Advertisement

ಹಂಪಿ ಉತ್ಸವ ಆಚರಣೆಗೆ ಮತ್ತೆ ಅಡಚಣೆ

08:28 AM Jan 15, 2019 | Team Udayavani |

ಬಳ್ಳಾರಿ: ಅಂತಾರಾಷ್ಟ್ರೀಯ ಗಮನ ಸೆಳೆದಿರುವ ಹಂಪಿ ಉತ್ಸವವ ಆಚರಣೆ ಗೊಂದಲ ಮುಂದುವರಿದಿದೆ. ಉತ್ಸವ ಆಚರಣೆಗೆ ಕಲಾವಿದರು, ಜನರಿಂದ ಒತ್ತಾಯ ಕೇಳಿಬರುತ್ತಿರುವ ಮಧ್ಯೆಯೇ ಸರಕಾರ ಜಿಲ್ಲಾಡಳಿತ ನೀಡಿರುವ ವರದಿಯನ್ನೇ ಸರಕಾರ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

Advertisement

ಹಂಪಿ ಉತ್ಸವ ಬಗೆಗಿನ ನಿರಾಸಕ್ತಿಯನ್ನು ಮತ್ತೂಮ್ಮೆ ಪ್ರದರ್ಶಿಸಿರುವ ಸರಕಾರ ಈಗ ನೀಡಲಾಗಿರುವ 2.10 ಕೋಟಿ ರೂ. ಅನುದಾನದಲ್ಲೇ ಹಂಪಿ ಉತ್ಸವವನ್ನು ಆಚರಿಸುವಂತೆ ಸೂಚಿಸಿರುವುದು ಜಿಲ್ಲೆಯ ಕಲಾವಿದರಲ್ಲಿ ಬೇಸರ ಮೂಡಿಸಿದೆ.

ಐತಿಹಾಸಿಕ ಹಿನ್ನೆಲೆಯುಳ್ಳ ಹಂಪಿಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈಚೆಗೆ ಅಮೆರಿಕಾದ ನ್ಯೂಯಾರ್ಕ್‌ ಟೈಮ್ಸ್‌ ಗುರುತಿಸಿರುವ ಪ್ರಸಕ್ತ ವರ್ಷದ 52 ಪ್ರೇಕ್ಷಣೀಯ ತಾಣಗಳಲ್ಲಿ ಹಂಪಿಗೆ 2ನೇ ಸ್ಥಾನ ಲಭಿಸಿದೆ. ಅಲ್ಲದೇ, ಏಷ್ಯಾದ ಐದು ಪ್ರವಾಸಿ ತಾಣಗಳಲ್ಲಿ ಹಂಪಿ ಸಹ ಒಂದಾಗಿದೆ. ದಕ್ಷಿಣ ಏಷ್ಯಾದ ಏಕೈಕ ಪ್ರವಾಸಿತಾಣ ಹಾಗೂ ಏಷ್ಯಾ ಮಟ್ಟದಲ್ಲಿ 2019ರ ಪ್ರವರ್ಧಮಾನಕ್ಕೆ ಬರುತ್ತಿರುವ ಪಾರಂಪರಿಕ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿರುವ, ಜನಾಕರ್ಷಣೆ ಹೊಂದಿರುವ ಹಂಪಿಯಲ್ಲಿ ವರ್ಷಕ್ಕೊಮ್ಮೆ ಉತ್ಸವ ಆಚರಿಸಲು ರಾಜ್ಯ ಸರ್ಕಾರ ಬರದ ನೆಪವೊಡ್ಡಿ ಮೀನಾಮೇಷ ಎಣಿಸುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಬಳ್ಳಾರಿ ಲೋಕಸಭೆ ಉಪಚುನಾವಣೆ ನಿಮಿತ್ತ ಮುಂದೂಡಿದ್ದ ಹಂಪಿ ಉತ್ಸವವನ್ನು ನಂತರ ಬರದ ನೆಪವೊಡ್ಡಿ ಪ್ರಸಕ್ತ ವರ್ಷ ರದ್ದುಗೊಳಿಸುವುದಾಗಿ ಉಸ್ತುವಾರಿ ಸಚಿವರು ತಿಳಿಸಿದ್ದರು. ಇದರಿಂದ ಜಿಲ್ಲೆಯ ಕಲಾವಿದರು, ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಸ್ವಾಮೀಜಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಹಂಪಿ ಉತ್ಸವವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಪ್ರಸಕ್ತ ವರ್ಷ ಆಚರಿಸಲೇಬೇಕು ಎಂದು ಪಟ್ಟು ಹಿಡಿದಿದ್ದ ಹಿನ್ನೆಲೆಯಲ್ಲಿ ಮಣಿದ ರಾಜ್ಯ ಸರ್ಕಾರ ಕೊನೆಗೂ ಹಂಪಿ ಉತ್ಸವವನ್ನು ಆಚರಿಸುವುದಾಗಿ ತಿಳಿಸಿ, ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿತ್ತು.

