Advertisement

ಹಳಿಯಾಳ: ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ನಿರೀಕ್ಷೆಯಲ್ಲಿ ಕೃಷಿಕ

06:09 PM Sep 25, 2024 | Team Udayavani |

ಹಳಿಯಾಳ: ವಾಣಿಜ್ಯ ಕಬ್ಬಿನ ಬೆಳೆಗೆ ಪರ್ಯಾಯವಾಗಿ ಕ್ಷೇತ್ರದಲ್ಲಿ ಬೆಳೆಯಲಾಗಿರುವ ಮೆಕ್ಕೆಜೋಳ ಕಟಾವು ಕಾರ್ಯ ಆರಂಭವಾಗಿದೆ. ಆದರೆ ಪ್ರಸ್ತುತ ಜುಲೈನಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಇಳುವರಿ ಕುಂಠಿತವಾಗಿದೆ. ಜೂನ್‌ನಲ್ಲಿ ಭೂಮಿ ಹದಗೊಳಿಸಿ ಬಿತ್ತಲಾದ  ಮೆಕ್ಕೆಜೋಳ ಮೊದಲ ಹಂತದಲ್ಲಿ ಉತ್ತಮವಾಗಿ ಬೆಳೆದಿತ್ತು. ತದ ಬಳಿಕ ಜುಲೈನಲ್ಲಿ ಮೆಕ್ಕೆಜೋಳ ಹಂತ ಹಂತವಾಗಿ ತೆನೆ ಒಡೆದು ಕಾಳು ಕಟ್ಟುತ್ತದೆ. ಆದರೆ ಈ ಸಂದರ್ಭದಲ್ಲಿ ಭಾರಿ ಮಳೆಯಾದ ಪರಿಣಾಮ ಕಳೆ ನಿಯಂತ್ರಣ ಸಾಧ್ಯವಾಗಲಿಲ್ಲ. ಇದರಿಂದಾಗಿ ಇಳುವರಿ ಕುಂಠಿತವಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

Advertisement

ಸದ್ಯ ಮಳೆರಾಯ ಕೊಂಚ ಬಿಡುವು ನೀಡಿರುವುದರಿಂದ ಬೆಳೆ ಕಟಾವು ಮಾಡಿ ರಾಶಿ ಮಾಡುವ ಕೆಲಸದಲ್ಲಿ ರೈತರು ನಿರತರಾಗಿದ್ದಾರೆ. ಹಳಿಯಾಳ ಹಾಗೂ ದಾಂಡೇಲಿ ಸೇರಿದಂತೆ ಪ್ರಸ್ತುತ ವರ್ಷ 3500 ಹೆಕ್ಟೇರ್‌ ಅಂದರೆ 8750 ಎಕ್ಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. 110 ರಿಂದ 130 ದಿನಗಳ ಒಳಗೆ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಈ ಭಾಗದಲ್ಲಿ ಪ್ರತಿ ಎಕರೆ 12 ರಿಂದ 15 ಕ್ವಿಂಟಲ್‌ ಮೆಕ್ಕೆಜೋಳ ಬೆಳೆಯಲಾಗುತ್ತದೆ.

ಆದರೆ ಕಳೆ ನಿಯಂತ್ರಣದ ಕೊರತೆಯಿಂದಾಗಿ ಪ್ರಸ್ತುತ ವರ್ಷದಲ್ಲಿ ಇಳುವರಿ ಕುಂಟಿತಗೊಂಡಿದ್ದು, ಪ್ರತಿ ಎಕರೆಗೆ 10 ರಿಂದ 12 ಕ್ವಿಂಟಲ್‌ ಮೆಕ್ಕೆಜೋಳ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಕಟಾವು ಕಾರ್ಯ ಮಾತ್ರ ಆರಂಭಗೊಂಡಿದ್ದು,
ಖರೀದಿ ಕೇಂದ್ರಗಳು ಇನ್ನೂ ಆರಂಭವಾಗಿಲ್ಲ.

