ಸಿಯೋಲ್ : ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಹ್ಯಾಲೋವಿನ್ ಉತ್ಸವ ಆಚರಣೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 149 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಜನರು ಗಾಯಗೊಂಡಿದ್ದಾರೆ.
ಉತ್ಸವ ನಡೆಯುತ್ತಿದ್ದ ಪ್ರದೇಶದ ಪಕ್ಕದಲ್ಲೇ ಕಿರಿದಾದ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾಗಿದ್ದರಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾಲ್ತುಳಿತದಿಂದಾಗಿ ಅನೇಕ ಜನರು ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ನಂತರ ಅವರಿಗೆ ಸಿಪಿಆರ್ ನೀಡಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಅಪಘಾತದಲ್ಲಿ ಒಟ್ಟು 46 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಧ್ಯಕ್ಷ ಯುನ್ ಸುಕ್-ಯೋಲ್ ತುರ್ತು ಸಭೆಯನ್ನು ಕರೆದಿದ್ದಾರೆ. ಇದಕ್ಕೂ ಮುನ್ನ, ಗಾಯಾಳುಗಳಿಗೆ ಶೀಘ್ರ ಚಿಕಿತ್ಸೆ ನೀಡುವಂತೆ ಮತ್ತು ಘಟನೆಯ ನಂತರ ಉತ್ಸವದ ಸ್ಥಳಗಳ ಭದ್ರತೆಯನ್ನು ಪರಿಶೀಲಿಸುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಕರೆ ನೀಡಿದ್ದರು. ಈ ಘಟನೆಯು ಸ್ಥಳೀಯ ಕಾಲಮಾನ ರಾತ್ರಿ 10.20 ರ ಸುಮಾರಿಗೆ ನಡೆದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಪತ್ರಕರ್ತರಿಗೆ ಉಡುಗೊರೆ: ಕಾಂಗ್ರೆಸ್-ಬಿಜೆಪಿ ವಾಕ್ಸಮರ