ಸರ್ಕಾರದ ಸೂಚನೆಯಂತೆ ಕ್ರಿಯಾಯೋಜನೆ ಸಿದ್ಧಪಡಿಸುವಲ್ಲಿ ತೊಡಗಿದ್ದ ಜಿಲ್ಲಾಡಳಿತ, ಕಳೆದ 2017ರಲ್ಲಿ ಮೂರು ದಿನಗಳ ಹಂಪಿ ಉತ್ಸವ ಆಚರಣೆಗೆ 14 ಕೋಟಿ ರೂ. ಖರ್ಚು ಮಾಡಿದ್ದು, ಪ್ರಸಕ್ತ ವರ್ಷ ಎರಡು ದಿನ ಸರಳ ಆಚರಣೆಗೆ ಖರ್ಚು-ವೆಚ್ಚ ಕಡಿತಗೊಳಿಸಿ 8 ಕೋಟಿ ರೂ. ಅನುದಾನಕ್ಕೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿತ್ತು. ವೆಚ್ಚ ಕಡಿಮೆಗೊಳಿಸಲು ವೇದಿಕೆಗಳ ಸಂಖ್ಯೆಯನ್ನೂ ಕಡಿತಗೊಳಿಸಲಾಗಿತ್ತು. ಹಂಪಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜಿಸುವ ಕುರಿತು ವರದಿಯಲ್ಲಿ ಸೂಚಿಸಲಾಗಿತ್ತು. ಈ ಎಲ್ಲವನ್ನು ಸೇರಿಸಿ 8 ಕೋಟಿ ರೂ.ಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿತ್ತು. ಆದರೆ, ಇಡೀ ವರದಿಯನ್ನೇ ತಿರಸ್ಕರಿಸಿರುವ ಮೈತ್ರಿ ಸರ್ಕಾರ ಜಿಲ್ಲೆಯ ಕಲಾವಿದರ, ಜನರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಕೊಟ್ಟ ಅನುದಾನದಲ್ಲೇ ಉತ್ಸವ ಆಚರಿಸಿ: ನೀಡಿದ ಅನುದಾನದಲ್ಲೇ ಉತ್ಸವವನ್ನು ಸರಳವಾಗಿ ಆಚರಿಸುವಂತೆ ಸರಕಾರ ಸೂಚಿಸುತ್ತಿದೆ ಎಂದು ತಿಳಿದು ಬಂದಿದೆ. ಉತ್ಸವಕ್ಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 60 ಲಕ್ಷ ರೂ., ಪ್ರವಾಸೋದ್ಯಮ ಇಲಾಖೆಗೆ 1.50 ಕೋಟಿ ರೂ. ಸೇರಿ ಒಟ್ಟು 2.10 ಕೋಟಿ ರೂ. ವೆಚ್ಚದಲ್ಲಿ ಆಚರಿಸುವಂತೆ ಸೂಚಿಸಿದೆ. ಅಲ್ಲದೇ, ಸ್ಥಳೀಯ ಸಂಸ್ಥೆಗಳಿಂದ ಹಣ ಕ್ರೋಢೀಕರಿಸುವಂತೆ ಸೂಚಿಸಿದೆ ಎನ್ನಲಾಗುತ್ತಿದೆ. ಈ ಹಿಂದೆ ವಿಶ್ವದ ಗಮನ ಸೆಳೆಯುವಂತೆ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದ ಹಂಪಿ ಉತ್ಸವವನ್ನು ಸರಳ ಆಚರಣೆಗಾದರೂ ಕನಿಷ್ಠ ಅನುದಾನ ಬಿಡುಗಡೆ ಮಾಡದ ಸರ್ಕಾರದ ವೈಖರಿಗೆ ಸ್ಥಳೀಯ ಕಲಾವಿದರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸರಳ ಆಚರಣೆಗೆ ಸಮರ್ಪಕ ಅನುದಾನ ನೀಡದ ಸರ್ಕಾರ

ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿದ ವತಿಯಿಂದ 8 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಈಗಾಗಲೇ ಕಳುಹಿಸಲಾಗಿತ್ತು. ಆದರೆ, 2.10 ಕೋಟಿ ರೂ. ಬಿಡುಗಡೆ ಮಾಡಿರುವ ರಾಜ್ಯ ಹಣಕಾಸು ಇಲಾಖೆ ಇದರೊಂದಿಗೆ ಸ್ಥಳೀಯ ಸಂಸ್ಥೆಗಳಿಂದ ಹಣ ಕ್ರೂಢೀಕರಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಫೆ.16 ಮತ್ತು 17ರಂದು ಉತ್ಸವ ಆಚರಣೆಗೆ ನಿರ್ಧರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕೃತವಾಗಿ ದಿನಾಂಕ ಘೋಷಣೆ ಮಾಡಲಿದ್ದಾರೆ.
ಡಾ| ರಾಮ್‌ ಪ್ರಸಾತ್‌ ಮನೋಹರ್‌, ಜಿಲ್ಲಾಧಿಕಾರಿ, ಬಳ್ಳಾರಿ.

ಫೆ.16, 17ರಂದು ಹಂಪಿ ಉತ್ಸವ ಫಿಕ್ಸ್‌?

ಪ್ರತಿ ವರ್ಷ ನ.3,4,5 ರಂದು ಆಚರಿಸಬೇಕಿದ್ದ ಹಂಪಿ ಉತ್ಸವವನ್ನು ಕಳೆದ ಮೂರು ತಿಂಗಳಿಂದ ಮುಂದೂಡಲಾಗುತ್ತಿದ್ದು, ಇದೀಗ ಮತ್ತೂಮ್ಮೆ ಫೆ.16,17 ರಂದು ದಿನಾಂಕ ನಿಗದಿಪಡಿಸಿ ಜಿಲ್ಲಾಡಳಿತ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ಈ ಹಿಂದೆ ಜ.12,13 ರಂದು ಉತ್ಸವ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದ್ದರೂ, ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ಮತ್ತೂಮ್ಮೆ ದಿನಾಂಕ ನಿಗದಿಪಡಿಸಲಾಗಿದೆ. ಹೊಸದಾಗಿ ನಿಗದಿಪಡಿಸಲಾಗಿರುವ ದಿನಾಂಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಅವರೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next