Advertisement

ಹಂಪನಕಟ್ಟೆ:ಕುಂಟುತ್ತಿರುವ ಕಾರು ಪಾರ್ಕಿಂಗ್‌ ಕಾಮಗಾರಿ

05:52 PM Jan 13, 2023 | Team Udayavani |

ಹಂಪನಕಟ್ಟೆ: ಹಂಪನಕಟ್ಟೆ ಹಳೆ ಬಸ್‌ ನಿಲ್ದಾಣದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ “ಮಲ್ಟಿಲೆವೆಲ್‌ ಕಾರು ಪಾರ್ಕಿಂಗ್‌’ ಕಾಮಗಾರಿ ನಿಧಾನವಾಗಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರಕ್ಕೆ ಹೊಡೆತ ಬಿದ್ದಿದ್ದು, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ!

Advertisement

10 ತಿಂಗಳ ಹಿಂದೆ ಕಾಮಗಾರಿ ಆರಂಭವಾಗಿದ್ದು ಆರಂಭಿಕ ತಯಾರಿ ಮಾತ್ರ ಇಲ್ಲಿಯವರೆಗೆ ಆಗಿದೆ. ಬೃಹತ್‌ ಹೊಂಡ ಮಾಡಿದ್ದು ಈ ಪ್ರದೇಶ ಅಪಾಯಕಾರಿಯಾಗಿಯೂ ಕಾಣುತ್ತಿದೆ. ಕಾಮಗಾರಿಯ ನೆಪದಿಂದ ಬಸ್‌ ನಿಲ್ದಾಣದ ನಾಲ್ಕೂ ಭಾಗದಲ್ಲಿ ಪೂರ್ಣ ತಗಡು ಶೀಟ್‌ ಅಳವಡಿಸಿ ನಿರ್ಬಂಧ ವಿಧಿಸಲಾಗಿದೆ. ಪಾದಚಾರಿಗಳು ಹಾಗೂ ಲಘುವಾಹನ ಸವಾರರಿಗೆ ಇಲ್ಲಿ ಬಹು ಸಮಸ್ಯೆ ಕಾಡುವಂತಾಗಿದೆ.

ಕಚೇರಿಗೆ ತೆರಳಲು ಹಾಗೂ ಹಿಂದಿರುಗುವ ಬೆಳಗ್ಗೆ, ಸಂಜೆ ವೇಳೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪಾದಚಾರಿಗಳು ಈ ರಸ್ತೆ ಬಳಸುವುದರಿಂದ ಅವರು ಸಂಕಷ್ಟ ಎದುರಿಸುವಂತಾಗಿದೆ. ಕಾಮಗಾರಿ ಕಾರಣದಿಂದ ಕಾರು, ಬೈಕ್‌ ನಿಲುಗಡೆಗೆ ಸೂಕ್ತ ಜಾಗವಿಲ್ಲದೆ ಗ್ರಾಹಕರು ಬರುತ್ತಿಲ್ಲ ಹಾಗೂ ಇರುವ ಕೊಂಚ ಜಾಗದಲ್ಲಿ ಅಡ್ಡಾದಿಡ್ಡಿ ಕೆಲವರು ವಾಹನವಿಟ್ಟು ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂಬುದು ಸ್ಥಳೀಯರ ಆಕ್ಷೇಪ.

“ಕಾಮಗಾರಿ ನಡೆಸುವ ಸಂದರ್ಭ ಸ್ಥಳೀಯರಿಗೆ ಸಮಸ್ಯೆ ಆಗುವುದು ಸಹಜ. ಆದರೆ ತಿಂಗಳುಗಟ್ಟಲೆ ಸಮಸ್ಯೆ ಯನ್ನೇ ಮಾಡುವ ಬದಲು ಸ್ಥಳೀಯರಿಗೆ ಪರ್ಯಾಯ ವ್ಯವಸ್ಥೆಗಳತ್ತ ಕೊಂಚ ಗಮನಹರಿಸಿದರೆ ಉತ್ತಮ. ಸ್ಥಳೀಯ ವ್ಯಾಪಾರ ಹಾಗೂ ಪಾದಚಾರಿಗಳಿಗೂ ಸುಲಭವಾಗುತ್ತದೆ’ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ.

