ಜೆರುಸಲೇಂ: ಹಮಾಸ್ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ನ ಮೂವರು ಮಕ್ಕಳನ್ನು ಗಾಜಾದಲ್ಲಿ ನಡೆದ ಏರ್ ಸ್ಟ್ರೈಕ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.
ಬುಧವಾರ ನಡೆದ ಏರ್ ಸ್ಟ್ರೈಕ್ ನಲ್ಲಿ ಹಮಾಸ್ ಮಿಲಿಟರಿ ವಿಭಾಗದ ಹೆಸರಾಂತ ಸೆಲ್ ಕಮಾಂಡರ್ ಅಮೀರ್ ಹನಿಯೆಹ್ ಮತ್ತು ಸಹೋದರರಾದ ಮೊಹಮ್ಮದ್ ಮತ್ತು ಹಜೆಮ್ ಹನಿಯೆಹ್ ಹತ್ಯೆಯಾಗಿದ್ದಾರೆ.
“ಐಎಎಫ್ ವಿಮಾನವು ಇಂದು ಸೆಂಟ್ರಲ್ ಗಾಜಾದಲ್ಲಿ ಹಮಾಸ್ ಮಿಲಿಟರಿ ವಿಭಾಗದಲ್ಲಿ ಸೆಲ್ ಕಮಾಂಡರ್ ಅಮೀರ್ ಹನಿಯೆಹ್ ಮತ್ತು ಮೊಹಮ್ಮದ್ ಮತ್ತು ಹಜೆಮ್ ಹನಿಯೆಹ್ ರನ್ನು ಹೊಡೆದಿದೆ. ಮೂವರು ಹಮಾಸ್ ರಾಜಕೀಯ ಬ್ಯೂರೋ ಅಧ್ಯಕ್ಷ ಇಸ್ಮಾಯಿಲ್ ಹನಿಯೆಹ್ ಅವರ ಪುತ್ರರು ಎಂದು ಐಡಿಎಫ್ ಖಚಿತಪಡಿಸುತ್ತದೆ” ಎಂದು ಐಡಿಎಫ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದೆ.
ಅಲ್ ಜಜೀರಾ ಪ್ರಕಾರ, ದುರಂತವು ಇಸ್ಮಾಯಿಲ್ ಹನಿಯೆಹ್ ಅವರ ಕುಟುಂಬದಲ್ಲಿ ಇನ್ನೂ ಹಾನಿ ಮಾಡಿದೆ. ಶತಿ ನಿರಾಶ್ರಿತರ ಶಿಬಿರದ ಮೇಲೆ ನಡೆದ ಏರ್ ಸ್ಟ್ರೈಕ್ ಅವರ ನಾಲ್ಕು ಮೊಮ್ಮಕ್ಕಳ ಪ್ರಾಣವನ್ನು ಬಲಿತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇದು ಈದ್ ಅಲ್-ಫಿತರ್‌ನ ಮೊದಲ ದಿನದಂದು ನಡೆದ ಈ ಘಟನೆಯಿಂದ ಪ್ರದೇಶದಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ಮಾಯಿಲ್ ಹನಿಯೆಹ್, “ಹುತಾತ್ಮರ ರಕ್ತ ಮತ್ತು ಗಾಯಗೊಂಡವರ ನೋವಿನ ಮೂಲಕ, ನಾವು ಭರವಸೆಯನ್ನು ಸೃಷ್ಟಿಸುತ್ತೇವೆ, ನಾವು ಭವಿಷ್ಯವನ್ನು ರಚಿಸುತ್ತೇವೆ, ನಮ್ಮ ಜನರಿಗೆ ಮತ್ತು ನಮ್ಮ ರಾಷ್ಟ್ರಕ್ಕೆ ನಾವು ಸ್ವಾತಂತ್ರ್ಯವನ್ನು ತರುತ್ತೇವೆ” ಎಂದು ಹೇಳಿದರು. ಸೊಸೆಯಂದಿರು ಮತ್ತು ಸೋದರಳಿಯರು ಸೇರಿದಂತೆ ಅವರ ಕುಟುಂಬದ ಸುಮಾರು 60 ಸದಸ್ಯರು ಯುದ್ಧದ ಆರಂಭದಿಂದಲೂ ಕೊಲ್ಲಲ್ಪಟ್ಟರು.