ಕಟಾವು ಮುಗಿದ ನಂತರ ಕನಿಷ್ಠ ಎಂಟು ದಿನ ಮೆಕ್ಕೆಜೋಳವನ್ನು ಬಿಸಿಲಿನಲ್ಲಿ ಒಣಗಿಸಿ ತದನಂತರ ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಪ್ರಸ್ತುತ ವರ್ಷದಲ್ಲಿ ಪ್ರತಿ ಕ್ವಿಂಟಾಲ್‌ ಮೆಕ್ಕೆಜೋಳಕ್ಕೆ 2500 ರಿಂದ 2600 ದರ ನಿಗದಿ ಆಗಬಹುದು ಎಂದು ವ್ಯಾಪಾರಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಬೆಲೆಗೆ ಹೋಲಿಸಿದರೆ ಪ್ರಸ್ತುತ ವರ್ಷದಲ್ಲಿ ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ 400 ರಿಂದ 500 ರೂ ದರ ಹೆಚ್ಚು ದೊರೆಯಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಐ
ಮಾನೆ ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್‌ ಮೂರನೇ ವಾರದ ನಂತರ ಆರಂಭ ವಾಗುವ ಮೆಕ್ಕೆಜೋಳ ಕಟಾವು ಕಾರ್ಯ ಅಕ್ಟೋಬರ್‌ ಅಂತ್ಯದವರೆಗೆ ಜರುಗುತ್ತದೆ. ಒಂದು ವೇಳೆ ಮಳೆ ಸುರಿದರೆ ಬಿಸಿಲಿನ ಕೊರತೆಯಿಂದಾಗಿ ಮೆಕ್ಕೆಜೋಳ ಒಣಗಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನವೆಂಬರ್‌ವರೆಗೂ ಕೆಲ ಸಂದರ್ಭ ಮೆಕ್ಕೆಜೋಳ ಕಟಾವು ಕಾರ್ಯವನ್ನು ರೈತರು ಮುಂದುವರಿಸುತ್ತಾರೆ.

Advertisement

ಒಣಗಿಸಲು ರಸ್ತೆಯೇ ಗತಿ
ಬೆಳೆ ಕಟಾವು ಮಾಡಿದ ನಂತರ ಸುಮಾರು ಒಂದು ವಾರ ಸಂಪೂರ್ಣ ಬಿಸಿಲಿನಲ್ಲಿ ಒಣಗಿಸಬೇಕಾಗುತ್ತದೆ. ಆದರೆ ಬಹುತೇಕ
ಗ್ರಾಮಗಳಲ್ಲಿ ಮೆಕ್ಕೆಜೋಳ ಒಣಗಿಸಲು ಸೂಕ್ತ ಪ್ರಾಂಗಣವಿಲ್ಲದ ಕಾರಣ ರಸ್ತೆ ಮೇಲೆ ಒಣಗಿಸಿ   ತದನಂತರ ಮಾರುಕಟ್ಟೆಗೆ ಸಾಗಿಸಬೇಕಾದ ಅನಿವಾರ್ಯತೆ ರೈತ ವರ್ಗಕ್ಕಿದೆ.

ತೂಕದಲ್ಲಿ ಮೋಸ!
ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ದಲ್ಲಾಳಿಗಳು ಖರೀದಿಸಿ ವಿವಿಧ ಸೀಡ್ಸ್‌ ತಯಾರಿಕಾ ಕಂಪೆನಿಗಳಿಗೆ ಮಾರಾಟ ಮಾಡುತ್ತಾರೆ. ಆದರೆ ದಲ್ಲಾಳಿಗಳು ರೈತರ ಕಣ್ಣಿಗೆ ಮಣ್ಣೆರಚಿ ತೂಕದಲ್ಲಿ ಮೋಸ ಮಾಡುತ್ತಾರೆ. ಇದರಿಂದಾಗಿ ರೈತರಿಗೆ ನಷ್ಟ
ಉಂಟಾಗುತ್ತದೆ ಎಂದು ಪ್ರಗತಿಪರ ಕೃಷಿಕ ಪುಂಡಲಿಕ ಗೋಡಿಮನಿ ಬೇಸರ ವ್ಯಕ್ತಪಡಿಸಿದ್ದಾರೆ.

■ ವಿನಾಯಕ ಮೇಟಿ

Advertisement

Udayavani is now on Telegram. Click here to join our channel and stay updated with the latest news.

Next