ಗಾಜಾಪಟ್ಟಿ/ಇಸ್ರೇಲ್: ಇತ್ತೀಚೆಗೆ ನಡೆದ ವೈಮಾನಿಕ(Airstrike) ದಾಳಿಯಲ್ಲಿ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್(Yahya Sinwar) ಹತ್ಯೆಗೀಡಾಗಿದ್ದಾರೆಂಬ ಊಹಾಪೋಹದ ಬಗ್ಗೆ ಇಸ್ರೇಲ್ ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಇಸ್ರೇಲ್ ಮಾಧ್ಯಮಗಳ ವರದಿ ಪ್ರಕಾರ, ಯಾಹ್ಯಾ ಸಿನ್ವಾರ್ ಸಾವಿಗೀಡಾಗಿರಬಹುದು ಎಂಬ ಸೇನಾ ಗುಪ್ತಚರ ಇಲಾಖೆಯ ಸಲಹೆ ಮೇರೆಗೆ ಇಸ್ರೇಲ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ನಡೆದ ವೈಮಾನಿಕ ದಾಳಿಯ ನಂತರ ಹಮಾಸ್ ನಾಯಕ ಯಾಹ್ಯಾ ಕಣ್ಮರೆಯಾಗಿರುವುದಾಗಿ ಪತ್ರಕರ್ತ ಬೆನ್ ಕ್ಯಾಸ್ಪಿಟ್ (Ben Caspit) ವರದಿಯಲ್ಲಿ ಉಲ್ಲೇಖಿಸಿದ ನಂತರ ಊಹಾಪೋಹಗಳು ದಟ್ಟವಾಗಿ ಹರಿದಾಡುತ್ತಿರುವುದಾಗಿ ವರದಿ ವಿವರಿಸಿದೆ.
ಆದರೆ ಯಾಹ್ಯಾ ಸಿನ್ವಾರ್ ಸಾವಿನ ಬಗ್ಗೆ ಐಡಿಎಫ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕುರಿತು ಜೆರುಸಲೇಂ ಪೋಸ್ಟ್ ಸಂದೇಹ ವ್ಯಕ್ತಪಡಿಸಿದೆ. ಮತ್ತೊಂದೆಡೆ ಉನ್ನತ ಮೂಲಗಳು ಊಹಾಪೋಹವನ್ನು ತಳ್ಳಿಹಾಕಿದ್ದು, ಇದು ಸೇನೆಯೊಳಗಿನ ಭಿನ್ನಾಭಿಪ್ರಾಯ ಇದ್ದಿರಬಹುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ.