement
ಮಳೆ ಮೌನಿ ಆಗಿತ್ತು. ಮಟ ಮಟ ಮಧ್ಯಾಹ್ನ. ಸೂರ್ಯನ ಅನುಚರರಂತೆ ಶಾಖವನ್ನು ಉಗುಳುವ ಕಲ್ಲು- ಬಂಡೆಗಳು. ಕಾದ ಹಂಚಿನಂತಾದ ನೆಲ. ನೆತ್ತಿ ಅರೆಕ್ಷಣದಲ್ಲಿ ಬೇಯುವಷ್ಟು ಭಯಾನಕ ಬಿಸಿಲು. ಹಂಪಿಯ ತುಂಬೆಲ್ಲಾ ಬಿಸಿಲು ಕುದುರೆಗಳೇ ಓಡುತ್ತಿದ್ದವು. ಹೀಗೆ ರಾವು ರಾವು ಹೊಡೆಯುವ ಹೊತ್ತಲ್ಲೇ ಎಂ.ಪಿ. ಪ್ರಕಾಶ ನಗರದ ಕಡೆಯಿಂದ ಬರಿಮೈಯ ವೃದ್ಧರೊಬ್ಬರು ಬಿಸಿಲು ಕುದುರೆಗಳನ್ನು ಸೀಳುತ್ತಾ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬರುತ್ತಿದ್ದರು. ಬಾಗಿದ ದೇಹಕ್ಕೆ ಊರುಗೋಲಿನ ಆಸರೆ. ಕೈಯಲ್ಲಿ ಬುಟ್ಟಿ, ಅದರಲ್ಲಿ ಹೂ ಪಕಳೆಗಳು, ಪೂಜಾ ಸಾಮಾಗ್ರಿಗಳು, ಸಿಲ್ವರ್ ಬಕೆಟು… ಅವರ ಪೂಜಾ ಕಾಯಕವನ್ನು ಪರಿಚಯಿಸುತ್ತಿದ್ದವು.
ದೇಹ ಬಾಗಿದೆ. ಕೈ ಕಾಲುಗಳಲ್ಲಿ ಮೊದಲಿದ್ದ ಶಕ್ತಿ ಇಲ್ಲ. ಕಿವಿ ಮಂದಾಗಿದೆ. ಆದರೂ ನಿತ್ಯವೂ ಬಡವಿಲಿಂಗದ ಪೂಜೆ ಮಾತ್ರ ತಪ್ಪಿಸಲ್ಲ. ಮಳೆ-ಗಾಳಿ-ಬಿಸಲು ಯಾವುದನ್ನೂ ಲೆಕ್ಕಿಸದೇ ಭಟ್ಟರು, ಪ್ರತಿ ಮಧ್ಯಾಹ್ನದ ವೇಳೆಗೆ ದೇಗುಲದ ಬಳಿ ಹಾಜರು. ಲಿಂಗ ಬಳಸಿ ಹರಿಯುವ ನೀರಿನಿಂದಲೇ ಲಿಂಗವನ್ನು ಶುಚಿಗೊಳಿಸುತ್ತಾರೆ. ವಿಭೂತಿ ಹಚ್ಚಿ, ಹೂವು ಪತ್ರೆ ಮುಡಿಸುವಾಗ, ಬಾಯಿಯಲ್ಲಿ “ಓಂ ನಮಃ ಶಿವಾಯ’ ಪುಂಖಾನುಪುಂಖವಾಗಿ ಬರುತ್ತಲೇ ಇರುತ್ತದೆ. ಸುಮಾರು ಅರ್ಧ ತಾಸಿನ ಆರಾಧನೆ ಸಾಂಗೋಪಾಂಗವಾಗಿ ನಡೆಯುತ್ತೆ. ಇವರ ಭಕ್ತಿಯನ್ನು ನೋಡಿ, “ಲಿಂಗವೇ ಮೆಚ್ಚಿ ಹೌದೌದು ಎನ್ನುವಂತೆ’ ಭಕ್ತಿಯ ಪರಕಾಷ್ಠೆ ಸೃಷ್ಟಿ ಆಗಿರುತ್ತೆ.
