ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿ., ಮತ್ತೂಂದು ಲಘು ಬಳಕೆ ಹೆಲಿಕಾಪ್ಟರ್ (ಎಲ್‌ಯುಎಚ್) ಅನ್ನು ಯಶಸ್ವಿಯಾಗಿ ಹಾರಾಟ ನಡೆಸುವ ಮತ್ತೂಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.
ಪ್ರೋಟೋಟೈಪ್-3 ಮಾದರಿಯ ಲಘು ಬಳಕೆ ಹೆಲಿಕಾಪ್ಟರ್ ಅನ್ನು ಶುಕ್ರವಾರ ವಿಂಗ್ ಕಮಾಂಡರ್ (ನಿವೃತ್ತ) ಅನಿಲ್ ಭಂಬಾನಿ ಮತ್ತು ಕ್ಯಾಪ್ಟನ್ (ನಿವೃತ್ತ) ಎಂ.ಆರ್. ಆನಂದ್, ಆರು ಕಿ.ಮೀ. ಎತ್ತರದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದರು. ಈ ಮೂಲಕ ಮೂರೂ ಪ್ರೋಟೋಟೈಪ್ ಮಾದರಿ ಹೆಲಿಕಾಪ್ಟರ್‌ಗಳ ಪರೀಕ್ಷೆಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ., (ಎಚ್‌ಎಎಲ್) ಯಶಸ್ಸು ಸಾಧಿಸಿದಂತಾಗಿದೆ.
ದೇಶೀ ನಿರ್ಮಿತ ಈ ಹೆಲಿಕಾಪ್ಟರ್ ಪೂರ್ಣಪ್ರಮಾಣದ ಬಳಕೆಗೆ ಪ್ರಮಾಣಪತ್ರ ಪಡೆದುಕೊಳ್ಳಲು ಆರು ಕಿ.ಮೀ ಎತ್ತರದ ಹಾರಾಟ ಅತ್ಯಂತ ಮಹತ್ವದ ಘಟ್ಟ. ಪರೀಕ್ಷಾರ್ಥ ಹಾರಾಟ ಮತ್ತು ನಿರ್ವಹಣೆ ವೇಳೆ ಹೆಲಿಕಾಪ್ಟರ್ ಸಾಮರ್ಥ್ಯ ತೃಪ್ತಿ ತಂದಿದೆ. ಈ ಹೆಲಿಕಾಪ್ಟರ್ 3-ಟನ್ ಸಾಮರ್ಥ್ಯ ಹಾಗೂ ಹೊಸ ತಲೆಮಾರಿನ ಸಿಂಗಲ್ ಎಂಜಿನ್ ಹೊಂದಿದೆ.
ಎಚ್‌ಎಎಲ್‌ನ ರೋಟರಿ ವಿಂಗ್ ರಿಸರ್ಚ್ ಆಂಡ್ ಡಿಸೈನ್ ಸೆಂಟರ್ (ಆರ್‌ಡಬುಆರ್‌ಆಂಡ್‌ಡಿಸಿ) ಇದನ್ನು ಅಭಿವೃದ್ಧಿಪಡಿಸಿದೆ. ಮೊದಲ ಪ್ರೋಟೋಟೈಪ್ ಹೆಲಿಕಾಪ್ಟರ್ 2016ರ ಸೆ. 6ರಂದು ಹಾಗೂ ಪ್ರೋಟೋಟೈಪ್-2 2017ರ ಮೇ 22ರಂದು ಯಶಸ್ವಿಯಾಗಿ ಹಾರಾಟ ನಡೆಸಿತ್ತು.
ಪರೀಕ್ಷೆ ನಂತರ ಮಾತನಾಡಿದ ಎಚ್‌ಎಎಲ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಮಾಧವನ್, “ಈ ಯಶಸ್ವಿ ಪರೀಕ್ಷೆ ನಂತರ ಲಘು ಬಳಕೆ ಹೆಲಿಕಾಪ್ಟರ್ ಉತ್ಪಾದನೆಗೆ ಅನುಮತಿ ಸಿಗುವ ಕಾಲ ಸನ್ನಿಹಿತವಾದಂತಾಗಿದೆ. ಜತೆಗೆ ಸೈನ್ಯದ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಆತ್ಮವಿಶ್ವಾಸವೂ ಹೆಚ್ಚಿದೆ ಎಂದರು.