ಚಿತ್ರರಂಗವೆಂದರೆ ಹಾಗೆ, ಅದು ಎಲ್ಲಾ ಕ್ಷೇತ್ರದವರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತದೆ. ಡಾಕ್ಟರ್, ಇಂಜಿನಿಯರ್, ಅಡ್ವೋಕೆಟ್ಸ್, ಆಡಿಟರ್ಯಿಂದ ಹಿಡಿದು ಟೀಚರ್, ಆಟೋರಿಕ್ಷಾ ಡ್ರೈವರ್ವರೆಗೆ ಹಲವು ಕ್ಷೇತ್ರಗಳಲ್ಲಿರುವವರು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ ನೂರಾರು ಉದಾಹರಣೆಗಳು ಚಂದನವನದಲ್ಲಿ ಸಿಗುತ್ತವೆ. ಈಗ ಆ ಸಾಲಿಗೆ ಲೋಕೇಶ್ ಮಾಧು ಎನ್ನುವ ಹೆಚ್‌ಎಎಲ್ ಉದ್ಯೋಗಿಯೊಬ್ಬರು ಸೇರ್ಪಡೆಯಾಗುತ್ತಿದ್ದಾರೆ.
ಚಿತ್ರರಂಗದಲ್ಲಿ ನಿರ್ದೇಶಕನಾಗಬೇಕು, ಒಳ್ಳೆಯ ಸಿನಿಮಾ ನಿರ್ದೇಶಿಸಬೇಕು ಎಂಬ ಕನಸನ್ನು ಹೊತ್ತಿರುವ ಹೆಚ್‌ಎಎಲ್ ಉದ್ಯೋಗಿ ಲೋಕೇಶ್ ಮಾಧು, ಈಗ “ಹಾಲಕ್ಕಿ’ ಎನ್ನುವ ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಸದ್ದಿಲ್ಲದೆ ತಮ್ಮ ಚೊಚ್ಚಲ ಚಿತ್ರ “ಹಾಲಕ್ಕಿ’ಯ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಲೋಕೇಶ್ ಮಾಧು ಮತ್ತು ಚಿತ್ರತಂಡ, ಇತ್ತೀಚೆಗೆ ಚಿತ್ರದ ಆಡಿಯೋ ಮತ್ತು ಟೀಸರ್ ಅನ್ನು ಹೊರತಂದಿದೆ.
ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ನಟ ಅರ್ಜುನ್ ಗೌಡ, ನಿರ್ದೇಶಕ ಸಾಯಿ ಸಾಗರ್, ಉದ್ಯಮಿ ದೇವರಾಜ್, ಜಿ.ಪಂ ಅಧ್ಯಕ್ಷೆ ಜ್ಯೋತಿ ದೇವರಾಜ್, ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು “ಹಾಲಕ್ಕಿ’ ಚಿತ್ರದ ಆಡಿಯೋ ಮತ್ತು ಟೀಸರ್ ಹೊರತಂದರು.
ಇನ್ನು “ಹಾಲಕ್ಕಿ’ ಚಿತ್ರದಲ್ಲಿ ತಬಲ ನಾಣಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಬಹುತೇಕ ಹೊಸ ಕಲಾವಿದರು ಚಿತ್ರದ ಇತರೆ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಟ ತಬಲ ನಾಣಿ “ಹೆಸರೇ ಹೇಳುವಂತೆ ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ. ಹಳ್ಳಿಯ ಸೊಗಡು ಚಿತ್ರದಲ್ಲಿ ಎದ್ದು ಕಾಣುತ್ತದೆ. ಶಿಕ್ಷಣ, ಬದುಕು ಮತ್ತು ಯೋಚನೆಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ಕುತೂಹಲ ಕಾಯ್ದುಕೊಳ್ಳುವ ಉದ್ದೇಶದಿಂದ, ಚಿತ್ರದ ಬಗ್ಗೆ ಇದ್ದಕ್ಕಿಂತ ಹೆಚ್ಚೇನು ಹೇಳಲಾರೆ’ ಎಂದರು.
“ಸರ್ಕಾರ ಬಡತನ ನಿವಾರಣೆಗೆ, ಶಿಕ್ಷಣ ನೀಡಲು ಹಲವು ಯೋಜನೆಗಳನ್ನು ರೂಪಿಸುತ್ತ ಬಂದಿದೆ. ಆದರೆ ನಿಜವಾಗಿಯೂ ಸರ್ಕಾರದ ಈ ಎಲ್ಲ ಯೋಜನೆಗಳು ಎಷ್ಟರ ಮಟ್ಟಿಗೆ ಹಳ್ಳಿಗಳನ್ನು ತಲುಪಿದೆ ಎಂಬ ಅಂಶವನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಇಲ್ಲಿ ಬಡತನ, ಶಿಕ್ಷಣ, ಜೀವನ, ಹಳ್ಳಿಯ ವಾತಾವರಣ ಹೀಗೆ ಹಲವು ವಿಷಯಗಳಿವೆ. ಸುಮಾರು 8 ತಿಂಗಳು ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳಿಗೆ ಸಮಯ ತೆಗೆದುಕೊಂಡಿತು. ಶೀಘ್ರದಲ್ಲಿಯೇ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದ್ದೇವೆ’ ಎಂದರು.
“ಹಾಲಕ್ಕಿ’ ಚಿತ್ರದ ಶೀರ್ಷಿಕೆಗೆ “ನುಡಿತೈತೆ… ಹಸಿವು-ವಿದ್ಯೆ ನಡುವಿನ ಭವಿಷ್ಯ..!’ ಎಂಬ ಅಡಿಬರಹವಿದ್ದು, ಗಿರೀಶ್ ಮಾಧು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ರಾವ್ ಛಾಯಾಗ್ರಹಣವಿದೆ. “ಹಾಲಕ್ಕಿ’ಯ ಹಾಡುಗಳಿಗೆ ಎಸ್. ನಾಗು ಸಂಗೀತ ಸಂಯೋಜಿಸಿದ್ದಾರೆ. ಚಿತ್ರತಂಡದ ಪ್ಲಾನ್ ಪ್ರಕಾರ ಎಲ್ಲವೂ ನಡೆದರೆ ಇದೇ ವರ್ಷಾಂತ್ಯದೊಳಗೆ “ಹಾಲಕ್ಕಿ’ಯ ಭವಿಷ್ಯ ಏನಾಗಲಿದೆ ಅಂತ ಗೊತ್ತಾಗಲಿದೆ.