Related Articles
Advertisement
ಬಡವಿಲಿಂಗ ಹುಟ್ಟಿದ ಕತೆ…“ಶೈವ ಮತ್ತು ವೈಷ್ಣವರ ನಡುವೆ ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ಉಗ್ರ ನರಸಿಂಹ ಮತ್ತು ಬಡವಿಲಿಂಗವನ್ನು ಒಂದೇ ಕಡೆ ಸ್ಥಾಪಿಸಲಾಗಿದೆ’ ಎನ್ನುತ್ತಾರೆ ಇತಿಹಾಸಕಾರರು. ಉಗ್ರ ನರಸಿಂಹ ದೇಗುಲಕ್ಕೆ ಹೊಂದಿಕೊಂಡಂತೆ ಇರುವ ಶಿವನ ಸುತ್ತ, ಎರಡು ದಂತಕತೆಗಳಿವೆ. ಈ ಶಿವಲಿಂಗವನ್ನು ಬಡ ರೈತ ಮಹಿಳೆ ಪ್ರತಿಷ್ಠಾಪಿಸಿದ್ದರಿಂದ, “ಬಡವಿಲಿಂಗ’ ಆಯಿತಂತೆ. ಬುಡಕಟ್ಟು ಜನಾಂಗದವನೊಬ್ಬ ತನ್ನ ಆಸೆಗಳನ್ನು ಈಡೇರಿಸಿದರೆ, ಒಂದು ಶಿವಲಿಂಗವನ್ನು ಕಟ್ಟುತ್ತೇನೆಂದು ಶಿವನಿಗೆ ಮಾತು ಕೊಡುತ್ತಾನಂತೆ. ಇದನ್ನರಿತ ಪರಮೇಶ್ವರನು ಅವನ ಆಸೆಗಳನ್ನು ಪೂರೈಸಿ, ಅವನ ಕೈಯಿಂದಲೇ ಲಿಂಗವನ್ನು ಸ್ಥಾಪಿಸಿಕೊಂಡನಂತೆ. ವಿಜಯ ನಗರದ ಕಾಲದಲ್ಲಿ ಈ ಲಿಂಗಕ್ಕೆ ವಿಶೇಷ ಪೂಜೆಗಳು ಸಲ್ಲುತ್ತಿದ್ದವಂತೆ. ವರ್ಷವಿಡೀ ಜಲಾವೃತ್ತ
ಬಡವಿಲಿಂಗದ ಒಳಾಂಗಣ ವರ್ಷವಿಡೀ ನೀರಿನಿಂದ ಆವೃತವಾಗಿರುತ್ತದೆ. ತುಂಗಾಭದ್ರ ಹೊಳೆಯ ತುರ್ತು ಕಾಲುವೆಯಿಂದ ಸಣ್ಣ ಕಾಲುವೆಯ ಮೂಲಕ ಹರಿಯುವ ನೀರು, ಈ ದೇಗುಲದ ಒಳಗೆ ಬಂದು ತದನಂತರ ಹೊಲಗದ್ದೆಗಳಿಗೆ ಹೋಗುತ್ತದೆ. “ಒಂದು ವೇಳೆ ಹೊಳೆ ಬತ್ತಿ ಹೋದರೆ, ನೀರಿನ ಸೆಲೆ ಬರುತ್ತೆ. ಎಲ್ಲವೂ ಶಿವನ ಇಚ್ಛೆ’ ಎನ್ನುತ್ತಾರೆ, ಪುರಾತತ್ವ ಇಲಾಖೆಯ ನರಸಮ್ಮ. ಮುಕ್ಕಣ್ಣನಿಗೇ ಕಣ್ಣಾದ ಕೃಷ್ಣ ಭಟ್ಟರು!