ಪರಿಶೀಲಿಸಲಾಗುವುದು “ಸುದಿನ’ ಜತೆಗೆ ಪ್ರತಿಕ್ರಿಯಿಸಿದ ಸ್ಮಾರ್ಟ್‌ ಸಿಟಿ ಜನರಲ್‌ ಮ್ಯಾನೇಜರ್‌ ಅರುಣ್‌ ಪ್ರಭ ಅವರು, “ತಳಮಟ್ಟದ ಕಾಮಗಾರಿ ಸದ್ಯ ನಡೆಯುತ್ತಿದೆ. ಹಂತ ಹಂತವಾಗಿ ಇದು ನಡೆಯಬೇಕಿದೆ. ನಿಗದಿತ ಸಮಯದಲ್ಲಿಯೇ ಕಾಮಗಾರಿ ಮುಗಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ಸ್ಥಳೀಯರ ಸಮಸ್ಯೆಗಳ ಬಗ್ಗೆ ಪರಿಶೀಲಿಸಲಾಗುವುದು’ ಎಂದರು.

Advertisement

ಸರಿಯಾಗಬಹುದೆಂಬ ಆಸೆ-ನಿರಾಶೆ!
ಕಾಮಗಾರಿ ಮುಗಿದ ಮೇಲೆ ಎಲ್ಲವೂ ಸರಿಯಾಗಬಹುದು ಎಂದು ಸ್ಥಳೀಯರು ಅಂದುಕೊಂಡಿದ್ದರು. ಆದರೆ ಸುದೀರ್ಘ‌ ತಿಂಗಳಿನಿಂದ ಇಲ್ಲಿ ನಿರೀಕ್ಷಿತ ಕಾಮಗಾರಿಯೇ ಆರಂಭವಾಗದಿರುವ ಕಾರಣದಿಂದ ವ್ಯಾಪಾರಿಗಳು ಮಾತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಪೂರ್ಣ ಕೆಲಸ ಪ್ರಾರಂಭಿಸದ ಕಾರಣದಿಂದ ಸದ್ಯ ಪಾರ್ಕಿಂಗ್‌ ವ್ಯವಸ್ಥೆಯೇ ಅಸ್ತವ್ಯಸ್ಥವಾಗಿದೆ. ಸ್ಥಳೀಯ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ. ಇಲ್ಲಿರುವ ಹೊಟೇಲ್‌, ಲಾಡ್ಜ್, ಅಂಗಡಿ ಸಹಿತ ವಿವಿಧ ವ್ಯಾಪಾರಸ್ಥರಿಗೆ ಗ್ರಾಹಕರ ಕೊರತೆ ಎದುರಾಗಿದೆ. ಹೀಗಾಗಿ ಆಸೆ-ನಿರಾಶೆಯಾಗಿದೆ!

ಕಾಮಗಾರಿಗೆ ವೇಗ
ಹಂಪನಕಟ್ಟೆ ಹಳೆ ಬಸ್‌ ನಿಲ್ದಾಣದಲ್ಲಿ ಮಲ್ಟಿಲೆವೆಲ್‌ ಕಾರ್‌ ಪಾರ್ಕಿಂಗ್‌ ಕಾಮಗಾರಿ ಕೆಲವು ಕಾರಣದಿಂದ ಕೊಂಚ ಸಮಯ ನಿಧಾನ ಆಗಿತ್ತು. ಆದರೆ ಈಗ ಕಾಮಗಾರಿ ಭರದಿಂದ ನಡೆಯುತ್ತಿದೆ. ಸ್ಥಳೀಯರಿಗೆ ಎದುರಾಗಿರುವ ಸಮಸ್ಯೆಗಳ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು.
-ಅಕ್ಷಯ್‌ ಶ್ರೀಧರ್‌,
ಆಯುಕ್ತರು, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next