ಇಷ್ಟೆಲ್ಲಾ ವಿಶೇಷತೆಗಳುಳ್ಳ ಬಡವಿಲಿಂಗ ಈ ಹಿಂದೆ ಉಪೇಕ್ಷೆಗೆ ತುತ್ತಾಗಿತ್ತು. “ಅದು 1986 ರ ದಿನಗಳು. ಕಂಚಿ ಶ್ರೀಗಳು ಹಂಪಿಗೆ ಬಂದಿದ್ದರು. ಆಗ ಬಡವಿಲಿಂಗದರ್ಶನ ಮಾಡಿದ ಶ್ರೀಗಳು ಈ ಲಿಂಗ ಶುದ್ಧ ಆಗಿದೆ. ಯಾಕೆ ಇದನ್ನು ದಿನಂಪ್ರತಿ ಪೂಜಿಸುತ್ತಿಲ್ಲ..? ಎಂದು ಪ್ರಶ್ನಿಸಿದರು. ಆಗ ಆನೆಗುಂದಿ ರಾಜರ ದೃಷ್ಟಿ ನನ್ನ ಮೇಲೆ ಬಿತ್ತು. ಹೊಣೆಗಾರಿಕೆ ಕೊಟ್ಟರು. ಅಂದಿನಿಂದ ಈ ಶಿವನೊಂದಿಗೆ ಆರಂಭವಾದ ನಂಟು ಇಲ್ಲಿಯವರೆಗೆ ಎಳೆ ತಂದಿದೆ’ ಎನ್ನುತ್ತಾರೆ, ಕೃಷ್ಣಭಟ್ಟರು. ಅಂದಹಾಗೆ, ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿ ಮೂಲದವರು. ಹಂಪಿಯಲ್ಲಿ ಸತ್ಯನಾರಾಯಣನ ಅರ್ಚಕರಾಗುವಂತೆ ರಾಮಭಟ್ ಎನ್ನುವರು 1978ರಲ್ಲಿ ಇವರನ್ನು ಕರೆತಂದರಂತೆ. ಹೀಗೆ ಬಂದವರು ಕ್ರಮೇಣ, ಪಂಪಾಪತಿಯ ಅರ್ಚಕರೂ ಆದರು. ಇಲ್ಲಿನ ಪರಿಸರಕ್ಕೆ ಮಾರು ಹೋದರು. ಈಗ ಇವರು ಮರಳಿ ಊರಿಗೆ ಹೋಗುವುದನ್ನು ಯೋಚಿಸುತ್ತಲೂ ಇಲ್ಲ. “ನನ್ನನ್ನು ಪೂರ್ಣವಾಗಿ ಈ ಬಡವಿಲಿಂಗನ ಸೇವೆಗೆ ಮೀಸಲಿಟ್ಟದ್ದೇನೆ’ ಎನ್ನುವಾಗ, ಅವರ ಮೊಗದಲ್ಲಿನ ನೆರಿಗೆಗಳು ಇನ್ನಷ್ಟಾದವು. ಈ ದೇಗುಲದ ಹೊರಗಡೆ ನೆರಳಿನ ವ್ಯವಸ್ಥೆಯಿಲ್ಲ. ಕಾದಿರುವ ಬಂಡೆಯ ಮೇಲೆ ಒಂದೆರೆಡು ಕಲ್ಲುಗಳನ್ನು ಇಟ್ಟು, ಕೃಷ್ಣಭಟ್ಟರು ಅದನ್ನೇ ಆಸನ ಮಾಡಿಕೊಂಡಿದ್ದಾರೆ. ಬರುವ ಪ್ರವಾಸಿಗರಿಗೆ, ಶಿವನ ಭಕ್ತರಿಗೆ ನೀರು ಚುಂಬಿಸಿ, ಆಶೀರ್ವಾದಿಸುತ್ತಾರೆ. ನಾಲಿಗೆಯ ತುದಿಯಲ್ಲಿ ಸದಾ ಶಿವನಾಮ ಸ್ಮರಣೆ. ಬೇಸರವಾದರೆ ಪುಸ್ತಕಗಳೇ ಸಹಚರ. ಸಂಜೆ ಪುರಾತತ್ವ ಇಲಾಖೆಯ ಸಿಬ್ಬಂದಿ, ಬಾಗಿಲು ಮುಚ್ಚುತ್ತಿದ್ದಂತೆ, ಆ ದಿನ ಕರ್ತವ್ಯಕ್ಕೆ ತೆರೆ. “ವಯಸ್ಸಾಗಿದೆ. ಇನ್ನಾದರೂ ಮನೆಯಲ್ಲಿರಿ ಎಂದು ಕುಟುಂಬದವರು ಹೇಳುತ್ತಾರೆ. ಆದರೆ, ನನಗೆ ಶಿವನ ಆರಾಧನೆಯೇ ಸರ್ವಸ್ವ. ಮುಪ್ಪು ದೇಹಕ್ಕೆ ಬಂದಿರಬಹುದು. ನನ್ನ ಸಂಕಲ್ಪ, ಭಕ್ತಿಗೆ ಮುಪ್ಪಾಗಿಲ್ಲ’ ಎನ್ನುತ್ತಾರೆ ಕೃಷ್ಣಭಟ್ಟರು. ಬಡವಿಲಿಂಗನನ್ನು ನೋಡಲು ಬರುವ ವಿದೇಶಿಗರ ಬಾಯಿಯಲ್ಲೂ, “ಓಂ ನಮಃ ಶಿವಾಯ’ ಮಂತ್ರೋಚ್ಚಾರ ಮಾಡಿಸುವುದೂ, ಭಟ್ಟರ ಖುಷಿಯ ಸಂಗತಿಗಳಲ್ಲಿ ಒಂದು. ನವಾಜ್ ತರುವ ಹೂವೂ, ಅಬ್ಟಾಸ್‌ನ ಉಪಕಾರವೂ…
ಭಟ್ಟರ ಈ ಶಿವಲಿಂಗದ ಅಚಲ ಪೂಜಾ ಕೆಲಸಕ್ಕೆ ಮುಸ್ಲಿಂ ಸಹೃದಯರ ಸಹಕಾರವೂ ದೊಡ್ಡದು. ಇಲ್ಲಿ ಪ್ರವಾಸಿ ಗೈಡ್ ಪುಸ್ತಕಗಳನ್ನು ಮಾರುವ ನವಾಜ್ ಎಂಬ ಬಾಲಕ, ಭಟ್ಟರಿಗೆ ಹೂವು, ಬಾಳೆದೆಲೆಗಳನ್ನು ಕಿತ್ತು ತಂದು ಕೊಡುವ ಕಾಯಕ ಮಾಡುತ್ತಾನೆ. ಇನ್ನು ಭಟ್ಟರು ತುಂಬಾ ನಿತ್ರಾಣಗೊಂಡಾಗ, ಜೋರು ಮಳೆ ಇದ್ದಾಗ, ಅವರನ್ನು ಮನೆಯಿಂದ ಕರೆತರುವುದು, ವಾಪಸು ಬಿಡುವುದನ್ನು ಗೋಲಿ ಸೋಡ, ಎಳನೀರು ಮಾರುವ ಅಬ್ಟಾಸ್ ಮಾಡುತ್ತಾರೆ! “ಭಟ್ಟರು ಈ ವಯಸ್ಸಿನಲ್ಲೂ ಬಡವಿಲಿಂಗನ ಪೂಜಿಸುವುದು ದೊಡ್ಡ ಕೆಲಸ. ಇಂಥ ನಿಸ್ವಾರ್ಥ ಸೇವೆಯ ಜೀವಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದೇವೆ’ ಎನ್ನುತ್ತಾರೆ ನವಾಜ್ ಮತ್ತು ಅಬ್ಟಾಸ್. ಚಿತ್ರ- ಲೇಖನ: ಸ್ವರೂಪಾನಂದ ಕೊಟ್ಟೂರು